India-China Trade: ಭಾರತ- ಚೀನಾ ವ್ಯಾಪಾರ ಮತ್ತೆ ಪುನರಾರಂಭ; ರಸಗೊಬ್ಬರ, ಸುರಂಗ ಯಂತ್ರ ರಫ್ತಿಗೆ ಡ್ರಾಗನ್ ರಾಷ್ಟ್ರ ಒಪ್ಪಿಗೆ
ಭಾರತದೊಂದಿಗೆ ನೆರೆಯ ಚೀನಾದ ಸಂಬಂಧ ಸುಧಾರಿಸುತ್ತಿರುವ ಸಂಕೇತವಾಗಿ, ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಅವರು 2 ದಿನಗಳ ಭಾರತ ಭೇಟಿ ಕೈಗೊಂಡಿದ್ದು, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಜತೆ ಮಾತುಕತೆ ನಡೆಸಿದ್ದಾರೆ.


ನವದೆಹಲಿ: ಭಾರತದೊಂದಿಗೆ ನೆರೆಯ ಚೀನಾದ ಸಂಬಂಧ ಸುಧಾರಿಸುತ್ತಿರುವ ಸಂಕೇತವಾಗಿ, ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಅವರು 2 ದಿನಗಳ ಭಾರತ ಭೇಟಿ ಕೈಗೊಂಡಿದ್ದು, ಭಾರತದ ವಿದೇಶಾಂಗ (India-China Trade) ಸಚಿವ ಎಸ್. ಜೈಶಂಕರ್ ಅವರ ಜತೆ ಮಾತುಕತೆ ನಡೆಸಿದ್ದಾರೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಭಾರತಕ್ಕೆ ರಸಗೊಬ್ಬರಗಳು, ಅಪರೂಪದ ಭೂಮಿಯ ಖನಿಜಗಳು ಮತ್ತು ಸುರಂಗ ಕೊರೆಯುವ ಯಂತ್ರಗಳ (ಟಿಬಿಎಂ) ನಿರ್ಣಾಯಕ ಪೂರೈಕೆಯನ್ನು ಪುನರಾರಂಭಿಸುವುದಾಗಿ ವಿದೇಶಾಂಗ ಸಚಿವ (ಇಎಎಂ) ಎಸ್. ಜೈಶಂಕರ್ ಅವರಿಗೆ ಭರವಸೆ ನೀಡಿದ್ದಾರೆ.
ಕಳೆದ ತಿಂಗಳು ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಚಿವ ವಾಂಗ್ ಯಿ ಅವರೊಂದಿಗೆ ಯೂರಿಯಾ, ಎನ್‌ಪಿಕೆ ಮತ್ತು ಡಿಎಪಿ, ಅಪರೂಪದ ಭೂಮಿಯ ಖನಿಜಗಳು ಮತ್ತು ಟಿಬಿಎಂ ಪೂರೈಕೆಯ ವಿಷಯವನ್ನು ವಿದೇಶಾಂಗ ಸಚಿವ ಜೈಶಂಕರ್ ಪ್ರಸ್ತಾಪಿಸಿದ್ದರು. ಇದೀಗ ಅದು ಮಾನ್ಯತೆ ಪಡೆದಿದ್ದು, ಚೀನಾ ಭಾರತಕ್ಕೆ ರಫ್ತು ಮಾಡಲು ಒಪ್ಪಿಗೆ ನೀಡಿದೆ. ಈ ಮಾತುಕತೆಯಲ್ಲಿ ಗಡಿ ಸಮಸ್ಯೆ ಕುರಿತು ಯಾವುದೇ ವಿಷಯ ಚರ್ಚೆಯಾಗಿಲ್ಲ. ಇಂದು ನಡೆಯುವ ವಿಶೇಷ ಪ್ರತಿನಿಧಿ ಮಟ್ಟದ ಸಂವಾದದ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರು 3,488 ಕಿ.ಮೀ. ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಪಡೆಗಳನ್ನು ಸಡಿಲಿಸುವ ಬಗ್ಗೆ ಗಮನಹರಿಸುವ ಮೂಲಕ ಅವುಗಳನ್ನು ಪ್ರತ್ಯೇಕವಾಗಿ ಚರ್ಚಿಸುವ ನಿರೀಕ್ಷೆಯಿದೆ.
ಚೀನಾ ಈ ಹಿಂದೆ ಸುಮಾರು ಒಂದು ವರ್ಷದ ಕಾಲ ಭಾರತೀಯ ಆಮದಿನ ಮೇಲೆ ನಿರ್ಬಂಧ ಹೇರಿತ್ತು. ಕೃಷಿಗಾಗಿ ಸುಮಾರು 30 ಪ್ರತಿಶತದಷ್ಟು ರಸಗೊಬ್ಬರಗಳನ್ನು, ಆಟೋ ಬಿಡಿಭಾಗಗಳಿಗೆ ಅಪರೂಪದ ಭೂಮಿಯನ್ನು ಮತ್ತು ರಸ್ತೆ ಮತ್ತು ನಗರ ಮೂಲಸೌಕರ್ಯ ಅಭಿವೃದ್ಧಿಗಾಗಿ ಸುರಂಗ ಕೊರೆಯುವ ಯಂತ್ರವನ್ನು ಚೀನಾ ಭಾರತಕ್ಕೆ ಪೂರೈಸುತ್ತದೆ.
ಈ ಸರಬರಾಜುಗಳ ಪುನರಾರಂಭವನ್ನು ದ್ವಿಪಕ್ಷೀಯ ಸಂಬಂಧಗಳಲ್ಲಿ ಮಹತ್ವದ ಪ್ರಗತಿಯೆಂದು ಪರಿಗಣಿಸಲಾಗುತ್ತಿದೆ. ವಾಂಗ್ ಯಿ ಅವರು ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ಈ ಸುದ್ದಿಯನ್ನೂ ಓದಿ: Border Trade: ಭಾರತ- ಚೀನಾ ಗಡಿಯಲ್ಲಿ ಮತ್ತೆ ವ್ಯಾಪಾರ ಆರಂಭ?
ಈ ಹಿಂದೆ ಚೀನಾ ಪ್ರವಾಸ ಕೈಗೊಂಡಿದ್ದ ಎಸ್ ಜೈಶಂಕರ್ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಗಡಿ ವಿವಾದ ಸೇರಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಾಗುತ್ತಿರುವ ಸುಧಾರಣೆಗಳ ಕುರಿತು ವಿವರಣೆ ನೀಡಿದ್ದರು. 2020ರ ಅರುಣಾಚಲ ಪ್ರದೇಶದ ಗಾಲ್ವಾನ್ ವ್ಯಾಲಿ ಸಂಘರ್ಷದ ಬಳಿಕ ಭಾರತೀಯ ವಿದೇಶಾಂಗ ಸಚಿವರ ಮೊದಲ ಚೀನಾ ಭೇಟಿ ಇದಾಗಿತ್ತು.