Caste Census: ಹೊಸ ʼಕ್ರಿಶ್ಚಿಯನ್ʼ ಜಾತಿಗಳನ್ನು ಗಣತಿ ಪಟ್ಟಿಯಿಂದ ತೆಗೆಯಲು ಮುಂದಾದ ಸಿಎಂ, ಇಂದು ಕ್ಯಾಬಿನೆಟ್ ಸಭೆ
CM Siddaramaiah: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ ಜಾತಿ ಪಟ್ಟಿಯಲ್ಲಿ ಹಿಂದೂ ಜಾತಿಗಳ ಹೆಸರಿನ ಮುಂದೆ ಕ್ರಿಶ್ಚಿಯನ್ ಪದ ಸೇರ್ಪಡೆ, 331 ಹೊಸ ಜಾತಿಗಳನ್ನು ಉಲ್ಲೇಖಿಸಿರುವ ಬಗ್ಗೆ ಹಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಎಂ ಈ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

-

ಬೆಂಗಳೂರು : ಸಿಎಂ ಸಿದ್ದರಾಮಯ್ಯ (CM Siddaramaiah) ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ (Cabinet meeting) ಸಭೆಯಲ್ಲಿ ಜಾತಿ ಗಣತಿ (Caste census) ವಿಚಾರವಾಗಿ ಚರ್ಚೆ ನಡೆದಿದ್ದು, ಹೊಸದಾಗಿ ಸೃಷ್ಟಿಸಲಾದ 331 ಜಾತಿಗಳ ಸೇರ್ಪಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಜಾತಿಗಳನ್ನು ಕೈಬಿಡಲು ಸಿಎಂ ಮುಂದಾಗಿದ್ದು, ಈ ಕುರಿತು ಇನ್ನಷ್ಟು ಚರ್ಚೆ ನಡೆಸಲು ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ 10 ಗಂಟೆಗೆ ಸಂಪುಟ ಸಹೋದ್ಯೋಗಿಗಳ ಸಭೆಗೆ ಕರೆದಿದ್ದಾರೆ.
ನಿನ್ನೆ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಸಚಿವರು ಹೊಸ ಜಾತಿಗಳ ಸೇರ್ಪಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ ಜಾತಿ ಪಟ್ಟಿಯಲ್ಲಿ ಹಿಂದೂ ಜಾತಿಗಳ ಹೆಸರಿನ ಮುಂದೆ ಕ್ರಿಶ್ಚಿಯನ್ ಪದ ಸೇರ್ಪಡೆ, 331 ಹೊಸ ಜಾತಿಗಳನ್ನು ಉಲ್ಲೇಖಿಸಿರುವ ಬಗ್ಗೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾತಿ ಪಟ್ಟಿಯ ಕುರಿತಾಗಿ ಗೊಂದಲ ಬಗೆಹರಿಯುವವರೆಗೆ ಸಮೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಕ್ರಿಶ್ಚಿಯನ್ ಬ್ರಾಹ್ಮಣ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ದಲಿತ ಎಂಬಿತ್ಯಾದಿಯಾಗಿ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಜೋಡಿಸಿ ಜಾತಿ ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. ಈ ಪಟ್ಟಿಗೆ ವಿರೋಧ ವ್ಯಕ್ತವಾಗಿತ್ತು. ವಿಪಕ್ಷಗಳು, ಹಿಂದೂ ಸಮುದಾಯ ಮಾತ್ರವಲ್ಲ, ಸಂಪುಟ ಸಭೆಯಲ್ಲಿ ಸಚಿವರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಜಾತಿ ಜೊತೆಗೆ ಕ್ರಿಶ್ಚಿಯನ್ ಧರ್ಮವನ್ನು ಸೇರಿಸಿರುವ ಕಲಂಗಳನ್ನು ತೆಗೆಯುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಎದ್ದಿರುವ ವಿವಾದಗಳಿಗೆ ತೆರೆ ಎಳೆಯಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ 10ಗಂಟೆಗೆ ಸಂಪುಟ ಸಹೋದ್ಯೋಗಿಗಳ ಸಭೆಗೆ ಕರೆದಿದ್ದಾರೆ. ಸಭೆಯಲ್ಲಿ ಜಾತಿಗಣತಿ ಗೊಂದಲಗಳ ಬಗ್ಗೆ ಚರ್ಚಿಸಲಿದ್ದಾರೆ. ಹೆಚ್ಚುವರಿ ಜಾತಿಗಳನ್ನು ತೆಗೆದು ಸಮೀಕ್ಷೆ ಮುಂದುವರಿಸುವ ಬಗ್ಗೆ ಈ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: Caste census: ಸೆ.22 ರಿಂದ ರಾಜ್ಯದಲ್ಲಿ ಜಾತಿ ಸಮೀಕ್ಷೆ; ಜಾತಿ-ಉಪಜಾತಿಗಳ ಪಟ್ಟಿ ಇಲ್ಲಿದೆ