ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪರಪ್ಪನ ಅಗ್ರಹಾರ ಜೈಲು ಪಾಲಾದ ವಿನಯ್‌ ಕುಲಕರ್ಣಿ ಶಾಸಕ ಸ್ಥಾನವನ್ನೂ ಕಳೆದುಕೊಳ್ತಾರಾ? ನಾಳೆ ನಿರ್ಧಾರವಾಗಲಿದೆ ಭವಿಷ್ಯ

Vinay Kulkarni: 2016ರ ಜೂನ್‌ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ನಾಯಕ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಮಹತ್ವತದ ತೀರ್ಪು ಹೊರ ಬಿದ್ದಿದೆ. ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಯನ್ನು ಅಪರಾಧಿ ಎಂದು ತೀರ್ಮಾನಿಸಿ ಆದೇಶ ಹೊರಡಿಸಿದೆ. ಇದರಿಂದ ಅವರು ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ವಿನಯ್‌ ಕುಲಕರ್ಣಿ (ಸಂಗ್ರಹ ಚಿತ್ರ)

ಬೆಂಗಳೂರು, ಏ. 15: ಸುಮಾರು 10 ವರ್ಷಗಳ ಹಿಂದಿನ ಧಾರವಾಡದ ಬಿಜೆಪಿ ಮುಖಂಡ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ (Yogesh Gowda Murder Case) ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ (ಏಪ್ರಿಲ್‌ 15) ಮಹತ್ವದ ತೀರ್ಪು ಪ್ರಕಟಿಸಿದೆ. ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ (Vinay Kulkarni) ಸೇರಿ 16 ಮಂದಿಯನ್ನು ಅಪರಾಧಿ ಎಂದು ತೀರ್ಮಾನಿಸಿ ಆದೇಶ ಹೊರಡಿಸಿದೆ. ವಿನಯ್‌ ಕುಲಕರ್ಣಿಗೆ ಇದರಿಂದ ಭಾರಿ ಹಿನ್ನಡೆಯಾಗಿದ್ದು, ಎಲ್ಲ ಅಪರಾಧಿಗಳನ್ನು ವಶಕ್ಕೆ ಪಡೆದು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವಂತೆ ಸಿಬಿಐಗೆ ನ್ಯಾಯಾಲಯ ನಿರ್ದೇಶಿಸಿದೆ. ಶಿಕ್ಷೆಯ ಪ್ರಮಾಣ ಗುರುವಾರ ಹೊರ ಬೀಳಲಿದೆ.

ಏಪ್ರಿಲ್‌ 2ರಂದು ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ್‌ ಭಟ್‌ ಪ್ರಕಟಿಸಿದ್ದು, ಸುಳ್ಳು ಸಾಕ್ಷಿ ಹೇಳಿದ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲು ನಿರ್ದೇಶಿಸಿದ್ದಾರೆ.

ಯೋಗೀಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ಜಾಮೀನು ಅರ್ಜಿ ವಜಾ, ಜೈಲೇ ಗತಿ

ವಿನಯ್ ಕುಲಕರ್ಣಿ ಎ 15 ಆರೋಪಿ

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಎ 15 ಆರೋಪಿಯಾಗಿದ್ದರು. ಇದೀಗ ಅವರನ್ನು ದೋಷಿ ಎಂದು ಗುರುತಿಸಲಾಗಿದೆ. ವಿನಯ್ ಕುಲಕರ್ಣಿ ವಿರುದ್ಧ ಕೊಲೆ ಹಾಗೂ ಅಪರಾಧ ಸಂಚು, ಸಾಕ್ಷ್ಯನಾಶ, ಮಾರಕಾಸ್ತ್ರಗಳಿಂದ ಹಲ್ಲೆ, ಅಕ್ರಮ ಕೂಟ ಆರೋಪಗಳು ಸಾಬೀತಾಗಿದೆ. ಹೀಗಾಗಿ ಅವರು ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾರೆ ಎನ್ನಲಾಗಿದೆ.

ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿನಯ್‌ ಕುಲಕರ್ಣಿ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಒಂದು ವೇಳೆ 2ಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

ಕಾನೂನು ಏನು ಹೇಳುತ್ತದೆ?

ಜನಪ್ರತಿನಿಧಿ ಕಾಯ್ದೆ ಪ್ರಕಾರ ಕೊಲೆ ಕೇಸ್‌ನಲ್ಲಿ ಶಾಸಕರೊಬ್ಬರು ಅಪರಾಧಿ ಎಂದು ಸಾಬೀತಾಗಿ ಕೋರ್ಟ್ ಶಿಕ್ಷೆ ಘೋಷಿಸಿದ ತಕ್ಷಣ, ಅವರ ಶಾಸಕ ಸ್ಥಾನ ರದ್ದಾಗುತ್ತದೆ. ಯಾವುದೇ ಶಾಸಕ ಅಥವಾ ಸಂಸದ ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ನ್ಯಾಯಾಲಯವು ಕನಿಷ್ಠ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆ ವಿಧಿಸಿದರೆ ತಕ್ಷಣವೇ ತಮ್ಮ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ. ಅಲ್ಲದೆ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ದಿನದಿಂದ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಹೀಗಾಗಿ ಸದ್ಯ ವಿನಯ್‌ ಕುಲಕರ್ಣಿ ಭವಿಷ್ಯ ಗುರುವಾರ ಪ್ರಕಟವಾಗುವ ಶಿಕ್ಷೆಯ ಪ್ರಮಾಣದ ಮೇಲೆ ನಿಂತಿದೆ.

ಏನಾಗಲಿದೆ?

ಕಾನೂನು ಕುಣಿಕೆಯಿಂದ ಪಾರಾಗಲು ವಿನಯ್ ಕುಲಕರ್ಣಿ ಅವರಿಗೆ ಕೆಲವೊಂದು ಅವಕಾಶವೂ ಇದೆ. ತೀರ್ಪು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಕೋರಬಹುದು. ಇಲ್ಲವೆ ದೋಷಿಯನ್ನಾಗಿಸಿದ ತೀರ್ಪಿಗೂ ತಡೆಯಾಜ್ಞೆ ಕೋರಬಹುದು. ಒಂದು ವೇಳೆ ತಡೆಯಾಜ್ಞೆ ಸಿಕ್ಕರೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಉಳಿಯಲಿದೆ.

ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ದೋಷಿ; ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಘಟನೆ ವಿವರ

2016ರ ಜೂನ್‌ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜೆಪಿ ನಾಯಕ ಯೋಗೇಶ್‌ ಗೌಡ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ 2020ರ ನವೆಂಬರ್‌ 5ರಂದು ವಿನಯ್‌ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು. 2021ರ ಆಗಸ್ಟ್‌ 11ರಂದು ಸುಪ್ರೀಂ ಕೋರ್ಟ್‌ ವಿನಯ್‌ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. 2025ರ ಜೂನ್‌ 7ರಂದು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಯುತ್ತಿರುವಾಗ ವಿನಯ್‌ ಕುಲಕರ್ಣಿ ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಹೇಳಿ ಜಾಮೀನು ರದ್ದುಗೊಳಿಸಿತ್ತು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author