ಗೌರಿಬಿದನೂರು : ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸಂಘವು ಹಲವು ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಶ್ರೀ ಗೌರಿ ಕನ್ನಡ ಕಲಾ ಸಂಘದ ಅಧ್ಯಕ್ಷ ವಿ. ರವೀಂದ್ರನಾಥ್ ಹೇಳಿದರು.
ತಾಲೂಕಿನ ಕಾದಲವೇಣಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ಗೌರಿ ಕನ್ನಡ ಕಲಾ ಸಂಘದ ವತಿಯಿಂದ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ನಾವು ಗ್ರಾಮೀಣ ಭಾಗದವರು ಎಂಬ ಕೀಳಿರಿಮೆ ಬದಿಗೊತ್ತಿ, ಶ್ರದ್ಧೆಯಿಂದ ವ್ಯಾಸಂಗ ಮಾಡಿದಾಗ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದರು.
ಸರ್ಕಾರ, ಸರಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಪೂರಕ ವಾತಾವರಣವನ್ನು ನಿರ್ಮಾಣಮಾಡಿದ್ದು, ವಿದ್ಯಾರ್ಥಿಗಳ ಮೂಲ ಸೌಕರ್ಯಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರ ಜತೆಗೆ ಸಂಘ ಸಂಸ್ಥೆಗಳು ಸರಕಾರಿ ಶಾಲೆಗಳಿಗೆ ಸಹಕಾರ ನೀಡುತ್ತಿದ್ದು, ವಿದ್ಯಾರ್ಥಿಗಳು ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಗೌರಿ ಕನ್ನಡ ಕಲಾ ಸಂಘದ ಉಪಾಧ್ಯಕ್ಷ ಎಚ್.ಆರ್. ಗೋವಿಂದರಾಜು, ನಿವೃತ್ತ ಪ್ರೊ. ಕೆ. ರಾಮಾಂಜಿನೇಯುಲು, ಸದಸ್ಯರಾದ ಗೀತಾ ರವೀಂದ್ರನಾಥ್, ಡಾ. ಶ್ರೀಧರ್, ಉಮಾ, ಲಕ್ಷ್ಮಿ, ರಮೇಶ್ ಹಾಗೂ ಶಾಲೆಯ ಶಿಕ್ಷಕರು ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.