ಬೆಂಗಳೂರು, ಮಾ. 2: ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯ ಸಂಘರ್ಷಭರಿತವಾಗಿದೆ (Middle East Crisis). ಇರಾನ್ ಪ್ರತೀಕಾರದ ಭಾಗವಾಗಿ ಕೊಲ್ಲಿ ರಾಷ್ಟ್ರಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿದಾಳಿ ನಡೆಸುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಿದೆ. ಇದರಿಂದ ಸೌದಿ ಅರೇಬಿಯಾ, ಯುಎಇ ಸೇರಿದಂತೆ ಹಲವು ದೇಶಗಳಲ್ಲಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಇದರಲ್ಲಿ ಕನ್ನಡಿಗರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರನ್ನೆಲ್ಲ ಸುರಕ್ಷಿತವಾಗಿ ಭಾರತಕ್ಕೆ ಕರೆ ತರುವ ವ್ಯವಸ್ಥೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮನವಿ ಮಾಡಿದ್ದಾರೆ. ಈ ಬಗ್ಗೆ ಅವರು ಪತ್ರ ಬರೆದಿದ್ದಾರೆ.
ʼʼಮಧ್ಯಪ್ರಾಚ್ಯ ಗಲಭೆಪೀಡಿತವಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ಮತ್ತು ಭಾರತೀಯರನ್ನು ಕಾಪಾಡಲು ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆʼʼ ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ʼʼರಾಜತಾಂತ್ರಿಕ ಸಂಪರ್ಕವನ್ನು ಬಲಪಡಿಸಬೇಕು. ಅಲ್ಲಿ ಸಿಲುಕಿರುವ ಕನ್ನಡಿಗರು ಸೇರಿ ಭಾರತೀಯರನ್ನು ಕರೆತರಲು ಅಗತ್ಯವಿದ್ದರೆ ವಿಶೇಷ ವಿಮಾನದ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ರಾಯಭಾರ ಕಚೇರಿಗಳು ಮತ್ತು ವಿಮಾನಯಾನ ಸಂಸ್ಥೆಗಳ ಮೂಲಕ ಸಂಘಟಿತ ಬೆಂಬಲ ಪಡೆಯಬೇಕು. ನಮ್ಮ ಜನರ ಸುರಕ್ಷತೆ ಖಚಿತಪಡಿಸಲು ಮತ್ತು ಅವರನ್ನು ಕರೆತರಲು ಅಗತ್ಯವಾದ ಎಲ್ಲ ರೀತಿಯ ಸಹಕಾರವನ್ನು ನೀಡಲು ಕರ್ನಾಟಕವು ಬದ್ಧʼʼ ಎಂದು ಹೇಳಿದ್ದಾರೆ. ಜತೆಗೆ ಪ್ರಧಾನಿಗೆ ಬರೆದಿರುವ ಪತ್ರವನ್ನು ಲಗತ್ತಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಪತ್ರ:
ಪತ್ರದಲ್ಲಿ ಏನಿದೆ?
ʼʼಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಆ ಪ್ರದೇಶಗಳಲ್ಲಿ ವಾಸಿಸುವ, ಉದ್ಯೋಗದಲ್ಲಿರುವ, ವಿದ್ಯಾಭ್ಯಾಸ ಮಾಡುತ್ತಿರುವ ಹಾಗೂ ಪ್ರಯಾಣಕ್ಕೆಂದು ತೆರಳಿರುವ ಕನ್ನಡಿಗರು ಸೇರಿ ಭಾರತೀಯ ಪ್ರಜೆಗಳ ಸುರಕ್ಷತೆ ಬಗ್ಗೆ ಆತಂಕ ಮೂಡಿದೆʼʼ ಎಂದಿದ್ದಾರೆ.
ಅಬುಧಾಬಿಯಲ್ಲಿ ಸಿಲುಕಿದ ಕನ್ನಡಿಗರು; ನೆರವಿಗೆ ಮನವಿ ಮಾಡಿದ ಕುಟುಂಬ
ʼʼದಾಳಿಯ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ಅನೇಕ ದೇಶಗಳು ತಮ್ಮ ವಾಯುಪ್ರದೇಶಗಳನ್ನು ನಿರ್ಬಂಧಿಸಿರುವುದರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ದುಬೈ ಸೇರಿ ಅನೇಕ ಕಡೆ ಕನ್ನಡಿಗರು ಸೇರಿದಂತೆ ಹಲವು ಭಾರತೀಯರು ಸಿಲುಕಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಅವರ ಸುರಕ್ಷತೆ ಹಾಗೂ ಅಗತ್ಯವಿದ್ದರೆ ಸ್ವದೇಶಕ್ಕೆ ಕರೆತರಲು ಕ್ರಮ ಕೈಗೊಳ್ಳುವ ಕುರಿತು ಮನವಿ ಮಾಡಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯಕ್ಕೂ ವಿಮಾನಯಾನ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸಹಾಯಕ್ಕೆ ವಿನಂತಿಸಲಾಗಿದೆʼʼ ಎಂದು ಹೇಳಿದ್ದಾರೆ.
ʼʼಪರಿಸ್ಥಿತಿಯ ಗಂಭೀರತೆ ಮತ್ತು ಅಸ್ಥಿರತೆಯನ್ನು ಮನಗಂಡು, ಕನ್ನಡಿಗರು ಸೇರಿದಂತೆ ಭಾರತೀಯ ಪ್ರಜೆಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಭಾರತೀಯ ರಾಯಭಾರ ಕಚೇರಿ ಮತ್ತು ವಾಣಿಜ್ಯ ದೂತಾವಾಸಗಳ ಮೂಲಕ ನಿರಂತರ ಮಾರ್ಗದರ್ಶನ ಒದಗಿಸಬೇಕು. ಅಗತ್ಯವಿದ್ದಲ್ಲಿ ಆದ್ಯತೆ ಆಧಾರದ ಮೇಲೆ ವಿಶೇಷ ವಿಮಾನಗಳ ಮೂಲಕ ಸುರಕ್ಷಿತವಾಗಿ ನಾಗರಿಕರನ್ನು ವಾಪಸ್ ಕರೆತರಬೇಕುʼʼ ಎಂದು ಮನವಿ ಮಾಡಿದ್ದಾರೆ.
ʼʼಈಗಾಗಲೇ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಮಟ್ಟದ ತುರ್ತು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿದೆ. ಕೇಂದ್ರಕ್ಕೆ ಅಗತ್ಯವಾದ ಎಲ್ಲ ರೀತಿಯ ನೆರವು ನೀಡಲು ಬದ್ಧರಾಗಿದ್ದೇವೆʼʼ ಎಂದು ಹೇಳಿದ್ದಾರೆ.