ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆ ರೀತಿ ಮಾಡಿದ್ರೆ 1 ಪೈಸೆ ಸಾಲ ಮಾಡದೆ ರಾಜ್ಯದ ಆರ್ಥಿಕತೆ ನಿರ್ವಹಿಸುವೆ: ಬಿಜೆಪಿ ನಾಯಕರಿಗೆ ಸಿಎಂ ಸವಾಲು

Karnataka’s Tax Share: ರಾಜ್ಯದಲ್ಲಿ ಟ್ಯಾಕ್ಸ್ ಟೆರರಿಸಂ ಶುರುವಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೂಗಿಕೂಗಿ ಹೇಳಿದ್ದೇವೆ. ಆಗ ಬಾಯಿ ಮುಚ್ಚಿಕೊಂಡು ಏಳುಕೋಟಿ ಕನ್ನಡಿಗರಿಗೆ ದ್ರೋಹಬಗೆದಿರುವ ಬಿಜೆಪಿ ನಾಯಕರು ಈಗ ನಮ್ಮ ವಿರುದ್ಧ ಕೂಗು ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ದಾವಣಗೆರೆ ದಕ್ಷಿಣದಲ್ಲಿ ಉಪ ಚುನಾವಣೆ ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ.

ದಾವಣಗೆರೆ: ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸು ನೀಡುತ್ತಿದೆ. ಇದನ್ನು 'ತೆರಿಗೆ ಭಯೋತ್ಪಾದನೆ’' ಎನ್ನಲೇ? ‘'ತೆರಿಗೆ ದರೋಡೆ’' ಎನ್ನಲೇ? ಈ ಪ್ರಶ್ನೆಗೆ ರಾಜ್ಯದ ಬಿಜೆಪಿ ನಾಯಕರು ಉತ್ತರಿಸುವ ಧೈರ್ಯ ಮಾಡುತ್ತಾರೆಯೇ? ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಟೀಕಿಸಿದ್ದಾರೆ.

ರಾಜ್ಯದಲ್ಲಿ ಟ್ಯಾಕ್ಸ್ ಟೆರರಿಸಂ ಶುರುವಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಅವರು, ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯದಿಂದ 4.50 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಸಂಪನ್ಮೂಲವನ್ನು ತೆರಿಗೆ, ಸೆಸ್, ಸರ್ ಚಾರ್ಜ್ ಮೂಲಕ ಸಂಗ್ರಹಿಸಿದೆ. ಇದಕ್ಕೆ ಪ್ರತಿಯಾಗಿ ನೀಡಿದ್ದು 79,000 ಕೋಟಿ ರೂ. ಮಾತ್ರ. ಕಳೆದ ಮೂರು ವರ್ಷಗಳಲ್ಲಿ ಹಲವಾರು ಬಾರಿ ಈ ʼತೆರಿಗೆ ದರೋಡೆ’’ಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ದೆಹಲಿಗೆ ಹೋಗಿ ಸಂಸತ್ ಭವನದ ಎದುರಿಗೆ ನಿಂತು ಈ ಅನ್ಯಾಯವನ್ನು ಕೂಗಿಕೂಗಿ ಹೇಳಿದ್ದೇವೆ. ಆಗ ಬಾಯಿ ಮುಚ್ಚಿಕೊಂಡು ಏಳುಕೋಟಿ ಕನ್ನಡಿಗರಿಗೆ ದ್ರೋಹಬಗೆದಿರುವ ಈ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಮೊದಲಾದ ಬಿಜೆಪಿ ನಾಯಕರು ಈಗ ನಮ್ಮ ವಿರುದ್ಧ ಕೂಗು ಹಾಕುತ್ತಿದ್ದಾರೆ.

ಕರ್ನಾಟಕವು ಜಿಎಸ್‌ಟಿ ಸಂಗ್ರಹದಲ್ಲಿ ಇಂದು ಗಮನಾರ್ಹ ಸಾಧನೆ ಮಾಡಿದೆ. ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿ ರಾಜ್ಯ ಇದೆ. ಇನ್ನು ಜಿಎಸ್‌ಟಿ ಸಂಗ್ರಹದ ಬೆಳೆವಣಿಗೆ ದರವನ್ನು ಗಮನಿಸಿದರೆ ಶೇ.17ರ ಸಾಧನೆಯ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿ ಕರ್ನಾಟಕವಿದೆ. ವಿಪರ್ಯಾಸವೆಂದರೆ ಈ ಪ್ರಮಾಣದಲ್ಲಿ ಜಿಎಸ್‌ಟಿ ಹಣವನ್ನು ಕೇಂದ್ರಕ್ಕೆ ಸಂಗ್ರಹಿಸಿ ನೀಡಿದರೂ ಇದರಿಂದ ರಾಜ್ಯಕ್ಕೆ ಮರಳಿ ದೊರೆಯುತ್ತಿರುವುದು ಶೇ.52 ಪಾಲು ಮಾತ್ರ. ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನದಿಂದಾಗಿ ಕರ್ನಾಟಕವು ಸಾವಿರಾರು ಕೋಟಿ ರೂಪಾಯಿ ಕಳೆದುಕೊಂಡಿದೆ ಎಂದು ಕಿಡಿಕಾರಿದರು.

15ನೇ ಹಣಕಾಸಿನಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ತೆರಿಗೆ ಪಾಲನ್ನು ನೀಡದೆ, ಕೇಂದ್ರ ಸರ್ಕಾರ ವಿಧಿಸುವ ಸೆಸ್‌ಗಳು ಮತ್ತು ಸರ್‌‌ಚಾರ್ಜ್‌ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡದೆ, ಜಿ.ಎಸ್.ಟಿ ಜಾರಿಯಿಂದ ರಾಜ್ಯಕ್ಕೆ ಆದ ನಷ್ಟವನ್ನು ಸರಿದೂಗಿಸಲು ಪರಿಹಾರ ನೀಡದೆ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನವನ್ನು ನೀಡದೆ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರವನ್ನು ಸಾಲ ಮಾಡಲೇ ಬೇಕಾದ ಅಸಹಾಯಕ ಪರಿಸ್ಥಿತಿಗೆ ತಳ್ಳಿದೆ.

ತೆರಿಗೆ ಹಂಚಿಕೆ, ಜಿಎಸ್‌ಟಿ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡುವ ಅನುದಾನದಲ್ಲಿ ಅನ್ಯಾಯ ಮಾಡದೆ ನಮಗೆ ಸಿಗಬೇಕಾದ ನ್ಯಾಯಬದ್ಧ ಸಂಪನ್ಮೂಲದ ಪಾಲನ್ನು ನೀಡಿದರೆ ಒಂದು ಪೈಸೆ ಸಾಲವನ್ನು ಮಾಡದೆ ರಾಜ್ಯದ ಆರ್ಥಿಕತೆಯನ್ನು ನಿರ್ವಹಿಸುವೆ. ಈ ಸವಾಲನ್ನು ಸ್ವೀಕರಿಸಲು ಬಿಜೆಪಿ ನಾಯಕರು ಸಿದ್ಧರಿದ್ದಾರಾ? ಎಂದು ಸವಾಲು ಹಾಕಿದರು.

ಮಹಾರಾಷ್ಟ್ರದ ನಂತರ ಕೇಂದ್ರ ಸರ್ಕಾರಕ್ಕೆ ಅತ್ಯಧಿಕ ಪ್ರಮಾಣದ ತೆರಿಗೆ ನೀಡುವ ರಾಜ್ಯ ನಮ್ಮದು. ದೇಶದ ಸಂಪತ್ತಿಗೆ ಕರ್ನಾಟಕವು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಕೊಡುಗೆಯನ್ನು ನೀಡುತ್ತಲೇ ಬಂದರೂ ಕೇಂದ್ರದಿಂದ ಕರ್ನಾಟಕಕ್ಕೆ ದೊರೆಯಬೇಕಾದ ನ್ಯಾಯಯುತ ಪಾಲಿನಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ.

ನಮ್ಮ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದರೆ ನನಗೆ ಶಕ್ತಿ ಬರುತ್ತದೆ: ಸಿಎಂ ಸಿದ್ದರಾಮಯ್ಯ

ನಮ್ಮ ಸರ್ಕಾರ ಮಾಡಿರುವ ಸಾಲವನ್ನು ಅತಿರಂಜಿತವಾಗಿ ಬಣ್ಣಿಸುವ ಬಿಜೆಪಿ ನಾಯಕರಿಗೆ ಕೇಂದ್ರ ಸರ್ಕಾರ ಪ್ರತಿಯೊಬ್ಬ ಭಾರತೀಯನ ತಲೆ ಮೇಲೆಹೊರಿಸಿರುವ ಸಾಲದ ಹೊರೆ ಕಾಣಿಸುವುದೇ ಇಲ್ಲ. ಸನ್ಮಾನ್ಯ ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿ ಪಟ್ಟಕ್ಕೇರಿದಾಗ ಇದ್ದ ದೇಶದ ಸಾಲದ ಮೊತ್ತ 51.06 ಲಕ್ಷ ಕೋಟಿ ರೂ., 2026-27ನೇ ಸಾಲಿನ ಬಜೆಟ್ ನಲ್ಲಿ ಇದು 214 ಲಕ್ಷ ಕೋಟಿ ರೂ.ಗೆ ಏರಿದೆ. ಈ ಲೆಕ್ಕದ ಪ್ರಕಾರ ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ 1.50 ಲಕ್ಷ ರೂ.ಗಳಷ್ಟು ಸಾಲದ ಹೊರೆ ಇದೆ. ಮೋದಿಯವರ ಸಾಲದ ಹೊರೆ ರಾಜ್ಯದ ಏಳು ಕೋಟಿ ಕನ್ನಡಿಗರ ತಲೆ ಮೇಲೆಯೂ ಇದೆ ಎನ್ನುವುದನ್ನು ಬೊಮ್ಮಾಯಿ ಮತ್ತು ಅಶೋಕ್ ತಿಳಿದುಕೊಂಡು ಮಾತನಾಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.