ಚಿಕ್ಕಮಗಳೂರು: "ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾಟಕ ಇಂದಿರಾಗಾಂಧಿ ಭಾವನೆಯಂತೆ ತುರ್ತು ಪರಿಸ್ಥಿತಿಯ ಹಂತಕ್ಕೆ ತಲುಪಿದೆ" ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತೀಕ್ಷ್ಣವಾಗಿ ಹೇಳಿದರು. ಶ್ರೀ ರೇಣುಕಾಚಾರ್ಯ ಜಯಂತಿ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಸಚಿವರು, ರಾಜ್ಯ ಕಾಂಗ್ರೆಸ್ ಸರ್ಕಾರ ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ಒಂದು ಮೈದಾನದಲ್ಲೂ ಪ್ರತಿಭಟನೆಗೆ ಪರ್ಮಿಶನ್ ಕೊಟ್ಟಿಲ್ಲ. ಇದು ಇಂದಿರಾಗಾಂಧಿ ಅವರ ಎಮರ್ಜೆನ್ಸಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಒಂದು ಮೈದಾನದಲ್ಲೂ ಹೋರಾಟಕ್ಕೆ ಅನುಮತಿ ನೀಡುವುದಿಲ್ಲ ಎಂದರೆ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಅದ್ಯಾವ ದಿಕ್ಕಿಗೆ ಕೊಂಡೊಯ್ಯುತ್ತಿದೆ? ಎಂದು ಹರಿಹಾಯ್ದ ಸಚಿವರು, ಜನರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ಸಾಮಾನ್ಯ ಜನರ ಸಮಸ್ಯೆ ಪರಿಹರಿಸಬೇಕು ಎಂಬ ಸ್ವಭಾವವೇ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಟೀಕಿಸಿದರು.
ಸುಳ್ಳು ಹೇಳುವಲ್ಲಿ ನಿಸ್ಸೀಮ ಸರ್ಕಾರ
ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. '53 ಸಾವಿರ ಹುದ್ದೆ ಭರ್ತಿ'ಗೆ ಕರೆದಿದ್ದೇವೆ ಎನ್ನುತ್ತಾರೆ. ಆದರೆ ಇಲ್ಲಿ? ಯಾವ ಹುದ್ದೆಗೆ? ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ಆರೋಪಿಸಿದರು.
ಧಾರವಾಡದಲ್ಲಿ ವಿದ್ಯಾರ್ಥಿಗಳ ಹೋರಾಟಕ್ಕೆ ಅನುಮತಿ ಕೊಟ್ಟಿಲ್ಲ. ಇನ್ನು, ಈ ಭಾಗದಲ್ಲಿ ಆನೆ ತುಳಿದು ಮೃತಪಟ್ಟರೆ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆಗೆ ಇಳಿದವರ ಮೇಲೆ ಲಾಠಿ ಪ್ರಹಾರ ಮಾಡುತ್ತಾರೆ. ಇದನ್ನೆಲ್ಲಾ ನೋಡಿದರೆ ಈ ಸರ್ಕಾರ ಹೋರಾಟ ಹತ್ತಿಕ್ಕುವ ಇಂದಿರಾಗಾಂಧಿ ಮನಸ್ಥಿತಿಯಲ್ಲೇ ಇರುವುದು ಸ್ಪಷ್ಟವಾಗಿದೆ ಎಂದು ಸಚಿವರು ಕಿಡಿ ಕಾರಿದರು.
ಮುಸ್ಲಿಂ ಲೀಗ್ ಸ್ಥಾನ ತುಂಬುತ್ತಿದೆ ಕಾಂಗ್ರೆಸ್
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಕೋಮು ಸಂಘರ್ಷ ಉಂಟಾಗುತ್ತಿದೆ. ಏಕೆಂದರೆ ಪಾಕಿಸ್ತಾನಿ ಬೆಂಬಲಿತ ಇಸ್ಲಾಮಿಕ್ ಮತಾಂಧರಿಗೆ 'ಕಾಂಗ್ರೆಸ್ ಬಂದರೆ ಹಬ್ಬ. ತಮ್ಮ ಮುಸ್ಲಿಂ ಲೀಗ್ ಸರ್ಕಾರ ಬಂದಂತೆ" ಎಂಬಷ್ಟು ಸಂಭ್ರಮ. ಹಾಗಾಗಿ ತಾವೇನೇ ಮಾಡಿದರೂ ರಕ್ಷಣೆಗೆ ತಮ್ಮ ಸರ್ಕಾರವಿದೆ ಎಂಬ ಭಾವನೆ ಇರುವುದರಿಂದ ಕೋಮು ಸಂಘರ್ಷಕ್ಕೆ ದಾರಿಯಾಗುತ್ತಿದೆ. ದೇಶದಲ್ಲೇ ಕಾಂಗ್ರೆಸ್ ಮುಸ್ಲಿಂ ಲೀಗ್ ಸ್ಥಾನವನ್ನು ತುಂಬುತ್ತಿದೆ ಎಂದು ಜೋಶಿ ಆರೋಪಿಸಿದರು.
ಜಗತ್ತಿನ ಮುಂದೆ ಕಾಂಗ್ರೆಸ್ ಬೆತ್ತಲು; "ದೆಹಲಿಯಲ್ಲಿ ಅರೆಬೆತ್ತಲೆ ಪ್ರದರ್ಶನ ಮಾಡಿದ ಕಾಂಗ್ರೆಸ್ ದೇಶದ ಮುಂದೆ, ಜಗತ್ತಿನ ಮುಂದೆ ತಾನೇ ಬೆತ್ತಲಾಗುತ್ತಿದೆ. ಕಾಂಗ್ರೆಸ್ ಮನಸ್ಥಿತಿಯೇ ಬೆತ್ತಲೆಯಾಗಿದೆ. ತಾವೇನು ಮಾಡುತ್ತಿದ್ದೇವೆ? ದೇಶಕ್ಕೆ, ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೇವೆ? ಎಂಬ ಪರಿವೇ ಇಲ್ಲದಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಸನಾತನ ಧರ್ಮ ರಕ್ಷಣೆಗಿರುವವರ ಬೆಂಬಲಕ್ಕಿದೆ ಕೇಂದ್ರ
ವೀರಶೈವ ಮಾತ್ರವಲ್ಲದೆ, ಇಡೀ ಮನುಕುಲಕ್ಕೆ ಶ್ರೀ ರೇಣುಕಾಚಾರ್ಯರ ಕೊಡುಗೆ ಅನನ್ಯವಾಗಿದೆ. ವೀರಶೈವ ಪಂಚ ಪೀಠಗಳ ಧಾರ್ಮಿಕ ಕಾರ್ಯಕ್ರಮಗಳೇ ಇದಕ್ಕೆ ಸಾಕ್ಷಿ. ಈ ಪಂಚ ಪೀಠಗಳು ಸನಾತನ ಧರ್ಮ ರಕ್ಷಣೆ ಕಾರ್ಯದಲ್ಲಿ ತೊಡಗಿವೆ. ಸನಾತನ ಧರ್ಮ, ಸಂಸ್ಕೃತಿ ರಕ್ಷಣೆ ಮಾಡುವವರ ಬೆಂಬಲಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸದಾ ನಿಲ್ಲುತ್ತದೆ ಎಂದು ಹೇಳಿದರು.
ಹುಬ್ಬಳ್ಳಿಯ ಕೆಎಸ್ಸಿಎ ಮೈದಾನದ ಪೆವಿಲಿಯನ್ಗೆ ಸುನೀಲ್ ಜೋಶಿ ಹೆಸರು ನಾಮಕರಣ
ಸನಾತನ ಧರ್ಮವನ್ನು ಮುಗಿಸಬೇಕು ಎನ್ನುತ್ತಿರುವವರ ಮಧ್ಯೆ ಮಠ ಮಾನ್ಯಗಳು, ಮಠಾಧೀಶರು ನಮ್ಮ ಸನಾತನ ಧರ್ಮಾಧಾರಿತ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು. ಈ ಮೂಲಕ ಸಮಾಜ ಮತ್ತು ಧಾರ್ಮಿಕ ಜಾಗೃತಿ ಮೂಡಿಸಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಇದೇ ವೇಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರಮುಖರಿದ್ದರು.