ಬೆಂಗಳೂರು, ಜ.05: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ನಾಳೆ (ಜ.6) ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಲಿದ್ದು, ಅತಿ ಹೆಚ್ಚು ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ (long term chief minister) ಎಂಬ ಇತಿಹಾಸ ಸೃಷ್ಟಿಸಲಿದ್ದಾರೆ. ಜ.7 ಕಳೆದರೆ ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕ್ರಮ ಕೈಗೊಂಡಿದ್ದ ದೇವರಾಜ ಅರಸರು ಏಳೂವರೆ ವರ್ಷ ಮುಖ್ಯಮಂತ್ರಿಯಾಗಿದ್ದರು. ಅರಸು ಅವರು ತಮ್ಮ ಏಳೂವರೆ ವರ್ಷದ ಆಡಳಿತಾವಧಿಯಲ್ಲಿ 2,792 ದಿನಗಳ ಕಾಲ ಅಧಿಕಾರದಲ್ಲಿದ್ದರು. ಸಿದ್ದರಾಮಯ್ಯ ಅವರು 2013-2018ರ ಅವಧಿಯಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ದಾಗ 1,829 ದಿನಗಳ ಕಾಲ ಅಧಿಕಾರದಲ್ಲಿದ್ದರು. ಈಗ ಎರಡನೇ ಅವಧಿಗೆ ಆಡಳಿತದ ಸೂತ್ರ ಹಿಡಿದಿರುವ ಅವರು, ಜನವರಿ 6ರಂದು ದೇವರಾಜ ಅರಸರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಅರಸು ಅವರು ಸತತವಾಗಿ ಏಳೂವರೆ ವರ್ಷ ಅಧಿಕಾರದಲ್ಲಿದ್ದರು. ಮಧ್ಯದಲ್ಲಿ ಎಲ್ಲೂ ಬ್ರೇಕ್ ಆಗಿರಲಿಲ್ಲ. ಸಿದ್ದರಾಮಯ್ಯ ಅವರು ಮೊದಲ ಅವಧಿ ಪೂರ್ಣಗೊಳಿಸಿದ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದಿರಲಿಲ್ಲ. 2018 ರಿಂದ 2023ರ ವರೆಗೆ ಮೊದಲ 14 ತಿಂಗಳ ಕಾಲ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವಿತ್ತು. ನಂತರ ರಚನೆಯಾದ ಬಿಜೆಪಿ ಸರಕಾರದಲ್ಲಿ ಕ್ರಮವಾಗಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಪುನಃ ಜನಾದೇಶ ಸಿಕ್ಕಿ ಎರಡನೇ ಬಾರಿಗೆ ಸಿಎಂ ಆಗಿದ್ದಾರೆ.
ಬಜೆಟ್‌ನಲ್ಲೂ ರೆಕಾರ್ಡ್
ಸಿದ್ದರಾಮಯ್ಯ ಈಗಾಗಲೇ 16 ಬಜೆಟ್ ಮಂಡಿಸಿ ರಾಜ್ಯಕ್ಕೆ ಅತಿಹೆಚ್ಚು ಮುಂಗಡ ಪತ್ರ ಕೊಟ್ಟ ದಾಖಲೆಯನ್ನು ಹೊಂದಿದ್ದಾರೆ. 2026-27ರ ತಮ್ಮ 17ನೇ ಬಜೆಟ್‌ಗೆ ಅವರು ಸಿದ್ಧತೆ ಪ್ರಾರಂಭಿಸಿದ್ದಾರೆ.