ಹುಬ್ಬಳ್ಳಿ, ಜ.9: ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ವಿಚಾರ ದೇಶದ ಸುದ್ದಿಯಾಗಿದೆ. ಜನರು ಇದರ ಸತ್ಯಾಂಶ ತಿಳಿಯಲು ಬಯಸುತ್ತಿದ್ದಾರೆ. ಆದ್ದರಿಂದ ಘಟನೆಯ ನ್ಯಾಯಾಂಗ ತನಿಖೆ ಮಾಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಆಗ್ರಹಿಸಿದ್ದಾರೆ. ಸಂತ್ರಸ್ತ ಮಹಿಳೆಯ ಮನೆಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರೊಂದಿಗೆ ಅಶೋಕ್ ಅವರು ಶುಕ್ರವಾರ ಭೇಟಿ ನೀಡಿದ್ದ ವೇಳೆ ಮಾತನಾಡಿದ್ದಾರೆ.
ಆ ಹೆಣ್ಮಗಳೇ ಬಟ್ಟೆ ಬಿಚ್ಚಿಕೊಂಡಿದ್ದಾರೆ ಎನ್ನುತ್ತಾರೆ. ಹಾಗಿದ್ದರೆ ಪೊಲೀಸರು ಕತ್ತೆ ಕಾಯುತ್ತಿದ್ದರೇ? 40 ಜನ ಪೊಲೀಸರು, ವ್ಯಾನ್ ನಿಮ್ಮದೇ, ಚಾಲಕನೂ ನಿಮ್ಮವನೇ, ಪೊಲೀಸ್- ಕಾನೂನು ನಿಮ್ಮದೇ ಇರುವಾಗ ನಿಮ್ಮಿಂದ ತಡೆಯಲಾಗಲಿಲ್ಲವೇ ಎಂದು ಕೇಳಿದರು. ಇದು ಶುದ್ಧ ಸುಳ್ಳು ಎಂದು ಆರೋಪಿಸಿದರು.
ಮಹಿಳಾ ಪರ ವಾದ ಮಾಡಬೇಕಾದ ರಾಜ್ಯ ಮಹಿಳಾ ಆಯೋಗದವರು ಏನೂ ಆಗಿಲ್ಲವೆಂದು ಬೆಂಗಳೂರಿನಲ್ಲೇ ಹೇಳಿಕೆ ಕೊಟ್ಟಿದ್ದಾರೆ ಎಂದು ಆರೋಪಿಸಿದ ಅವರು, ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಕೊಟ್ಟಿದೆ ಎಂದರು. ತನಿಖೆ ಮಾಡದೇ ನೀವು ಕ್ಲೀನ್ ಚಿಟ್ ಕೊಟ್ಟಿದ್ದು ಹೇಗೆ ಎಂದು ಸರ್ಕಾರ, ಪೊಲೀಸ್ ಇಲಾಖೆಯು ಉತ್ತರಿಸಲಿ ಎಂದು ಆಗ್ರಹಿಸಿದರು.
ಒಬ್ಬರನ್ನು ಕರೆದೊಯ್ಯಲು 40 ಜನರು ಬೇಕಾಗಿದ್ದರೇ? ಯಾರ ಒತ್ತಡದ ಮೇಲೆ ಇದನ್ನು ಮಾಡಿದ್ದೀರಿ? ಯಾರ ಸೂಚನೆ ಇತ್ತು? ಎಂದು ಕೇಳಿದರು. ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಎಂದರು. ಅದುವರೆಗೂ ಪೊಲೀಸ್ ಇನ್‍ಸ್ಪೆಕ್ಟರನ್ನು ಅಮಾನತುಗೊಳಿಸಿ; ವ್ಯಾನ್ ಒಳಗಿದ್ದವರನ್ನೂ ಅಮಾನತು ಮಾಡಿ ಎಂದು ಒತ್ತಾಯಿಸಿದರು.
ಮನರೇಗಾದಲ್ಲಿ ಕಾಂಗ್ರೆಸ್ ಅವಧಿಯಲ್ಲಿ 11 ಲಕ್ಷ ಕೋಟಿ ಭ್ರಷ್ಟಾಚಾರ: ಜೋಶಿ ಆರೋಪ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇಡೀ ದೇಶದಲ್ಲಿ ಇದೊಂದು ತಲೆತಗ್ಗಿಸುವ ಘಟನೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ನೋಟಿಸ್ ಕೊಟ್ಟಿದೆ. ಇದರ ಕುರಿತು ಪರಿಶೀಲಿಸುವುದು ನಮ್ಮ ಧರ್ಮ ಎಂದು ಹೇಳಿದರು.