ಬೆಂಗಳೂರು, ಮಾರ್ಚ್ 11: ಮಧ್ಯಪ್ರಾಚ್ಯ ಯುದ್ದದಿಂದಾಗಿ (gulf war) ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ (commercial lpg cylinder) ಗ್ಯಾಸ್ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದೆ. ಹೀಗಾಗಿ ಬುಧವಾರದಿಂದಲೇ ಬೆಂಗಳೂರಿನಲ್ಲಿ (Bengaluru) ಶೇ.30ರಷ್ಟು ಸೇರಿದಂತೆ ರಾಜ್ಯವ್ಯಾಪಿ ಹೋಟೆಲ್‌ಗಳು ಬಂದ್ (Hotels bandh) ಆಗುವ ಆತಂಕ ಎದುರಾಗಿದೆ. ಹೋಟೆಲ್‌ಗಳು ಮಾತ್ರವಲ್ಲದೇ ವಾಣಿಜ್ಯ ಬಳಕೆ ಸಿಲಿಂಡರ್ ಅವಲಂಬಿಸಿರುವ ಕಲ್ಯಾಣ ಮಂಟಪಗಳು, ಪಿಜಿಗಳು ಹಾಗೂ ಕ್ಯಾಟರಿಂಗ್‌ನವರೂ ಸಮಸ್ಯೆಗೆ ಸಿಲುಕಿದ್ದಾರೆ. ಇನ್ನು ಗ್ಯಾಸ್ ಚಾಲಿತ ಆಟೋಗಳ ಸಂಚಾರದಲ್ಲೂ ವ್ಯತ್ಯಯ ಕಂಡುಬಂದಿದ್ದು, ನಗರದ ಕೆಲ ಆಟೋ ಎಲ್‌ಪಿಜಿ ಕೇಂದ್ರಗಳು ಮಂಗಳವಾರ ಮುಚ್ಚಿದ್ದು, ಮುಂದಿನ ದಿನಗಳಲ್ಲಿ ಆಟೋ ಎಲ್‌ಪಿಜಿ ಕೇಂದ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದ್ ಆಗುವ ಸಾಧ್ಯತೆಗಳಿವೆ.
ಸೋಮವಾರವೇ ಸಮರ್ಪಕವಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ಸರಬರಾಜು ಮಾಡಿಲ್ಲ ಎಂದು ಬೆಂಗಳೂರು ಹೋಟೆಲುಗಳ ಸಂಘವು ಆಕ್ರೋಶ ವ್ಯಕ್ತಪಡಿಸಿತ್ತು. ಆದರೂ ಮಂಗಳವಾರವೂ ಸಿಲಿಂಡರ್ ಸರಬರಾಜು ಆಗದೇ ಇರುವುದರಿಂದ ಬುಧವಾರದಿಂದ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಹೋಟೆಲ್ ಉದ್ಯಮ ಆತಂಕ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಕಲ್ಯಾಣ ಮಂಟಪ, ಕ್ಯಾಟರಿಂಗ್‌ನವರು, ಪಿಜಿಗಳನ್ನು ನಡೆಸುವವರೂ ವಾಣಿಜ್ಯ ಅನಿಲ ಸಿಲಿಂಡರ್ ಪೂರೈಕೆಯಾಗದೆ ಸಂಕಷ್ಟ ಅನುಭವಿಸಿದ್ದಾರೆ. ಕೆಲ ಹೋಟೆಲ್‌ನವರು ಸಿಲಿಂಡರ್ ಖಾಲಿಯಿಂದಾಗಿ ಸೌದೆ ಒಲೆ ಬಳಸಿದ್ದು ಕಂಡು ಬಂತು.
ದೆಹಲಿ, ಮುಂಬೈ, ಒಡಿಶಾ ಹೋಟೆಲಲ್ಲೂ ಸಮಸ್ಯೆ
ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆ ಕರ್ನಾಟಕ ಸೇರಿ ದೇಶಾದಂತ ಹೋಟೆಲ್, ರೆಸ್ಟೋರೆಂಟ್, ಬೇಕರಿ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪ.ಬಂಗಾಳ, ಒಡಿತಾ, ದೆಹಲಿ ಸೇರಿದಂತೆ ಹಲವು ರಾಜ್ಯಗಳ ಹೋಟೆಲ್ ಸಂಘ-ಸಂಸ್ಥೆಗಳು, 'ಸಮಸ್ಯೆ ತೀವ್ರ ಗತಿಯಲ್ಲಿರುವ ಕಾರಣ ಬೇಗ ಬಗೆಹರಿಸಬೇಕು. ಇಲ್ಲದಿದ್ದರೆ ಹೋಟೆಲ್ ಮುಚ್ಚುವ ಸ್ಥಿತಿ ಬಂದೀತು ಎಂದು ಸರ್ಕಾರಕ್ಕೆ ಎಚ್ಚರಿಸಿವೆ.
ಅನೇಕ ರಾಜ್ಯಗಳಲ್ಲಿ ಹೋಟೆಲ್‌ಗಳ ಸೇವೆ ಬಾಧಿತವಾಗಿದೆ. ವಿಶೇಷವಾಗಿ ಪಾಂಡಿಚೇರಿಯಲ್ಲಿ ಎಲ್‌ಪಿಜಿ ಅಭಾವದಿಂದ ಟೀ, ಕಾಫಿ ಮಾರಾಟವನ್ನೇ బంದ್ ಮಾಡಲು ನಿರ್ಧರಿಸಿದ್ದಾರೆ. ತಮಿಳುನಾಡು ಹೋಟೆಲ್ ಗಳಲ್ಲಿನ ಮೆನು ಕಡಿತಗೊಳಿಸಲಾಗಿದೆ.
ಹೋಟೆಲ್ ಸಮಸ್ಯೆ ಇತ್ಯರ್ಥಕ್ಕೆ ತಂಡ
ಯುದ್ಧದ ಕಾರಣ ವಾಣಿಜ್ಯ ಎಲ್‌ಪಿಜಿ ಪೂರೈಕೆ ಬಿಕ್ಕಟ್ಟು ತಲೆದೋರಿರುವ ಕಾರಣ, ರೆಸ್ಟೋರೆಂಟ್ ಸಂಘಗಳ ಕುಂದುಕೊರತೆಗಳನ್ನು ಪರಿಹರಿಸಲು 3 ಸದಸ್ಯರ ಸಮಿತಿ ರಚನೆ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಗ್ಯಾಸ್ ಟ್ರಬಲ್‌ಗೆ ಕೇಂದ್ರ ಕಾಯ್ದೆ ಅಸ್ತ್ರ
ಮಧ್ಯ ಪ್ರಾಚ್ಯ ಸಂಘರ್ಷದಿಂದಾಗಿ ನೈಸರ್ಗಿಕ ಅನಿಲಕ್ಕೆ ಹಾಹಾಕಾರ ಎದ್ದ ಬೆನ್ನಲ್ಲೇ ದೇಶದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮಂಗಳವಾರ ಇ.ಸಿ. ಕಾಯ್ದೆ (ಅಗತ್ಯ ವಸ್ತುಗಳ ಕಾಯ್ದೆ) ಜಾರಿ ಮಾಡಿದೆ. ಈ ಮೂಲಕ 'ಎಲ್ಲಾ ರಿಫೈನರಿ, ಪೆಟ್ರೋಕೆಮಿಕಲ್ ಘಟಕಗಳು ಎಲ್.ಪಿಜಿ ಉತ್ಪಾದನೆ ಹೆಚ್ಚಿಸಬೇಕು ಹಾಗೂ ಹೈಡೋಕಾರ್ಬನ್ ಗ್ಯಾಸ್ ಅನ್ನು ಎಲ್‌ಪಿಜಿ ತಯಾರಿಸುವ ಉದ್ದೇಶಕ್ಕೆ ಬಳಸಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ.
ಭಾರತಕ್ಕೆ ಬೇಕಾಗಿರುವ ಎಲ್‌ಪಿಜಿ ಪೈಕಿ ಶೇ.60ರಷ್ಟು ಆಮದಾಗುತ್ತದೆ. ಆ ಪೈಕಿ ಶೇ.90ರಷ್ಟು ಬರುವುದು ಕತಾರ್, ಯುಎಇ, ಸೌದಿ, ಕುವೈತ್‌ನಂತಹ ಕೊಲ್ಲಿ ದೇಶಗಳಿಂದ. ಹರ್ಮುಜ್ ಜಲಸಂಧಿ ಮೂಲಕವೇ ಗ್ಯಾಸ್ ಆಮದಾಗಬೇಕು. ಯುದ್ಧದಿಂದಾಗಿ ಆ ಜಲಸಂಧಿಯೇ ಬಂದ್ ಆಗಿದೆ. ಯುದ್ಧದ ಕಾರಣ ಬೇರೆ ದೇಶಗಳಿಂದಲೂ ಎಲ್‌ಪಿಜಿಗೆ ಬೇಡಿಕೆ ಇದೆ. ಜತೆಗೆ ಮಾರ್ಗದ ಅನಿಶ್ಚಿತತೆಯಿಂದಾಗಿ ಸಮಸ್ಯೆಯಾಗುತ್ತಿದೆ. ಬೇರೆ ಮಾರ್ಗದಲ್ಲಿ ತರಿಸಲು ತೊಂದರೆ, ವೆಚ್ಚ ಅವಧಿ ಜಾಸ್ತಿಯಾಗುತ್ತಿದೆ.