ಚಿಕ್ಕಬಳ್ಳಾಪುರ: ಬದಲಾದ ಜೀವನಶೈಲಿಯಿಂದಾಗಿ ಮಧುಮೇಹ ಮತ್ತು ಬೊಜ್ಜು ಮುಂತಾದ ಕಾಯಿಲೆಗಳು ಮನುಷ್ಯನ ಸಾವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರಣವಾಗುವ ಸಾಧ್ಯತೆಯಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಆತಂಕ ವ್ಯಕ್ತಪಡಿಸಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ' ದ 28ನೇ ದಿನವಾದ ಶುಕ್ರವಾರ ಐಎಪಿಎಸ್ಎಂ-ಕರ್ಕಾನ್ 2025 ಕರ್ನಾಟಕ ಚಾಪ್ಟರ್‌ನ 5ನೇ ಸಮಾವೇಶಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿ ಚಾಲನೆ ನೀಡಿದರು.
ದೇಶದ ಉತ್ಪಾದಕತೆಯನ್ನು ಹೆಚ್ಚಿಸಬೇಕಾದರೆ ಯುವಜನರು ಆರೋಗ್ಯವಾಗಿರಬೇಕು. ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಬೇಕು. ಇದು ಉತ್ಪಾದನೆಗೆ ಉತ್ತೇಜನ ನೀಡುತ್ತದೆ. ಆಯುರ್ವೇದವು ಕೇವಲ ದೈಹಿಕ ಸಮಸ್ಯೆಯಗಳನ್ನಷ್ಟೇ ಪರಿಹರಿಸುವುದಿಲ್ಲ. ಅದು ಮಾನಸಿಕ ಮತ್ತು ಆಧ್ಯಾತ್ಮಿಕ ಆಯಾಮವನ್ನೂ ಒಳಗೊಂಡಿದೆ ಎಂದರು. ಜನರ ಉತ್ಪಾದಕತೆ ಕಡಿಮೆಯಾದರೆ ದೇಶದ ಜಿಡಿಪಿಯು ಶೇ 1 ರಿಂದ 2 ರಷ್ಟು ಕುಸಿಯಬಹುದು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿವೆ ಎಂದು ವಿವರಿಸಿದರು.
ಮೈಸೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಸಹಾಯಕ ಪ್ರೊಫೆಸರ್ ಡಾ ಸುಮಂತ್ ಅವರಿಗೆ 'ಯುವ ವಿಜ್ಞಾನಿ' ಪುರಸ್ಕಾರ, ನಿಮ್ಹಾನ್ಸ್ ನ ಮಾಜಿ ನಿರ್ದೇಶಕರಾದ ಡಾ ಗೋಪಾಲಕೃಷ್ಣ ಗುರುರಾಜು ಅವರಿಗೆ 'ಭಗವಾನ್ ಸತ್ಯ ಸಾಯಿ ಬಾಬಾ ಮೆಮೋರಿಯಲ್ ಒರೇಷನ್' ಪುರಸ್ಕಾರ ಹಾಗೂ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರೊಫೆಸರ್ ಅಣ್ಣಾರಾವ್ ಜಿ ಕುಲಕರ್ಣಿ ಅವರಿಗೆ 'ಜೀವಮಾನ ಸಾಧನೆ' ಪುರಸ್ಕಾರ ನೀಡಿ ಗೌರವಿಸಲಾಯಿತು.

ಸತ್ಯ ಸಾಯಿ ಹೆಲ್ತ್ ಕೇರ್ ಮಿಷನ್ ಗೆ ಬೆಂಬಲ ನೀಡುತ್ತಿರುವ ಕೆಬಿಆರ್ ಇನ್ಫ್ರಾಟೆಕ್ ಕಂಪನಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೆಬಿಆರ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಕೆ.ಬಾಬು ರಾಜು ಮತ್ತು ಬಿ.ಜಿ. ಪಾಟೀಲ್ ಪ್ರಶಸ್ತಿ ಸ್ವೀಕರಿಸಿದರು.
ಭಾರತಕ್ಕೆ ಬುರುಂಡಿ ದೇಶದ ರಾಯಭಾರಿ ಅಲಾಯ್ಸ್ ಬಿಜಿಂದಾವಿ (Aloys Bizindavyi), ದಕ್ಷಿಣ ಆಫ್ರಿಕಾಗೆ ಬುರುಂಡಿ ರಾಯಭಾರಿ ಅಲೆಕ್ಸಿಸ್ ಬುಕುರು (Alexis Bukuru) ಸೇರಿದಂತೆ ಬುರುಂಡಿ ದೇಶದ ಪ್ರತಿನಿಧಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನ್ಯಾಷನಲ್ ಹೆಲ್ತ್ ಸಿಸ್ಟಮ್ ರಿಸೋರ್ಸ್ ಸೆಂಟರ್‍ನ ಕಾರ್ಯಕಾರಿ ನಿರ್ದೇಶಕ ಮೇಜರ್ ಜನರಲ್ ಪ್ರೊ ಅತುಲ್ ಕೊತ್ವಾಲ್, ಕರ್ನಾಟಕ ಅಸೋಸಿಯೆಷನ್ ಆಫ್ ಪ್ರೆವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್‌ನ ಕಾರ್ಯದರ್ಶಿ ಡಾ ಸುನೀಲ್ ಕುಮಾರ್, ಐಎಪಿಎಸ್ಎಂ ಕರ್ನಾಟಕ ಚಾಪ್ಟರ್‌ನ ಆಡಳಿತ ಮಂಡಳಿಯ ಸದಸ್ಯರಾದ ಡಾ ದೀಪಾ, ಬೆಂಗಳೂರಿನ ಎನ್ನಪೋಯಾ ಮೆಡಿಕಲ್ ಕಾಲೇಜಿನ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಪ್ರೊಫೆಸರ್ ಡಾ ಪೂನಂ ನಾಯ್ಕ ಮತ್ತಿತರರು ಭಾಗವಹಿಸಿದ್ದರು.