ಬೆಂಗಳೂರು: ಸಚಿವ ಕೆ.ಎನ್. ರಾಜಣ್ಣ (KN Rajanna) ಹನಿಟ್ರ್ಯಾಪ್ (Honeytrap) ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿದ್ದು, ಸದ್ಯ ಸಿಐಡಿ ತಂಡ ಪ್ರಾಥಮಿಕ ತನಿಖೆಗೆ ಮುಂದಾಗಿದೆ. ಗುರುವಾರ (ಮಾ. 27) ಬೆಳಗ್ಗೆ ಸಿಐಡಿಯ ಅಧಿಕಾರಿಗಳು ಕೆ.ಎನ್.ರಾಜಣ್ಣ ಅವರ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ನಡೆಸುವಂತೆ ರಾಜಣ್ಣ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸಲ್ಲಿಸಿದ್ದ ಮನವಿಯನ್ನು ಡಿಜಿ, ಐಜಿಪಿ ಅಲೋಕ್ ಮೋಹನ್‌ಗೆ ರವಾಸಲಾಗಿತ್ತು. ಇದರ ಬೆನ್ನಲ್ಲೇ ಅಲೋಕ್ ಮೋಹನ್ ಅವರು ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರು. ಸಿಐಡಿ ಡಿಜಿಪಿ ಸಲೀಂ ಅವರಿಗೆ ಅದೇ ಮನವಿಯನ್ನ ವರ್ಗಾಯಿಸಿ, ಪ್ರಾಥಮಿಕ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸದ್ಯ ಸಿಐಡಿ ತಂಡ ಪ್ರಾಥಮಿಕ ತನಿಖೆಗೆ ಮುಂದಾಗಿದೆ.
ಬೆಂಗಳೂರಿನ ಜಯಮಹಲ್ ರಸ್ತೆಯ ಸಚಿವ ರಾಜಣ್ಣ ಅವರ ಸರ್ಕಾರಿ ಗೆಸ್ಟ್‌ಹೌಸ್‌ಗೂ ತೆರಳಿದ ಸಿಐಡಿ, ಸರ್ಕಾರಿ ಬಂಗಲೆಯಲ್ಲಿ ಯಾರೆಲ್ಲಾ ಇದ್ದಾರೆ, ಯಾವ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇನ್ನು ರಾಜಣ್ಣ ಅವರ ತುಮಕೂರು ನಿವಾಸಕ್ಕೂ ತೆರಳಿ ಪರಿಶೀಲಿಸಿ ನಡೆಯುವ ಸಾಧ್ಯತೆ ಇದೆ. 14 ದಿನಗಳ ಕಾಲ ಸಾಕ್ಷಿ ಸಂಗ್ರಹಿಸುವ ಸಿಐಡಿ, ಆ ಬಳಿಕ ಪ್ರಕರಣವನ್ನ ಸಿಐಡಿಗೆ ಇಲ್ಲ ಎಸ್‌ಐಟಿಗೆ ವಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.
ಈ ಸುದ್ದಿಯನ್ನೂ ಓದಿ: Honey trap Case: ಸುಪ್ರೀಂ ಕೋರ್ಟ್‌ನಲ್ಲಿ ಇಂದು ಹನಿಟ್ರ್ಯಾಪ್ ಕೇಸ್ ವಿಚಾರಣೆ
ಗೃಹ ಸಚಿವರು ಹೇಳಿದ್ದೇನು?
ರಾಜಣ್ಣ ಅವರ ದೂರಿನ ಬಗ್ಗೆ ಮಾ. 26ರಂದು ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ʼʼಸದನದಲ್ಲಿ ಹನಿಟ್ರ್ಯಾಪ್ ಆಗಿದೆ ಅಂತ ಚರ್ಚೆಗೆ ಬಂದಾಗ ಸಹಕಾರಿ ಸಚಿವ ರಾಜಣ್ಣ ಅವರ ಮೇಲೂ ಪ್ರಯತ್ನ ಆಗಿದೆ ಎಂದು ಸರ್ಕಾರ, ಹಾಗೂ ಗೃಹ ಸಚಿವರಿಗೆ ಮನವಿ ಕೊಡುತ್ತೇನೆ ಎಂದು ಹೇಳಿದ್ದರು. ಇದು ನಿಜ ಆಗಿದ್ದರೆ ಉನ್ನತ ಮಟ್ಟದ ತನಿಖೆ ಮಾಡುವುದಾಗಿ ಹೇಳಿದ್ದೆ. ಆದರೆ ರಾಜಣ್ಣ ಅವರಿಗೆ ಪೂರ್ವ ನಿಯೋಜಿತ ಕೆಲಸದ ನಡುವೆ ದೂರು ಕೊಡಲು ಆಗಲಿಲ್ಲ. ಇಂದು ನನಗೆ ಮನವಿ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಂತೆ ಮನವಿ ಕೊಟ್ಟಿದ್ದು, ಮುಂದಿನ ಕ್ರಮದ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇವೆʼʼ ಎಂದು ತಿಳಿಸಿದ್ದರು.
ಬಜೆಟ್ ಮೇಲಿನ ಚರ್ಚೆ ವೇಳೆ ಸಚಿವ ರಾಜಣ್ಣ ಅವರು ಸದನದಲ್ಲೇ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಬಹಿರಂಗಪಡಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ರಾಜಣ್ಣ ಅವರನ್ನ ಮಧುಬಲೆಗೆ ಬೀಳಿಸಲು ಪ್ರಯತ್ನಿಸಿದವರು ಯಾರು? ಈ ಹನಿಟ್ರ್ಯಾಪ್ ಯತ್ನ ಹಿಂದೆ ಯಾರ ಕೈವಾಡ ಇದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ರಾಜಣ್ಣ ಅವರು ಇರುವ ಸಚಿವರ ಸರ್ಕಾರಿ ನಿವಾಸದಲ್ಲಿ ಸಿಸಿಟಿವಿಗಳೇ ಇಲ್ಲ. ಹೀಗಾಗಿ ಹನಿಟ್ರ್ಯಾಪ್ ಗ್ಯಾಂಗ್ ಬಂದು ಹೋಗಿರುವ ಬಗ್ಗೆ ಯಾವುದೇ ವಿಡಿಯೊ ಸಾಕ್ಷಿಗಳು ಇಲ್ಲ. ಹೀಗಾಗಿ ಸರ್ಕಾರಿ ನಿವಾಸದಲ್ಲೇ ಹನಿಟ್ರ್ಯಾಪ್ಗೆ ಯತ್ನಿಸಿದ್ದಾರೆ ಎಂದಿದ್ದ ರಾಜಣ್ಣ ಸದ್ಯ ಅದನ್ನು ಸಾಬೀತುಪಡಿಸಲು ದಾಖಲೆಗಳಿಲ್ಲದೇ ಪರದಾಡುವಂತಾಗಿದೆ.