ಚಿಕ್ಕಬಳ್ಳಾಪುರ : ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರನ್ನು “ರೈತರ ಬದುಕನ್ನು ಕಟ್ಟಿಕೊಟ್ಟ ದೇವರು” ಎಂದರೆ ತಪ್ಪಾಗಲಾರದು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇ ಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ರವರ ೧೧೦ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಅರಸು ಅವರು ಭೂಸುಧಾರಣೆ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದು “ಉಳುವವನೇ ಭೂ ಒಡೆಯ” ಎಂಬ ಹಕ್ಕನ್ನು ನೀಡುವ ಮೂಲಕ ಸಾವಿರಾರು ರೈತರು ಭೂ ಮಾಲಿಕರಾಗುವಂತೆ ಮಾಡಿ ರೈತರ ಬದುಕು ಹಸನಾಗಲು ಕಾರಣೀಭೂತರಾಗಿದ್ದಾರೆ. ಮಲಹೋರುವ ಅನಿಷ್ಠ ಪದ್ಧತಿ ಯನ್ನು ನಿರ್ಮೂಲನೆ ಮಾಡಿದರು. ಅಂದಿನ ಮೈಸೂರು ರಾಜ್ಯ ಎಂಬ ಹೆಸರನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. ಒಟ್ಟಾರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ರಾಜಕಾರಣಿ ಅರಸು ಎಂದು ಬಣ್ಣಿಸಿದರು.
ಇದನ್ನೂ ಓದಿ: India-China Trade: ಭಾರತ- ಚೀನಾ ವ್ಯಾಪಾರ ಮತ್ತೆ ಪುನರಾರಂಭ; ರಸಗೊಬ್ಬರ, ಸುರಂಗ ಯಂತ್ರ ರಫ್ತಿಗೆ ಡ್ರಾಗನ್ ರಾಷ್ಟ್ರ ಒಪ್ಪಿಗೆ
ಸರ್ವಸಮುದಾಯದವರು ಶೈಕ್ಷಣಿಕವಾಗಿ ಮುಂದೆ ಬರಲಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳನ್ನು ಸ್ಥಾಪಿಸಿದರು. ಹಾವನೂರು ಆಯೋಗದ ವರದಿಯನ್ನು ಜಾರಿಗೊಳಿಸಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ ಕೊಟ್ಟರು. ಈ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜ್ಞಾನಾಧಾರಿತ ಸಮಾಜದ ನಿರ್ಮಾಣವಾಗುವ ದಿನಗಳು ದೂರವಿಲ್ಲ. ಅದರಿಂದ ಜ್ಞಾನವನ್ನು ಶಿಕ್ಷಣದ ಮೂಲಕ ಪಡೆಯ ಬೇಕು. ಶಿಕ್ಷಣದ ಜೊತೆ ಜೊತೆಗೆ ಕೌಶಲ್ಯವನ್ನು ಕಲಿಯಲು ಮುಂದಾಗಬೇಕು ಎಂದು ವಿದ್ಯಾರ್ಥಿ ಗಳಿಗೆ ಮಾತು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್ ಮಾತನಾಡಿ, ಉಳುವವನೇ ಭೂಮಿಯ ಒಡೆಯನೆಂದು ದೇವರಾಜ ಅರಸು ಅವರು ೧೯೭೨ ರಿಂದ ೧೯೭೭ ಅವಧಿಯಲ್ಲಿ ಕರ್ನಾಟಕ ಭೂ ಸುಧಾರಣೆಗಳ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದರು.

ಇದರಿಂದ ಪ್ರಬಲ ಜಮೀನ್ದಾರರು ಹಾಗೂ ಭೂ ಮಾಲೀಕರಿಂದ ಗೇಣಿದಾರರರಿಗೆ ಸಾಮಾಜಿಕ ನ್ಯಾಯ ದೊರೆಯಿತು. ಭೂಸುಧಾರಣೆಯಂತಹ ದಿಟ್ಟ ಆಡಳಿತ ಕ್ರಮ ಕೈಗೊಂಡು ರೈತರ ಬಾಳಲ್ಲಿ ಇಂದಿಗೂ ಸಹ ದೇವರಾಜ ಅರಸು ರವರು ಜೀವಂತ ನಾಯಕರಾಗಿದ್ದಾರೆ. ಎಲ್ಲರಿಗೂ ಸಮಾನತೆ ತಲುಪಲು ಶಿಕ್ಷಣ ಮತ್ತು ರಾಜಕೀಯ ಅಧಿಕಾರ ನೀಡಿದಾಗ ಮಾತ್ರ ಸಾಧ್ಯ ಎಂಬುದನ್ನು ಅರಿತ ಅರಸು ರವರು ಆ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಅನುಷ್ಠಾನ ಮಾಡಿದರು.
ಪ್ರಸ್ತುತದ ಆಡಳಿತದ ಕ್ರಮಗಳಲ್ಲಿ ಅರಸುರವರ ಕೊಡುಗೆಗಳೇ ಹೆಚ್ಚು. ವಿದ್ಯಾರ್ಥಿಗಳು ಅವರ ಪುಸ್ತಕಗಳನ್ನು ಓದಬೇಕು ಹಾಗೂ ಅವರ ಸಾಧನೆಗಳನ್ನು ಅರಿತು ಅವರ ವಿಚಾರಗಳನ್ನು ಜೀವನ ದಲ್ಲಿ ರೂಢಿಸಿಕೊಳ್ಳಬೇಕು ಇವರ ಜಯಂತಿ ಒಂದು ದಿನಕ್ಕೆ ಮತ್ತು ವರ್ಗಕ್ಕೆ ಸೀಮಿತ ಆಗಬಾರದು ಎಂದು ತಿಳಿಸಿದರು.
ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ನೆರವಾಗುವ ನಿರುದ್ಯೋಗಿ ಭತ್ಯೆ (ಸ್ಟೈಪಂಡರಿ) ಯೋಜನೆ ಯನ್ನು ಅರಸು ಅವರು ಜಾರಿಗೆ ತಂದರು, ಇಂದಿನ ಯುವನಿಧಿ ಯೋಜನೆಯು ಅದರ ಮುಂದು ವರೆದ ಭಾಗವಾಗಿದ್ದು, ಉದ್ಯೋಗಾಕಾಂಕ್ಷಿ ಪದವೀಧರರಿಗೆ ೩೦೦೦ ರೂ, ಡಿಪ್ಲೊಮೋ ಅಭ್ಯರ್ಥಿ ಗಳಿಗೆ ೧೫೦೦ ರೂ ನೀಡಲಾಗುತ್ತಿದೆ. ಅರಸುರವರ ದಾರಿಯನ್ನು ಇಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಅನುಸರಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಧಾನ ಭಾಷಣ ಮಾಡಿದ ಬಿ.ವಿ.ಪ್ರಕಾಶ್ ಮಾತನಾಡುತ್ತಾ, ಡಿ. ದೇವರಾಜ ಅರಸ್ ಅವರು ೨೦ ಆಗಸ್ಟ್ ೧೯೧೫ ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ೧೯೫೨ರಲ್ಲಿ ಮೊದಲ ಚುನಾವಣೆ ಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ರಾಜಕಾರಣಿಯಾದರು. ಅವರು ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಖ್ಯಾತರಾಗಿದ್ದಾರೆ,
ವಿಶೇಷವಾಗಿ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿಗಳ ಉನ್ನತಿಗಾಗಿ ತಮ್ಮ ಆಡಳಿತದಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಸ್ಥಾಪನೆಗೆ ಕಾರಣರಾದರು, ಇದು ಇಂದು ಭಾರತದ ಅತೀ ದೊಡ್ಡ ಐಟಿ ಕೇಂದ್ರವಾಗಿದೆ. ರಾಜ್ಯದ ಅಭಿವೃದ್ಧಿ ಪಥಕ್ಕೆ ಅವರ ದಿಟ್ಟ ಆಡಳಿತ ಕ್ರಮಗಳು ಸುಧಾರಣೆ ತಂದವು, ಜೀತಪದ್ಧತಿ, ಬಾಲ ಕಾರ್ಮಿಕ ಪದ್ಧತಿ, ಮಲಹೊರುವ ಪದ್ಧತಿಗಳನ್ನು ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆ ಮತ್ತು ವಸತಿ ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಅದ್ದೂರಿ ಮೆರವಣಿಗೆ
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಚಿಕ್ಕಬಳ್ಳಾಪುರ ನಗರದ ಜೈ ಭೀಮ್ ಹಾಸ್ಟೆಲ್ ನಿಂದ ಪ್ರಾರಂಭ ವಾದ ದೇವರಾಜ ಅರಸುರವರ ಅದ್ದೂರಿ ಪಲ್ಲಕ್ಕಿ ಮೆರವಣಿಗೆಯು ಬೃಹತ್ ಭಾವಚಿತ್ರ ಪ್ರದರ್ಶನ ಹಾಗೂ ಕಲಾತಂಡಗಳೊAದಿಗೆ ನಗರದ ಮುಖ್ಯಬೀದಿಗಳಲ್ಲಿ ಸಾಗಿ ಅಂಬೇಡ್ಕರ್ ಭವನ ತಲುಪಿತು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಅತಿಕ್ ಪಾಷಾ, ತಹಸೀಲ್ದಾರ್ ರಶ್ಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ ಮುನಿರತ್ನಮ್ಮ, ಪಶುಪಾಲನ ಇಲಾಖೆಯ ಉಪ ನಿರ್ದೇಶಕ ರಂಗಪ್ಪ, ಸಮುದಾಯದ ಮುಖಂಡ ವೆಂಕಟೇಶ್ ಹಾಗೂ ಜಿಲ್ಲೆಯ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.