Karnataka Budget 2025: ಒಲಿಂಪಿಕ್ಸ್ ಪದಕ ಯೋಜನೆಯಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಘೋಷಿಸಿದ ಸಿಎಂ
ಕ್ರೀಡಾಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಅನೇಕರು ಭಾಗವಹಿಸುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ರಾಜ್ಯದ ಕ್ರೀಡಾಪಡುಗಳು ಛಾಪು ಮೂಡಿಸಿದ್ದು, ಅಂತಹವರಿಗೆ ನೆರವು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಧಾವಿಸಿದ್ದಾರೆ. ಒಲಿಂಪಿಕ್ಸ್ ಪದಕ ಯೋಜನೆಯಡಿ 2028ರ ಒಲಿಂಪಿಕ್ಸ್‌ಗೆ ತಯಾರಿ ಕೈಗೊಳ್ಳಲು ರಾಜ್ಯದ ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ.ದಂತೆ ಪ್ರೋತ್ಸಾಹ ಧನ ಘೋಷಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಮ್ಮ 16ನೇ ಬಜೆಟ್ ಮಂಡಿಸುತ್ತಿದ್ದಾರೆ (Karnataka Budget 2025). ಈ ವೇಳೆ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಕ್ಷೇತ್ರಕ್ಕೆ ವಿವಿಧ ಕೊಡುಗೆಗಳನ್ನು ಘೋಷಿಸಿದ್ದಾರೆ. ಒಲಿಂಪಿಕ್ಸ್ ಪದಕ ಯೋಜನೆಯಡಿ 2028ರ ಒಲಿಂಪಿಕ್ಸ್‌ಗೆ (Olympics 2028) ತಯಾರಿ ಕೈಗೊಳ್ಳಲು ರಾಜ್ಯದ ಅತ್ಯಂತ ಪ್ರತಿಭಾನ್ವಿತ 60 ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 10 ಲಕ್ಷ ರೂ.ದಂತೆ ಪ್ರೋತ್ಸಾಹ ಧನ ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ವರ್ಷ ಇದಕ್ಕಾಗಿ 6 ಕೋಟಿ ರೂ. ನೆರವು ನೀಡಲಾಗುತ್ತದೆ ಎಂದೂ ಹೇಳಿದ್ದಾರೆ.
ಕ್ರೀಡಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಘೋಷಿಸಿದ ವಿವಿಧ ಕೊಡುಗೆಗಳು ಯಾವುವು ಎನ್ನುವ ವಿವರ ಇಲ್ಲಿದೆ.
- ತಲಾ 2 ಕೋಟಿ ರೂ. ವೆಚ್ಚದಲ್ಲಿ 12 ತಾಲೂಕು ಕೇಂದ್ರಗಳಲ್ಲಿ ತಾಲೂಕು ಕ್ರೀಡಾಂಗಣಗಳ ನಿರ್ಮಾಣ; ಈ ಕಾಮಗಾರಿಗಳಿಗೆ 12 ಕೋಟಿ ರೂ. ಹಂಚಿಕೆ.
- ರಾಜ್ಯದ 4 ವಿಭಾಗಗಳಲ್ಲಿ ತಲಾ ಒಂದು ಜಿಲ್ಲಾ ಕ್ರೀಡಾಂಗಣದಲ್ಲಿ ಒಟ್ಟು 3 ಕೋಟಿ ರೂ. ವೆಚ್ಚದಲ್ಲಿ ಶೂಟಿಂಗ್ ರೇಂಜ್ ನಿರ್ಮಾಣ.
- ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹ ಹಾಗೂ ಬುಡಕಟ್ಟು ಜನಾಂಗದವರಿಗೆ ಕ್ರೀಡಾಕೂಟ ಆಯೋಜನೆಗೆ 2 ಕೋಟಿ ರೂ.
- ಕೂಡಿಗೆ ಕ್ರೀಡಾ ಶಾಲೆಯ ಸೌಲಭ್ಯಗಳ ಉನ್ನತೀಕರಣಕ್ಕೆ 3 ಕೋಟಿ ರೂ.; ಯಾದಗಿರಿಯ ಶಹಾಪುರದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಕ್ರೀಡಾ ವಸತಿ ಶಾಲೆ ಪ್ರಾರಂಭ.
- 7 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಮತ್ತು ಬೆಳಗಾವಿಯಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾನ.
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿನಾರಾಯಣ ಹೊಸಹಳ್ಳಿಯಲ್ಲಿರುವ 20 ಎಕರೆ ನಿವೇಶನದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ; ಸೈಕ್ಲಿಂಗ್ ಉತ್ತೇಜನಕ್ಕೆ 5 ಕೋಟಿ ರೂ. ವೆಚ್ಚದಲ್ಲಿ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣ; ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ 6 ಕೋಟಿ ರೂ.
- ಬೆಂಗಳೂರಿನ ವಿದ್ಯಾನಗರದಲ್ಲಿರುವ ಈಜುಕೊಳ ಅಂತಾರಾಷ್ಟ್ರೀಯ ಮಟ್ಟಕ್ಕೆ ಉನ್ನತೀಕರಣ. ಚಾಮರಾಜನಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಒಲಿಂಪಿಕ್ ಮಾದರಿಯ (50 ಮೀಟರ್) ಈಜುಕೊಳ ನಿರ್ಮಾಣ.
- ಮೈಸೂರಿನಲ್ಲಿ ಕುಸ್ತಿ, ವಾಲಿಬಾಲ್, ಖೋಖೋ ಅಕಾಡೆಮಿ ಸ್ಥಾಪನೆಗೆ 2 ಕೋಟಿ ರೂ.
- ಕ್ರೀಡಾಪಟುಗಳು ತರಬೇತಿ ಪಡೆಯಲು ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸಹಕಾರಿಯಾಗುವಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದವರೆಗಿನ ಕ್ರೀಡಾಪಟುಗಳಿಗೆ ಶೇ.15 ರಷ್ಟು ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಶೇ. 25ರಷ್ಟು ಹಾಜರಾತಿ ವಿನಾಯಿತಿ.
- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ವೃತ್ತಿಪರ, ಪದವಿ ಮತ್ತು ಉನ್ನತ ಶಿಕ್ಷಣದ ಪ್ರವೇಶದಲ್ಲಿ ಶೇ. 5ರಷ್ಟು ಕೃಪಾಂಕ
ಈ ಸುದ್ದಿಯನ್ನೂ ಓದಿ: Karnataka Budget 2025: ಸಹಕಾರ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?
- ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಶಾಲೆಗಳಲ್ಲಿ ಆಟದ ಮೈದಾನ ನಿರ್ಮಿಸಲು ತಲಾ 5 ಲಕ್ಷ ರೂ. ವರೆಗೆ ನೆರವು
- ನಿವೃತ್ತಿ ಹೊಂದಿದ ಕುಸ್ತಿಪಟುಗಳಿಗೆ ನೀಡಲಾಗುತ್ತಿರುವ ಮಾಸಾಶನವನ್ನು, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳಿಗೆ 6,000 ರೂ.ಗಳಿಗೆ, ರಾಷ್ಟ್ರ ಮಟ್ಟದ ಕುಸ್ತಿಪಟುಗಳಿಗೆ 5,000 ರೂ.ಗಳಿಗೆ ಹಾಗೂ ರಾಜ್ಯ ಮಟ್ಟದ ಕುಸ್ತಿಪಟುಗಳಿಗೆ 4,500 ರೂ. ಗಳಿಗೆ ಹೆಚ್ಚಳ
- ಯಲಬುರ್ಗಾ ಮತ್ತು ಟಿ.ನರಸೀಪುರದಲ್ಲಿ ಕ್ರೀಡಾಂಗಣಗಳ ಅಭಿವೃದ್ಧಿಗೆ 6 ಕೋಟಿ ರೂ. ಅನುದಾನ.