ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಲ್ಲಿಕಾರ್ಜುನ ಖರ್ಗೆ ಅವರ ರ‍್ಯಾಲಿಯ ಸ್ಥಳ ‘ಶುದ್ಧೀಕರಣʼ ನಾಚಿಕೆಗೇಡಿನ ಕೃತ್ಯ; ಸಿಎಂ ಡಿ.ಕೆ. ಶಿವಕುಮಾರ್ ಕಿಡಿ

CM DK Shivakumar: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಹಿರಂಗ ಸಭೆ ನಡೆದ ಸ್ಥಳ ‘ಶುದ್ಧೀಕರಣʼ ಮಾಡಿರುವ ಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಂಡಿಸಿದ್ದು, ಇದೊಂದು ನಾಚಿಕೆಗೇಡಿನ ಕೃತ್ಯ ಹಾಗೂ ಸಂವಿಧಾನಕ್ಕೆ ಎಸಗಿದ ಅಪಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು, ಆ.13: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ (Mallikarjun Kharge) ಬಹಿರಂಗ ಸಭೆ ನಡೆದ ಸ್ಥಳ ‘ಶುದ್ಧೀಕರಣʼ ಮಾಡಿರುವ ಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು (CM DK Shivakumar) ಖಂಡಿಸಿದ್ದು, ಇದೊಂದು ನಾಚಿಕೆಗೇಡಿನ ಕೃತ್ಯ ಹಾಗೂ ಸಂವಿಧಾನಕ್ಕೆ ಎಸಗಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ʼಈ ಘಟನೆಯು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅಪಮಾನವಲ್ಲ, ಬದಲಿಗೆ ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳ ಮೇಲಿನ ನೇರ ದಾಳಿ. ಅಲ್ಲದೆ, ಆಧುನಿಕ ಭಾರತದಲ್ಲಿ ಜಾತಿ ತಾರತಮ್ಯದ ಅಸಹ್ಯಕರ ನೆನಪುʼ ಎಂದು ಕಿಡಿಕಾರಿದ್ದಾರೆ.

ಖರ್ಗೆಯವರು ದೇಶದ ಅತ್ಯಂತ ಗೌರವಾನ್ವಿತ ಜನನಾಯಕರು ಮತ್ತು ಜೀವಮಾನವಿಡೀ ಜನಸೇವೆ ಮಾಡಿದವರು. ದಲಿತ ನಾಯಕರೊಬ್ಬರು ಭಾಷಣ ಮಾಡಿದರು ಎಂಬ ಕಾರಣಕ್ಕೆ ಸಾರ್ವಜನಿಕ ಸ್ಥಳವೊಂದಕ್ಕೆ ಶುದ್ಧೀಕರಣ ಬೇಕು ಎಂದು ಬಿಂಬಿಸಿರುವುದು ಜಾತಿ ತಾರತಮ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.

ಇದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರವಲ್ಲ, ಸಮಾನತೆ, ಸಹೋದರತೆ ಮತ್ತು ಮಾನವ ಘನತೆಯನ್ನು ನಂಬುವ ಪ್ರತಿಯೊಬ್ಬ ಭಾರತೀಯನಿಗೂ ಎಸಗಿದ ಅಪಮಾನ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಇಂತಹ ತಾರತಮ್ಯಗಳು ಮರುಕಳಿಸುವುದನ್ನು ಭಾರತ ಸಹಿಸುವುದಿಲ್ಲ ಮತ್ತು ಸಹಿಸಬಾರದು. ಜಾತ್ಯತೀತವಾಗಿ ಪ್ರತಿಯೊಬ್ಬ ಪ್ರಜೆಯೂ ಸಮಾನ ಘನತೆ ಮತ್ತು ಗೌರವಕ್ಕೆ ಅರ್ಹನಾಗಿದ್ದಾನೆ. ಇಂತಹ ಕೃತ್ಯಗಳನ್ನು ಸಾಮಾನ್ಯಗೊಳಿಸುವ ಅಥವಾ ಸಮರ್ಥಿಸುವ ಯಾವುದೇ ಪ್ರಯತ್ನವನ್ನು ಸ್ಪಷ್ಟವಾಗಿ ತಿರಸ್ಕರಿಸಬೇಕು ಎಂದು ತಿಳಿಸಿದ್ದಾರೆ.

ಆದಿವಾಸಿ ಮತ್ತು ಅಲೆಮಾರಿ ಆಯೋಗ ರಚನೆಗೆ ಸಿಎಂ ಡಿ.ಕೆ. ಶಿವಕುಮಾರ್ ಆದೇಶ

ಈ ವಿಚಾರದಲ್ಲಿ ನಾನು ಕಾಂಗ್ರೆಸ್ ಅಧ್ಯಕ್ಷರ ಜೊತೆ ದೃಢವಾಗಿ ನಿಲ್ಲುತ್ತೇನೆ. ಈ ಘಟನೆಯ ವಿರುದ್ಧ ಪ್ರಜಾಪ್ರಭುತ್ವವಾದಿ ಶಕ್ತಿಗಳು ಧ್ವನಿ ಎತ್ತಬೇಕು ಕರೆ ನೀಡಿದ್ದಾರೆ. ಇಂತಹ ತಾರತಮ್ಯದ ಮುಂದೆ ಮೌನವಾಗಿರುವುದು ನಮ್ಮ ಸಮಾಜವನ್ನು ವಿಭಜಿಸಲು ಯತ್ನಿಸುವವರಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ. ಸಮಾನತೆ, ನ್ಯಾಯ ಮತ್ತು ಎಲ್ಲರ ಘನತೆಯ ಸಾಂವಿಧಾನಿಕ ಭರವಸೆಯ ಮೇಲೆ ರೂಪುಗೊಂಡ ಭಾರತಕ್ಕೆ ನಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.