ಚಿಕ್ಕಮಗಳೂರು: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಕೆಳಗೆ ಬಿದ್ದಾಗ ಸರ್ಕಾರಿ ಬಸ್ ಹರಿದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ (Chikkamagaluru Accident) ಕಡೂರು ತಾಲೂಕಿನ ಹಳೇಹಟ್ಟಿ ಗೇಟ್ ಬಳಿ ನಡೆದಿದೆ. ಮೃತರನ್ನು ಮೂಲತಃ ರಾಜಸ್ಥಾನ ಮೂಲದವರೆಂದು ಗುರುತಿಸಲಾಗಿದೆ.
ಕಡೂರಿನಿಂದ ಚಿಕ್ಕಮಗಳೂರು ಮಾರ್ಗವಾಗಿ ತೆರಳುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಮತ್ತೊಂದು ಬೈಕ್ ನಡುವೆ ಹಳೇಹಟ್ಟಿ ಗೇಟ್ ಬಳಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಇಬ್ಬರು ಸವಾರರು ರಸ್ತೆಯ ಮೇಲೆಯೇ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಸರ್ಕಾರಿ ಬಸ್ ಅವರ ಮೇಲೆಯೇ ಹರಿದಿದೆ. ಪರಿಣಾಮ ಗಂಭೀರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪೊಲೀಸರು ಮೃತರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಘಟನೆಯಲ್ಲಿ ಮತ್ತೊಂದು ಬೈಕ್‌ನಲ್ಲಿದ್ದ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಖರಾಯಪಟ್ಟಣ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿಯಾಗಿ ತಂದೆ-ಮಗ ಸಾವು
ಹಾವೇರಿ: ಕೆಟ್ಟು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಭಾನುವಾರ ಸಂಜೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕ್ಕಲದಿನ್ನಿ ಗ್ರಾಮದ ನಿವಾಸಿಗಳಾದ ಮಾರುತಿ (41) ಹಾಗೂ ಅವರ ಮಗ ಪರಶುರಾಮ್ (15) ಅಪಘಾತದಲ್ಲಿ ಮೃತರು.
ಮಾರುತಿ ಅವರು ತಮ್ಮ ಪತ್ನಿ ಮಂಜುಳಾ ಮತ್ತು ಇಬ್ಬರು ಪುತ್ರರ ಜತೆ ಹಿರಿಯೂರಿನಿಂದ ಸ್ವಗ್ರಾಮ ಚಿಕ್ಕಲದಿನ್ನಿಗೆ ಟಿವಿಎಸ್ ಎಕ್ಸೆಲ್ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ - 48ರ ಗುಂಡೇನಹಳ್ಳಿ ಕ್ರಾಸ್ ಸಮೀಪ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಯನ್ನು ಗಮನಿಸದೇ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ತಂದೆ-ಮಗ ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ವಾಯುಪಡೆ ಮಾಜಿ ಯೋಧನ ಮೇಲೆ ಹಲ್ಲೆ; ಗಂಭೀರ ಗಾಯ
ಅಪಘಾತದಲ್ಲಿ ಮಾರುತಿ ಅವರ ಪತ್ನಿ ಮಂಜುಳಾ ಹಾಗೂ ಮತ್ತೊಬ್ಬ ಮಗ ನಂಜುಂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.