Chikkaballapur News: ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ : ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ರಾಜ್ಯಾದ್ಯಂತ ಏಕ ಕಾಲದಲ್ಲಿ ಸೆಪ್ಟೆಂಬರ್ ೧೫ ರಿಂದ ಸಮೀಕ್ಷೆ ಪ್ರಾರಂಭಿಸುತ್ತಿದ್ದು, (ಸರ್ಕಾರಿ ರಜೆ ಯನ್ನು ಹೊರತು ಪಡಿಸಿ) ೪೫ ದಿನಗಳ ಕಾಲ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಲಿಂಗತ್ವ ಅಲ್ಪ ಸಂಖ್ಯಾತ ಸಮುದಾಯದವರೇ ಸಮೀಕ್ಷೆ ಕಾರ್ಯ ಮಾಡುತ್ತಿರುವುದು ಈ ಸಮೀಕ್ಷೆಯ ವಿಶೇಷತೆ ಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಮುದಾಯ ಆಧಾರಿತ ನಿಸರ್ಗ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯದವರನ್ನೇ ಸಮೀಕ್ಷೆದಾರರನ್ನಾಗಿ ಆಯ್ಕೆ ಮಾಡಲಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು. -

ಚಿಕ್ಕಬಳ್ಳಾಪುರ : ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ನಗರಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಮೀಕ್ಷೆ ಕುರಿತು ಪೋಸ್ಟರ್ ಗಳನ್ನು ಮತ್ತು ಸಮೀಕ್ಷಾ ಟ್ಯಾಬ್ ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೈಗೊಳ್ಳಲಾಗುತ್ತಿದ್ದು, ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಮುಂದಿನ ದಿನಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಯೋಜನೆಗಳನ್ನು ಸೂಕ್ತ ರೀತಿಯಲ್ಲಿ ತಲುಪಿಸಲು ಸಮೀಕ್ಷೆಯು ಅವಶ್ಯಕವಾಗಿದೆ ಎಂದರು.
ಇದನ್ನೂ ಓದಿ: Roopa Gururaj Column: ಬದುಕಿನಲ್ಲಿ ಸದಾ ಉಳಿಯುವ ʼರಾಮನಾಮʼ
ರಾಜ್ಯಾದ್ಯಂತ ಏಕ ಕಾಲದಲ್ಲಿ ಸೆಪ್ಟೆಂಬರ್ ೧೫ ರಿಂದ ಸಮೀಕ್ಷೆ ಪ್ರಾರಂಭಿಸುತ್ತಿದ್ದು, (ಸರ್ಕಾರಿ ರಜೆಯನ್ನು ಹೊರತು ಪಡಿಸಿ) ೪೫ ದಿನಗಳ ಕಾಲ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರೇ ಸಮೀಕ್ಷೆ ಕಾರ್ಯ ಮಾಡುತ್ತಿರುವುದು ಈ ಸಮೀಕ್ಷೆಯ ವಿಶೇಷತೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಮುದಾಯ ಆಧಾರಿತ ನಿಸರ್ಗ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯದವರನ್ನೇ ಸಮೀಕ್ಷೆದಾರರನ್ನಾಗಿ ಆಯ್ಕೆ ಮಾಡಲಾಗಿದೆ. ಸಮೀಕ್ಷೆದಾರರಿಗೆ ವಿವಿಧ ಹಂತದ ತರಬೇತಿಯನ್ನು ಈಗಾಗಲೇ ನೀಡಲಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತರು ಯಾವುದೇ ಮುಜುಗರಕ್ಕೆ ಒಳಗಾಗದೆ ಮುಕ್ತವಾಗಿ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಸಮೀಕ್ಷೆ ಕಾರ್ಯವನ್ನು, ಮೊಬೈಲ್ ಆಫ್ ಕರ್ಮಣಿ ವೆಬ್ ಅಪ್ಲಿಕೇಷನ್ ಮೂಲಕ ಟ್ಯಾಬ್ ಗಳಲ್ಲಿ ಸುಮಾರು ೧೫೦ ಪ್ರಶ್ನಾವಳಿಯನ್ನು ಕೇಳುವ ಮೂಲಕ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, ಜಿಲ್ಲೆಯ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಮೀಕ್ಷೆಗೆ ಒಂದು ಕೊಠಡಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ತಮ್ಮ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ತೆರಳಿ ಸಮೀಕ್ಷೆಯಲ್ಲಿ ತಪ್ಪದೆ ಭಾಗವಹಿಸಲು ಅರಿವು ಕಾರ್ಯಕ್ರಮಗಳನ್ನು ಮಾಡಲಾಗಿರುತ್ತದೆ ಎಂದರು.
ಹೆಚ್ಚಿನ ಪ್ರಚಾರಕ್ಕಾಗಿ ಮಹಿಳಾ ಅಭಿವೃದ್ಧಿ ನಿಗಮದಿಂದ ಮಾಹಿತಿ ಶಿಕ್ಷಣ ಹಾಗೂ ಸಂವಹನಕ್ಕೆ ಸಂಬಂಧಿಸಿದಂತೆ ಪೋಸ್ಟರ್ ಹಾಗೂ ಹೋರ್ಡಿಂಗ್ ತಯಾರಿಸಿ ನೀಡಿದ್ದು ಜಿಲ್ಲೆ ಮತ್ತು ತಾಲ್ಲೂಕು ಗಳಲ್ಲಿ ಸಾರ್ವಜನಿಕ ಸ್ಥಳಗಳಾದ ಬಸ್ ಹಾಗೂ ರೈಲ್ವೇ ನಿಲ್ದಾಣ, ಆಸ್ಪತ್ರೆ ಆವರಣ, ಮಾರುಕಟ್ಟೆ ಪ್ರದೇಶ, ಕಾಲೇಜು ಆವರಣ, ತಾಲ್ಲೂಕು ಕಚೇರಿ ಸ್ಥಳಗಳಲ್ಲಿ ಹಾಕಲಾಗಿದೆ. ವ್ಯಾಪಕ ಪ್ರಚಾರವನ್ನು ವಿವಿಧ ಮಾಧ್ಯಮ ಸಂಸ್ಥೆಗಳ ಮೂಲಕ ಕೈಗೊಳ್ಳಲಾಗುತ್ತಿದೆ ಹಾಗೂ ಸಮೀಕ್ಷೆ ಕುರಿತು ಮಾಹಿತಿ ಗಾಗಿ ಸಹಾಯವಾಣಿ ಸಂಖ್ಯೆ ೧೮೦೦ ೫೯೯ ೨೦೨೫ ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆ, ಚಿಕ್ಕಬಳ್ಳಾಪುರ ಇವರನ್ನು ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಮಹಿಳಾ ಅಭಿವೃದ್ಧಿ ನಿರೀಕ್ಷಕಿ ಶೋಭಾ, ನಿಸರ್ಗ ಸಂಸ್ಥೆಯ ವ್ಯವಸ್ಥಾಪಕರು, ಪದಾಧಿಕಾರಿಗಳು, ಲಿಂಗತ್ವ ಅಲ್ಪಸಂಖ್ಯಾತರು ಉಪಸ್ಥಿತರಿದ್ದರು.