ದಾವಣಗೆರೆ, ಅ. 16: ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಕೆಡಿಪಿ ಸಭೆಯಲ್ಲಿ (KDP Meeting) ಗರ್ಭಿಣಿ ಅಧಿಕಾರಿಯ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದು ವಿವಾದದ ಕಿಡಿ ಹೊತ್ತಿಕೊಂಡಿದೆ (Davanagere News). ತ್ರೈಮಾಸಿಕ ಕೆಡಿಪಿ ಸಭೆಗೆ ವಲಯ ಅರಣ್ಯಾಧಿಕಾರಿ ಶ್ವೇತಾ ಗೈರಾಗಿದ್ದರು. ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಅವರು ಸಭೆಗೆ ಬಂದಿರಲಿಲ್ಲ. ಇದರಿಂದ ಕೆಂಡಾಮಂಡಲರಾದ ಶಿವಗಂಗಾ ಬಸವರಾಜ್, ‘ʼಮೀಟಿಂಗ್ಗೆ ಬನ್ನಿ ಎಂದರೆ ಪ್ರಗ್ನೆಂಟ್ ಎಂದು ಹೇಳುತ್ತಾರೆ. ಆದರೆ ಸಂಬಳ ಪಡೆಯುವಾಗ, ಕಲೆಕ್ಷನ್ ಮಾಡುವಾಗ ಯಾವುದೇ ನೆಪ ಹೇಳುವುದಿಲ್ಲʼʼ ಎಂದು ಹೇಳಿದ್ದಾರೆ. ಸದ್ಯ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ʼʼಸಂಬಳದ ಜತೆ ಗಿಂಬಳ ತೆಗೆದುಕೊಳ್ಳುವಾಗ ಗರ್ಭಿಣಿಯಾಗಿರಲ್ಲ. ಆದರೆ ಸಭೆಗೆ ಬರಬೇಕೆಂದಾಗ ಮಾತ್ರ ಪ್ರೆಗ್ನೆಂಟ್ ಎನ್ನುತ್ತಾರೆ. ಪ್ರತಿ ಬಾರಿ ಚೆಕಪ್ಗೆ ಹೋಗಿದ್ದೇನೆ, ಅಲ್ಲಿ ಇದ್ದೇನೆ ಇಲ್ಲಿ ಇದ್ದೇನೆ ಎನ್ನುತ್ತಾರೆ. ಗರ್ಭಿಣಿಯಾಗಿದ್ದರೆ ರಜೆ ತಗೋಳೋಕೆ ಹೇಳಿ. ನಾಚಿಕೆ ಅಗೋದಿಲ್ವಾ ಹೀಗೆಲ್ಲ ಹೇಳಲುʼʼ ಎಂದು ಕಿಡಿಕಾರಿದರು.
ಈ ಸುದ್ದಿಯನ್ನೂ ಓದಿ: Davanagere news: ರಾಜ್ಯಕ್ಕೂ ಕಾಲಿಟ್ಟ ʼಐ ಲವ್ ಮೊಹಮ್ಮದ್ʼ ಗಲಾಟೆ, ದಾವಣಗೆರೆ ಉದ್ವಿಗ್ನ
ಅಷ್ಟಕ್ಕೆ ಸುಮ್ಮನಾಗದ ಅವರು, ʼʼಈ ಕುರಿತು ಜಿಲ್ಲಾಡಳಿತ, ಸರ್ಕಾರ ಮತ್ತು ಸಿಸಿಎಫ್‌ಗೆ ಪತ್ರ ಬರೆಯಿರಿ. ಪತ್ರದಲ್ಲಿ ನಾನು ಹೇಳಿರುವ ಎಲ್ಲ ಅಂಶಗಳನ್ನು ಉಲ್ಲೇಖಿಸಬೇಕು. ಸಭೆಗೆ ಬರಲು ಆಗದಿದ್ದರೆ ಸರ್ಕಾರದಿಂದ ಸಿಗುವ ಹೆರಿಗೆ ರಜೆ ತೆಗೆದುಕೊಂಡು ಹೋಗಲು ಹೇಳಿ. ನೋಟಿಸ್‌ಗೆ ಅವರೇ ಬಂದು ಉತ್ತರ ಕೊಡಬೇಕುʼʼ ಎಂದು ಸೂಚಿಸಿದರು.
ಗರ್ಭಿಣಿ ಅಧಿಕಾರಿಯನ್ನು ಅವಮಾನಿಸಿದ ಶಾಸಕ ಶಿವಗಂಗಾ ಬಸವರಾಜ್ ಅವರ ಹೇಳಿಕೆಯನ್ನು ಹಲವರು ಖಂಡಿಸಿದ್ದಾರೆ. ಕೂಡಲೇ ಕ್ಷಮೆಯಾಚಿಸಬೇಕೆಂದು ಅನೇಕರು ಪಟ್ಟು ಹಿಡಿದಿದ್ದಾರೆ. ಸದ್ಯ ಶಿವಗಂಗಾ ಬಸವರಾಜ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.