ದಾವಣಗೆರೆ: ಉಪ ಚುನಾವಣೆ ನಡೆಯುತ್ತಿರುವ ರಾಜ್ಯದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತ ವೈಖರಿ ಬಗ್ಗೆ ಜನರು ಬೇಸತ್ತಿದ್ದಾರೆ. ಅವರಿಗೆ ಅಜೀರ್ಣ ಆಗುವಷ್ಟು ಬಹುಮತ ಇದೆ. ಬದಲಾವಣೆ ತರುವ ಕಾತುರತೆಯಲ್ಲಿ ಇರುವ ರಾಜ್ಯದ ಜನತೆ, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಎರಡೂ ಕ್ಷೇತ್ರಗಳ ಮತದಾರರಲ್ಲಿ ಕೈ ಜೋಡಿಸಿ ವಿನಂತಿಸುವುದಾಗಿ ಹೇಳಿದರು.
ಕಾಂಗ್ರೆಸ್ಸಿನವರ ವಿಶ್ವಾಸದ್ರೋಹವು ಮುಸ್ಲಿಮರಿಗೆ ಮನವರಿಕೆ ಆಗಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಮುಸ್ಲಿಂ ಬಂಧುಗಳು ನರೇಂದ್ರ ಮೋದಿಯವರ ಆಡಳಿತವನ್ನು ನೋಡಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಈ ಚುನಾವಣೆಯಲ್ಲಿ ಸೋಲು ನಿಶ್ಚಿತವಾದ ಕಾರಣ ಮುಖ್ಯಮಂತ್ರಿಗಳು ಮನಬಂದಂತೆ ಮಾತನಾಡುತ್ತಾರೆ. ವಾತಾವರಣ ನಮ್ಮ ನಿರೀಕ್ಷೆಗೂ ಮೀರಿ ಚೆನ್ನಾಗಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ನಮ್ಮ ಅಭ್ಯರ್ಥಿ ಈಗ ತಾನೇ ನಾಮಪತ್ರ ಸಲ್ಲಿಸಿದ್ದು, ಇಲ್ಲಿ ಮತ್ತು ಬಾಗಲಕೋಟೆ ಎರಡೂ ಕಡೆ ದೊಡ್ಡ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Davanagere Byelection: ದಾವಣಗೆರೆಯಲ್ಲಿ ಸಮರ್ಥ ಶಾಮನೂರು ನಾಮಪತ್ರ; ಸಿಎಂ, ಡಿಸಿಎಂ ಸಾಥ್
ಬಿಜೆಪಿಯಿಂದ ಬೃಹತ್ ರೋಡ್ ಶೋ
ಇಂದು ದಾವಣಗೆರೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ನಗರದ ದುರ್ಗಾಂಬಿಕಾ ದೇವಸ್ಥಾನದಿಂದ ಬಿಜೆಪಿಯಿಂದ ಅದ್ಧೂರಿ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಲಾಗಿದೆ. ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಎಸ್. ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ದಾವಣಗೆರೆ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಮತ್ತು ಪ್ರಮುಖರು ಭಾಗವಹಿಸಿದ್ದರು.