ಚಿಕ್ಕಬಳ್ಳಾಪುರ : ಇಂದಿನ ಮಕ್ಕಳೇ ನಾಳಿನ ಜವಾಬ್ದಾರಿ ನಾಗರೀಕರು ಆಗುವ ಕಾರಣ ಒಳ್ಳೆಯ ಶಿಕ್ಷಣ ನೀಡಬೇಕೆ ಹೊರತು ದುಡಿಮೆಗೆ ಕಳಿಸಬಾರದು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾ ಧೀಶೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ತಿಳಿಸಿದರು.
ನಗರದ ಬಾಪೂಜಿನಗರದಲ್ಲಿ ಜಿಲ್ಲಾ ಪಂಚಾಯಿತಿ,ಕಾರ್ಮಿಕ ಇಲಾಖೆ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು, ಕಾನೂನು ಅರಿವು ನೆರವು ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ನಿಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಯಾರಾದರೂ ಬಾಲ ಕಾರ್ಮಿಕರಿದ್ದರೆ ಕೂಡಲೇ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸಿ ಎಂದರು.
ಇದನ್ನೂ ಓದಿ: Chinthamani News: ಎಲ್ಲಿಯೂ ಕಾಣದ ರ‍್ಯಾಂಪ್ ವ್ಯವಸ್ಥೆ ; ಅಸಡ್ಡೆ ಪ್ರಶ್ನಿಸಿ ಮುಖಂಡ ಕಿರಣ್ ನಾಯಕ್ ಆಕ್ರೋಶ
ಬಾಲ ಕಾರ್ಮಿಕ ಪದ್ಧತಿ ಕಾನೂನಿನ ಪ್ರಕಾರ ಅಪರಾಧ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ರೀತಿಯ ದುಡಿಮೆಯಲ್ಲಿ ತೂಡಗಿಸಿಕೊಂಡರೆ ದಂಡ ವಿಧಿಸುವ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಬಾಲ ಕಾರ್ಮಿಕರು ಕಂಡು ಬಂದಲ್ಲಿ ಸಂಭಂದಪಟ್ಟ ಇಲಾಖೆ ಗಮನಕ್ಕೆ ಅಥವಾ 1098 ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಬಹುದು.
ಇನ್ನೂ ಕಡ್ಡಾಯ ಶಿಕ್ಷಣಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಬಡತನದ ನೆಪದಲ್ಲಿ ಯಾರು ಕೂಡ ತಮ್ಮ ಮಕ್ಕಳನ್ನು ದುಡಿಮೆಗೆ ಕಳಿಸಬಾರದು. ಬಾಲ ಕಾರ್ಮಿಕರು ಕಂಡು ಬಂದಲ್ಲಿ ಕಾನೂನಿನ ಪ್ರಕಾರ ಶಿಕ್ಷೆ ತಪ್ಪಿದ್ದಲ್ಲ. ನೈರ್ಮಲ್ಯ ಕಾಪಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ನಿಮ್ಮ ಸುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯತೆ ಹೆಚ್ಚಿನ ಒತ್ತು ನೀಡಿ ಆರೋಗ್ಯಕರ ಸಮಾಜಕ್ಕೆ ಕೈಜೋಡಿಸಬೇಕೆಂದರು.
ಪ್ಯಾನಲ್ ವಕೀಲ ಎಂ.ಎಸ್.ಸಂದೀಪ್ ಚಕ್ರವರ್ತಿ ಮಾತನಾಡಿ, ಭಾರತದಲ್ಲಿ ಬಡತನ ಅನಕ್ಷರತೆ ಯಿಂದ ತಮ್ಮ ಜೀವನ ಸಾಗಿಸಲು ಅನಿವಾರ್ಯವಾಗಿ ಪಾಲಕರು ತಮ್ಮ ಜೊತೆಗೆ ತಮ್ಮ ಮಕ್ಕಳು ದುಡಿಮೆ ಕರೆದುಕೊಂಡು ಹೋಗುತ್ತಿದ್ದಾರೆ. ಪಾಲಕರೇ ಚಿಂತನೆ ಮಾಡಿ, ಮಕ್ಕಳ ದುಡಿಮೆ ನಿಲ್ಲಿಸ ಬೇಕು.
1986ರಲ್ಲಿ ಬಾಲಕಾರ್ಮಿಕ ವಿರೋಧಿ ಅಧಿನಿಯಮ ಜಾರಿಗೆ ಬಂದಿದ್ದು, ಇದರ ಪ್ರಕಾರ 14 ವರ್ಷದೊಳಗಿನ ಮಕ್ಕಳನ್ನು ಬಾಲ ಕಾರ್ಮಿಕರಾಗಿ ನೇಮಿಸಿಕೊಂಡ ಮಾಲೀಕರಿಗೆ ದಂಡ ಮತ್ತು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರು ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಡಿಮೆ ಯಾಗಿದ್ದು ಇದೊಂದು ಸಮಾಧಾನಕರ ತಂದಿದೆ ಆದರೂ ಇನ್ನೂ ಅಲ್ಲಲ್ಲಿ ಬಾಲಕಾರನ್ನು ದುಡಿಸಿ ಕೊಳ್ಳುತ್ತಿರುವುದು ನಡೆಯುತ್ತಿದೆ ಇದು ಅಪರಾಧ ಎಂಬುದನ್ನ ಪ್ರತಿಯೊಬ್ಬರು ಅರಿಯಬೇಕು ಎಂದರು.
ಕಾರ್ಮಿಕ ನಿರೀಕ್ಷಕಿ ಎಂ.ಮಂಜುಳಾ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ)ತಿದ್ದುಪಡಿ ಕಾಯ್ದೆ 2016 ರಂತೆ 14 ವರ್ಷದೊಳಗಿನ ಮಕ್ಕಳ ದುಡಿಮೆ ಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯ ಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ.ಒಂದು ವೇಳೆ ದುಡಿಸಿಕೊಂಡಲ್ಲಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.
ಈ ವೇಳೆ ನಗರಸಭೆ ಸದಸ್ಯೆ ಅಣ್ಣಮ್ಮ, ವಕೀಲರುಗಳಾದ ವಂದನ, ಸರಳ, ನಜಿಮಾ ತಬ್ಜಮ್, ನರಸಿಂಹಮೂರ್ತಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಮೇಶ್, ಮತ್ತಿತರರು ಇದ್ದರು.