ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ (sringeri assembly election) ಚಲಾವಣೆಯಾಗಿರುವ 1,811 ಅಂಚೆ ಮತಗಳ ಪೈಕಿ ತಿರಸ್ಕೃತಗೊಂಡಿರುವ 279 ಅಂಚೆ ಮತಗಳನ್ನು ಚುನಾವಣಾ ಆಯೋಗವು ಮರು ಪರಿಶೀಲಿಸಿ, ಮರು ಎಣಿಕೆ ಮಾಡುವ ಮೂಲಕ ಫಲಿತಾಂಶ ಪ್ರಕಟಿಸಬೇಕು ಎಂದು ಹೈಕೋರ್ಟ್ ಸೋಮವಾರ ಮಹತ್ವದ ಆದೇಶ ಹೊರಡಿಸಿದೆ.
ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ (MLA TD Raje Gowda) ಆಯ್ಕೆ ಪ್ರಶ್ನಿಸಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ.ಎನ್. ಜೀವರಾಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್. ನಟರಾಜ್ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದ್ದು, ತಿರಸ್ಕೃತಗೊಂಡಿರುವ 279 ಅಂಚೆ ಮತಗಳನ್ನು ಚುನಾವಣಾಧಿಕಾರಿ ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ.
ಮರು ಪರಿಶೀಲಿಸುವಾಗ ಚುನಾವಣಾ ಅಧಿಕಾರಿಗಳ ಕೈಪಿಡಿ 2023ರ ಮಾರ್ಗಸೂಚಿ ಪಾಲಿಸಬೇಕು ಮತ್ತು ಅಂಚೆ ಮತಗಳು ಸಮಸ್ಯಾತ್ಮಕವಾಗಿದೆಯೇ ಎಂಬುದನ್ನು ಪತ್ತೆ ಮಾಡಬೇಕು. ಅಂಚೆ ಮತಗಳನ್ನು ಪರಿಶೀಲಿಸಿದ ಬಳಿಕ ಎಲ್ಲಾ ಅಂಚೆ ಮತಗಳನ್ನು ಮರು ಎಣಿಕೆ ಮಾಡಿ ಅರ್ಜಿದಾರರು ಅಥವಾ ಪ್ರತಿವಾದಿಗಳು ಪಡೆದಿರುವ ಮತಗಳ ಫಲಿತಾಂಶ ಪ್ರಕಟಿಸಬೇಕು. ಇದನ್ನು ಎರಡು ವಾರಗಳಲ್ಲಿ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಆದೇಶದ ಪ್ರತಿಯನ್ನು ಭಾರತೀಯ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿ ಮತ್ತು ಶೃಂಗೇರಿಯ ಚುನಾವಣಾಧಿಕಾರಿಗೆ ರಿಜಿಸ್ಟ್ರಿ ಸ್ಪೀಡ್ ಪೋರ್ಟ್ ಅಥವಾ ಈ-ಮೇಲ್ ಮೂಲಕ ಕಳುಹಿಸಿಕೊಡಬೇಕು ಎಂದು ನ್ಯಾಯಾಲಯ ಆದೇಶಿಸಿತು.
ಇದರ ಬೆನ್ನಿಗೇ, ರಾಜೇಗೌಡ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು ಆದೇಶಕ್ಕೆ ಎರಡು-ಮೂರು ವಾರಗಳ ತಡೆ ನೀಡಬೇಕು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದರು. ಇದಕ್ಕೆ ಒಪ್ಪಿದ ನ್ಯಾಯಾಲಯವು ಆದೇಶಕ್ಕೆ ಎರಡು ವಾರಗಳಿಗೆ ತಡೆ ನೀಡಿತು. ಆದೇಶಕ್ಕೆ ತಡೆ ನೀಡುವುದಕ್ಕೆ ಜೀವರಾಜ್ ಪರ ವಕೀಲೆ ಪಿ ಎಲ್ ವಂದನಾ ಅವರು ವಿರೋಧಿಸಿದರು.
ಕೋರ್ಟ್‌ಗೆ ಬಂದ ʻಕಿಚ್ಚʼ ಸುದೀಪ್! ಮತ್ತೆ ಸದ್ದು ಮಾಡುತ್ತಿದೆ 3 ವರ್ಷದ ಹಿಂದಿನ ಮಾನನಷ್ಟ ಮೊಕದ್ದಮೆ ಕೇಸ್
2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ 1,811 ಅಂಚೆ ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್‌ನ ರಾಜೇಗೌಡ ಅವರು 201 ಮತಗಳಿಂದ ವಿಜೇತರಾಗಿದ್ದರು.