ಚಿತ್ರದುರ್ಗ, ಜ.11: ಓವರ್ ಟೇಕ್ ಮಾಡುವ ಅವಸರದಲ್ಲಿ ಲಾರಿಗೆ ಕಾರು ಡಿಕ್ಕಿ (Road Accident) ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಚಿತ್ರದುರ್ಗದ (Chitradurga) ತಮಟಕಲ್ಲು ಗ್ರಾಮದ ಬ್ರಿಡ್ಜ್ ಬಳಿ ನಡೆದಿದೆ. ಚಿತ್ರದುರ್ಗದ ಹಿರಿಯೂರು ಬಳಿ ನಿನ್ನೆ ರಾತ್ರಿ ಇನ್ನೊಂದು ದುರ್ಘಟನೆ ನಡೆದಿದ್ದು, ಕಾರಿಗೆ ಲಾರಿ ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದಾರೆ.
ಇನ್ನೋವಾ ಕಾರು ಮಹಾರಾಷ್ಟ್ರದಿಂದ ಬೆಂಗಳೂರು ಕಡೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಕಮಲ್ ಹರಿಬಾಬು, ರಾಕೇಶ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಲಾರಿಗೆ ಕಾರು ಡಿಕ್ಕಿ, ನಾಲ್ವರು ಸಾವು
ಚಿತ್ರದುರ್ಗ (chitradurga) ಜಿಲ್ಲೆ ಹಿರಿಯೂರು ತಾಲೂಕಿನ ಬಳಿ ಇನ್ನೊಂದು ಭೀಕರ ಅಪಘಾತ (Road Accident) ಸಂಭವಿಸಿದೆ. ಹಿಂಡಸಕಟ್ಟೆ ಬಳಿ ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಹಿರಿಯೂರು ಕೊಟ್ಟಿಗೆ ಮೂಲದ ವಿಶಾಲ್ (24) ಯಶವಂತ (22) ನಂಜುಂಡಿ (22) ರಾಹುಲ್ (19) ಮೃತರು ಎಂದು ಗೊತ್ತಾಗಿದೆ.
ಕಾರು ಮೈಸೂರು ಕಡೆಯಿಂದ ಹಿರಿಯೂರಿನತ್ತ ಬರುತ್ತಿತ್ತು. ಲಾರಿ ಮೈಸೂರು ಕಡೆಗೆ ತೆರಳುತ್ತಿತ್ತು. ಯುವಕರ ತಂಡ ಹಳ್ಳಿಯೊಂದರಲ್ಲಿ ಊಟ ಮುಗಿಸಿಕೊಂಡು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಪಟ್ಟಣದ ಕಡೆಗೆ ಬರುವಾಗ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಹಿರಿಯೂರು ಬಳಿಯೇ ಹೆದ್ದಾರಿಯಲ್ಲಿ ಕಂಟೈನರ್ ಡಿಕ್ಕಿಯಾಗಿ ಖಾಸಗಿ ಸ್ಲೀಪರ್ ಬಸ್ ಹೊತ್ತಿ ಉರಿದು ಐದು ಮಂದಿ ಸಜೀವ ದಹನಗೊಂಡಿದ್ದರು. ಈ ಘಟನೆಯ ಕಹಿನೆನಪು ಮಾಸುವ ಮುನ್ನವೇ ಇಲ್ಲಿ ಮತ್ತಷ್ಟು ಅಪಘಾತಗಳು ಸಂಭವಿಸಿವೆ. ಈ ಭಾಗದಲ್ಲಿ ಮುಂಜಾನೆ ಸಾಕಷ್ಟು ಮಂಜು ಕವಿದ ವಾತಾವರಣವಿದ್ದು, ತಡರಾತ್ರಿ ಡ್ರೈವ್ ಮಾಡುವ ವಾಹನ ಚಾಲಕರು ಹೆಚ್ಚು ಎಚ್ಚರ ವಹಿಸಲು ಸೂಚಿಸಿದೆ.