ಚಿಕ್ಕಮಗಳೂರು, ಏ.04: ಮನೆಯಲ್ಲಿ ಮದುವೆ ಮಾಡಲಿಲ್ಲ, ಮದುವೆಗೆ (Marriage) ಹೆಣ್ಣು ಸಿಗಲಿಲ್ಲ ಅಂತ ಮನನೊಂದು 26 ವರ್ಷದ ಕುರಿಗಾಹಿ ಯುವಕ ತೆಂಗಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self harming) ಶರಣಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಡೂರು (Kaduru) ತಾಲೂಕಿನ ಯಗಟಿ ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಕುಮಾರ್ ಎಂದು ಗುರುತಿಸಲಾಗಿದೆ. ಮೃತ ಕುಮಾರ್ ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ಮೂಲದ ಯುವಕ. ತನ್ನ ಪೋಷಕರ ಜೊತೆ ಶಿರಾದಿಂದ ಬಂದು ಕಡೂರು ತಾಲೂಕಿನ ಬಾಸೂರು ಬಳಿ ವಾಸವಿದ್ದ. ಹಳ್ಳಿ-ಹಳ್ಳಿಗಳಿಗೆ ಹೋಗಿ ತೋಟದಲ್ಲಿ ಗೊಬ್ಬರಕ್ಕಾಗಿ ಕುರಿಮಂದೆಯನ್ನು ತೋಟದೊಳಗೆ ನಿಲ್ಲಿಸಿ ಹಣ ಪಡೆಯುತ್ತಿದ್ದರು.
ಮೃತ ಕುಮಾರ್ ಪೋಷಕರಿಗೆ ಮೂವರು ಗಂಡು ಮಕ್ಕಳು. ಯಾರಿಗೂ ಮದುವೆಯಾಗಿಲ್ಲ. ಮೃತ ಕುಮಾರ್ ಪೋಷಕರ ಬಳಿ ಮದುವೆ ಮಾಡುವಂತೆ ಕೇಳುತ್ತಿದ್ದ. ಆದರೆ, ಪೋಷಕರು ನಿನ್ನ ಅಣ್ಣಂದಿರಿಗೆ ಮದುವೆಗೆ ಆಗಿಲ್ಲ. ಹುಡುಗಿ ಸಿಗುತ್ತಿಲ್ಲ. ಅವರಿಗೆ ಆದ ಮೇಲೆ ನಿನಗೆ ಮಾಡುತ್ತೇವೆ. ಇಲ್ಲ ಅವನ ಜೊತೆಯೇ ಒಟ್ಟಿಗೆ ಮದುವೆ ಮಾಡುತ್ತೇವೆ ಎಂದಿದ್ದರು.
ಅದೇ ಬೇಸರದಲ್ಲಿ ಕುಮಾರ್ ಮದ್ಯ ಸೇವಿಸುತ್ತಿದ್ದ, ಬಳಿಕ ಮನನೊಂದು ತೆಂಗಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಯಗಟಿ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ವಿದ್ಯುತ್ ಪ್ರವಹಿಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಹಾವೇರಿ : ಹಾವೇರಿಯಲ್ಲಿ ಘೋರವಾದ ದುರಂತವೊಂದು ಸಂಭವಿಸಿದೆ. ವಿದ್ಯುತ್ ಪ್ರವಹಿಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಿಡೆನ್ನೂರಲ್ಲಿ ನಡೆದಿದೆ. ವಿದ್ಯುತ್ ಪ್ರವಹಿಸಿ ಅಭಿಷೇಕ ತೆವರಿ (22) ಎನ್ನುವ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವನಪ್ಪಿದ್ದಾನೆ. ಹೊಸ ಮನೆಯಲ್ಲಿ ಫ್ಯಾನ್ ಅಳವಡಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.