ದಾವಣಗೆರೆ: ವಚನಾನಂದ ಶ್ರೀಗಳನ್ನು (Vachanananda Swamiji) ಉಚ್ಚಾಟನೆ ಮಾಡಿರುವುದಕ್ಕೆ ಜಿಲ್ಲೆಯ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ‘ಲೆಕ್ಕ ಕೊಡಿ' ಮಠದ ಟ್ರಸ್ಟಿಗಳ ವಿರುದ್ಧ ಭಕ್ತರು ನಡೆಸುತ್ತಿರುವ ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಟ್ರಸ್ಟಿಗಳಿಗೆ ಚಪ್ಪಲಿ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಮಠದ ಆವರಣದಲ್ಲಿ ತಳ್ಳಾಟ, ನೂಕಾಟ ಶುರುವಾಗಿದ್ದು, ಈ ಸಂದರ್ಭದಲ್ಲಿ ವಚನಾನಂದ ಸ್ವಾಮೀಜಿ ಕೈಗೆ ಗಾಯವಾಗಿದೆ. ಇದರಿಂದ ಕೆರಳಿದ ಸ್ವಾಮೀಜಿ ಪೊಲೀಸರ ಜತೆ ವಾಗ್ದಾದಕ್ಕಿಳಿದಿದ್ದಾರೆ. ಭಕ್ತರ ಮೇಲೆ ದೌರ್ಜನ್ಯ ಮಾಡಬೇಡಿ ಎಂದು ಆಕ್ರೋಶ ಹೊರಹಾಕಿದ್ದರಿಂದ ಶ್ರೀಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಭಾರಿ ಹೈಡ್ರಾಮಾ ನಡೆದಿದೆ.
ಮಠದ ಬಳಿ ಭಕ್ತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರ ದೌರ್ಜನ್ಯದ ವಿರುದ್ದ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.
ಉಚ್ಚಾಟನೆ ಬಗ್ಗೆ ವಚನಾನಂದ ಸ್ವಾಮೀಜಿ ಹೇಳಿದ್ಧೆನು?
ನನ್ನ ಉಚ್ಚಾಟನೆ ಹಾಸ್ಯಾಸ್ಪದ. ಟ್ರಸ್ಟ್‌ನವರಿಗೆ ಲೆಕ್ಕ ಕೊಡಿ ಎಂದು ಕೇಳಿದ್ದಕ್ಕೆ ನನ್ನ ಟಾರ್ಗೆಟ್ ಮಾಡಿದ್ದಾರೆ. ವ್ಯವಸ್ಥಿತ ಷಡ್ಯಂತ್ರ ಮಾಡಿ ಉಚ್ಛಾಟನೆ ಮಾಡಿದ್ದಾರೆ. ಭಕ್ತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಪಂಚಮಸಾಲಿಗಳು ಪ್ರಬಲರಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಹಿಂದೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಇರಬಹುದು, ಸಿದ್ದಲಿಂಗ ಸ್ವಾಮೀಜಿ ಇರಬಹುದು, ಈಗ ನಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂದು ದೂರಿದರು.
ಟ್ರಸ್ಟಿಗಳ ಬಗ್ಗೆ ಮಾತನಾಡಿದ ಅವರು, ಕೆಲವರಿಗೆ ನಾವು ಹಿಂದೂಗಳು ಎಂದು ಹೇಳಬಾರದು. ಇನ್ನು ಕೆಲವರಿಗೆ ಲಿಂಗಾಯತ ಹಿಂದೂ ಎನ್ನಬಾರದು. ಇವತ್ತು ಸಭೆ ನಡೆಯುವ ಬಗ್ಗೆ ಯಾವುದೇ ನೋಟಿಸ್ ಸಹ ನೀಡಿಲ್ಲ. ಪಂಚಮಸಾಲಿ ಮಠ 12 ಜನರ ಮಠ ಅಲ್ಲ. ಈ ನಿರ್ಧಾರದಿಂದ ನನಗೆ ಯಾವುದೇ ಆತಂಕ ಇಲ್ಲ ಎಂದು ಹೇಳಿದರು.
Jaya Mruthyunjaya Swamiji: ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟಣೆ
ಸರ್ಕಾರದಿಂದ ಬಂದ ಅನುದಾನದ ಲೆಕ್ಕ ನೀಡುವಂತೆ ಭಕ್ತರು ಕೇಳಿದ್ದರು. ತಮ್ಮ ಮೇಲೆ ಬಂದ ಆರೋಪಕ್ಕೆ ಈಗ ನಮ್ಮನ್ನು ಹೊರಹಾಕಿದ್ದಾರೆ. ಪಂಚಮಸಾಲಿ ಸಮಾಜವೇ ನನ್ನ ಶ್ವಾಸ. ಸಮಾಜದ ಜನ ಹೇಳಿದಂತೆ ಕೇಳುತ್ತೇನೆ. ಪೀಠಕ್ಕೆ ಬಂದ ಮೇಲೆ ಭಕ್ತರ ಮನೆಗೆ ಹೋಗಬೇಕು ಎನ್ನುವ ಕನಸು ಕಂಡಿದ್ದೆ. ಆದರೆ ವ್ಯವಸ್ಥಿತವಾಗಿ ಹರಿಹರ, ದಾವಣಗೆರೆಗೆ ಹೋಗದಂತೆ ನೋಡಿಕೊಳ್ಳಲಾಗಿತ್ತು. ಮಠದಲ್ಲಿ ಬಸವಣ್ಣನವರ ಫೋಟೋ ಹಾಕಲು ಸಹ ಬಿಟ್ಟಿರಲಿಲ್ಲ ಎಂದು ಆರೋಪಿಸಿದ್ದಾರೆ.