ದಾವಣಗೆರೆ: ಕೋರ್ಟ್ ಆವರಣದಲ್ಲೇ ವ್ಯಕ್ತಿಯೊಬ್ಬ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ (Stabbing Case) ದಾವಣಗೆರೆಯಲ್ಲಿ ನಡೆದಿದೆ. ನಗರದ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಈ ಘಟನೆ ನಡೆದಿದೆ. ಪತ್ನಿಗೆ ಚಾಕುವಿನಿಂದ ಇರಿದ ಬಳಿಕ ತಾನೂ ಕೈಗೆ ಇರಿದುಕೊಂಡು ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪತ್ನಿ ಪವಿತ್ರಾ ಮೇಲೆ ಪತಿ ಪ್ರವೀಣ್ ಚಾಕುವಿನಿಂದ ಇರಿದು ಹಲ್ಲೆಗೈದಿದ್ದಾನೆ. ಈ ಘಟನೆಯಲ್ಲಿ ಗಾಯಗೊಂಡ ಪತ್ನಿ ಪವಿತ್ರಾ ಹಾಗೂ ಪತಿ ಪ್ರವೀಣ್‌ನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ದಾವಣಗೆರೆಯ ಜಾಲಿನಗರದ ನಿವಾಸಿ ಪ್ರವೀಣ್, ಬೆಂಗಳೂರು ಮೂಲದ ಪವಿತ್ರಾ ಜತೆ ಮದುವೆಯಾಗಿದ್ದ. ಪರಸ್ಪರ ಪ್ರೀತಿಸಿದ್ದ ಇವರು ಅಂತರ್ಜಾತಿ ವಿವಾಹ ಆಗಿದ್ದರು. ಆದರೇ ಶೀಲ ಶಂಕಿಸಿದ್ದ ಕಾರಣ ಕೆಲ ದಿನಗಳ ಹಿಂದೆ ಪತ್ನಿ ಪವಿತ್ರಾ ಗಂಡನನ್ನು ತೊರೆದು ಹೋಗಿದ್ದರು. ಇಂದು ನ್ಯಾಯಾಲಯದಲ್ಲಿ ವಿಚಾರಣೆ ಇರುವ ಕಾರಣ ದಂಪತಿ ಕೋರ್ಟ್‌ಗೆ ಆಗಮಿಸಿದ್ದರು. ಈ ವೇಳೆ ಪತ್ನಿಗೆ ಪ್ರವೀಣ್ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಮಾತು ಬಾರದ ಮಹಿಳೆ ಬಾಯಿಗೆ ಬಟ್ಟೆ ತುರುಕಿ ಅನುಚಿತ ವರ್ತನೆ; ಆರೋಪಿ ಬಂಧನ
ಬೀದರ್: ಮಾತು ಬಾರದ ಮಹಿಳೆ ಬಾಯಿಗೆ ಬಟ್ಟೆ ತುರುಕಿ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿರುವ ಘಟನೆ (Bidar News) ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಯನ್ನು ಅಬು ಪಾಷಾ ಎಂದು ಗುರುತಿಸಲಾಗಿದೆ. ಘಟನೆ ನಡೆದ ದಿನ ಸಂತ್ರಸ್ತೆಯ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದಾಗ ಆರೋಪಿ ವಿಕೃತಿ ಮೆರೆದಿದ್ದಾನೆ.
ಸಂತ್ರಸ್ತೆಯ ತಾಯಿ ಮನೆಗೆ ಮರಳುತ್ತಿದ್ದಂತೆ ಆಕೆಯನ್ನು ತಳ್ಳಿ ಆರೋಪಿ ಓಡಿಹೋಗಿದ್ದಾನೆ. ಕೂಡಲೇ ತಾಯಿ ಮಗಳ ಬಳಿ ಹೋಗಿ ಕೇಳಿದಾಗ ಸನ್ನೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಾಳೆ. ಮಹಿಳೆ ಬಾಯಿಗೆ ಬಟ್ಟೆ ತುರುಕಿ, ಆಕೆಯ ಬಟ್ಟೆ ಹರಿದು ಮಾನಭಂಗ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Stabbing Case: ಬೆಂಗಳೂರಿನ ಪಿಜಿಯಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಚಾಕು ಇರಿದ ಯುವಕ!
ಈ ಕುರಿತು ಸಂತ್ರಸ್ತೆಯ ತಾಯಿ ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, 329(4), 79 BNS, ಹಾಗೂ ಕಲಂ 3(1)w, 3(2) SC/ST ಕಾಯ್ದೆಯಡಿ ಕೇಸ್ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.