ಬೆಂಗಳೂರು: ಸಿಎಂ ಸಿದ್ಧರಾಮಯ್ಯ (CM Siddaramaiah) ಅವರ ಪತ್ನಿ (wife) ಪಾರ್ವತಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೆಹಲಿಗೆ (Delhi) ತೆರಳಿದ್ದ ಸಿಎಂ ಸಿದ್ಧರಾಮಯ್ಯ ಬೆಂಗಳೂರಿಗೆ ಆಗಮಿಸಿದ್ದು, ಆಸ್ಪತ್ರೆಗೆ ಭೇಟಿ ನೀಡಿ ಪತ್ನಿಯ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಆರೋಗ್ಯ ಕುರಿತು ಅಪ್‌ಡೇಟ್ ನೀಡಿದರು.
ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತ್ನಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪತ್ನಿ ಆರೋಗ್ಯ ಸ್ಥಿರವಾಗಿದೆ. ಏನೂ ಸಮಸ್ಯೆ ಇಲ್ಲ. ಶ್ವಾಸಕೋಶ ಸೋಂಕು ಇದೆ. ಈಗ ಸುಧಾರಣೆ ಕಾಣುತ್ತಿದೆ. ಇನ್ನು ಎರಡು ಮೂರು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಪಾರ್ವತಿ ಅವರಿಗೆ ಡಾ ಬಿಸಿ ಶ್ರೀನಿವಾಸ್ ನೇತೃತ್ವದ ವೈದ್ಯರ ತಂಡ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಪಾರ್ವತಿ ಜೊತೆಗೆ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಇದ್ದಾರೆ. ಇನ್ನು ಹೈಕಮಾಂಡ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಿಎಂ ಸಿದ್ದರಾಮಯ್ಯ ನವದೆಹಲಿಗೆ ತೆರಳಿದ್ದು, ಅಲ್ಲಿಂದಲ್ಲೇ ವೈದ್ಯರಿಗೆ ಪೋನ್ ಕರೆ ಮಾಡಿ ಪತ್ನಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Parvathi Siddaramaiah: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
ಇನ್ನು ತಾಯಿಯ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಪುತ್ರ ಯತೀಂದ್ರ, ಶ್ವಾಸಕೋಶದಲ್ಲಿ ನೀರು ತುಂಬಿದೆ. ಹಾಗಾಗಿ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಇದರಿಂದ ವೈದ್ಯರು ಸಾಕಷ್ಟು ಪರೀಕ್ಷೆ ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ನಾಳೆವರೆಗೂ (ನವೆಂಬರ್ 18) ಆಸ್ಪತ್ರೆಯಲ್ಲೇ ಅಡ್ಮಿಟ್ ಇರಲು ವೈದ್ಯರು ತಿಳಿಸಿದ್ದಾರೆ. ಸಿಎಂ ಸಹ ಆಸ್ಪತ್ರೆಗೆ ಬರಲಿದ್ದಾರೆ. ನಾನು ಇಲ್ಲೇ ಇರುತ್ತೇನೆ ಎಂದು ಮಾಹಿತಿ ನೀಡಿದರು.