ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನು ಬೇಕೋ ಅದನ್ನು ಹೇಳುತ್ತೇನೆ ಎಂದ ಡಿ.ಕೆ. ಶಿವಕುಮಾರ್

DK Shivakumar Latest Statement: ಸಂಪುಟ ಪುನಾರಚನೆ ಬಗ್ಗೆ ನೀವು ಹೈಕಮಾಂಡ್ ಜತೆ ಮಾತನಾಡುವಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ʼನಾನು ಏನನ್ನೂ ಮಾತನಾಡುವುದಿಲ್ಲ. ನನ್ನನ್ನು ಅವರೇನಾದರೂ ಕೇಳಿದರೆ ನನಗೆ ಏನು ಬೇಕೋ ಅದನ್ನು ಹೇಳುತ್ತೇನೆ. ಹೈಕಮಾಂಡ್‌ನವರು ನನ್ನನ್ನು ಏನು ಕೇಳುತ್ತಾರೆ, ಏನನ್ನು ಕೇಳುವುದಿಲ್ಲ ಎಂದು ನನಗೆ ಗೊತ್ತಿದೆ. ಅದರ ಬಗ್ಗೆ ಮಾಧ್ಯಮಗಳ ಜತೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಸಂಪುಟ ಪುನಾರಚನೆ; ನಾನು ಏನನ್ನೂ ಮಾತನಾಡುವುದಿಲ್ಲ ಎಂದ ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -

Profile
Siddalinga Swamy Nov 15, 2025 11:40 PM

ದೆಹಲಿ, ನ.15: ನನಗೆ ಏನೂ ತಿಳಿದಿಲ್ಲ. ಏನಾದರೂ ಮಾಹಿತಿ ಬೇಕೆಂದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶನಿವಾರ ರಾತ್ರಿ ಅವರು ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿಯವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದು, ಸಚಿವ ಸಂಪುಟ ಪುನರ್ ರಚನೆಗೆ ಹಸಿರು ನಿಶಾನೆ ಸಿಕ್ಕಿದೆ ಎನ್ನುವ ಮಾಹಿತಿ ಬಗ್ಗೆ ಕೇಳಿದಾಗ, ʼಅವರು ಯಾರನ್ನು ಭೇಟಿ ಮಾಡಿದ್ದಾರೋ, ಏನನ್ನು ಮಾತನಾಡಿದ್ದಾರೋ ನನಗೆ ತಿಳಿದಿಲ್ಲ. ಮುಖ್ಯಮಂತ್ರಿಯೊಬ್ಬರು ಭೇಟಿಗೆ ಬಂದಾಗ ಸಮಯ ನೀಡುವ ವಾಡಿಕೆ ಇದೆʼ ಎಂದು ತಿಳಿಸಿದರು.

ಪಕ್ಷದ ಶಿಸ್ತಿನ ಸಿಪಾಯಿ ನೀವು ಎಂದು ಮಾಧ್ಯಮದವರು ಹೇಳಿದಾಗ, ʼಪಕ್ಷ‌ ಹೇಗೆ ಹೇಳುತ್ತದೆಯೋ ಆ ರೀತಿ ಕೇಳಿಕೊಂಡು ಹೋಗಬೇಕು ನಾವೆಲ್ಲ. ಅಷ್ಟೇ ನಮ್ಮ ಕೆಲಸʼ ಎಂದರು.

ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಹಾಗೂ ಹೈಕಮಾಂಡ್ ಅನ್ನು ಭೇಟಿ ಮಾಡುತ್ತಿರುವ ಬಗ್ಗೆ ಕೇಳಿದಾಗ, ʼಭೇಟಿಯಾಗುವುದು ತಪ್ಪೇನ್ರೀ? ನೀವುಗಳು ಬೇರೆ ಪಕ್ಷದವರ ಬಳಿ ಮಾತನಾಡಿದಂತೆ ಮಾತನಾಡುತ್ತಿದ್ದೀರಿ. ಅವರು ಎಲ್ಲರನ್ನೂ ಭೇಟಿ ಮಾಡುವ ಹಕ್ಕು ಹೊಂದಿದ್ದಾರೆ. ಪ್ರಧಾನ ಮಂತ್ರಿ, ಗೃಹಸಚಿವರು, ನಿಮ್ಮನ್ನು, ನಮ್ಮ‌ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಬಹುದು ಎಂದು ಹೇಳಿದರು.

ಸಂಪುಟ ಪುನಾರಚನೆ ಬಗ್ಗೆ ನೀವು ಹೈ ಕಮಾಂಡ್ ಜತೆ ಮಾತನಾಡುವಿರಾ ಎಂದು ಕೇಳಿದಾಗ, ʼನಾನು ಏನನ್ನೂ ಮಾತನಾಡುವುದಿಲ್ಲ. ನನ್ನನ್ನು ಅವರೇನಾದರೂ ಕೇಳಿದರೆ ನನಗೆ ಏನು ಬೇಕೋ ಅದನ್ನು ಹೇಳುತ್ತೇನೆ. ಹೈಕಮಾಂಡ್‌ನವರು ನನ್ನನ್ನು ಏನು ಕೇಳುತ್ತಾರೆ, ಏನನ್ನು ಕೇಳುವುದಿಲ್ಲ ಎಂದು ನನಗೆ ಗೊತ್ತಿದೆ. ಅದರ ಬಗ್ಗೆ ಮಾಧ್ಯಮಗಳ ಜತೆ ಮಾತನಾಡುವುದಿಲ್ಲʼ ಎಂದರು. ಹೈಕಮಾಂಡ್ ಭೇಟಿ ಯಾವಾಗ ಎನ್ನುವುದರ ಬಗ್ಗೆ ತಿಳಿದಿಲ್ಲ. ಭಾನುವಾರ ಭೇಟಿಯಾಗಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Karnataka Weather: ಉತ್ತರ ಒಳನಾಡಿನಲ್ಲಿ ತೀವ್ರ ಶೀತಗಾಳಿ; ಬೀದರ್‌ನಲ್ಲಿ ರಾಜ್ಯದಲ್ಲೇ ಅತಿ ಕನಿಷ್ಠ ಉಷ್ಣಾಂಶ ದಾಖಲು

DK Shivakumar: ನಮ್ಮ ನೀರಾವರಿ ಯೋಜನೆಗಳ ಪರ ಕೋರ್ಟ್ ತೀರ್ಪಿದ್ದರೂ ಕೇಂದ್ರದಿಂದ ಅಸಹಕಾರ: ಡಿಕೆಶಿ ಬೇಸರ

ಬೆಂಗಳೂರು: ಕೃಷ್ಣಾ, ಮಹದಾಯಿ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ (Karnataka Irrigation projects) ಪರ ನ್ಯಾಯಾಲಯದ ತೀರ್ಪು ಬಂದಿದ್ದರೂ ಅಧಿಸೂಚನೆ ಹೊರಡಿಸದ, ಅನುಮತಿ ನೀಡದ ಕೇಂದ್ರ ಸರ್ಕಾರದ ಅಸಹಕಾರದಿಂದ ಈ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಬೇಸರ ವ್ಯಕ್ತಪಡಿಸಿದರು. ತಾವು ರಚಿಸಿರುವ 'ನೀರಿನ ಹೆಜ್ಜೆ' ಕೃತಿಯನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಕೃಷ್ಣಾ ನದಿ ವಿವಾದದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸುತ್ತಿಲ್ಲ. ಅಂದು ಯೋಜನೆಗೆ ಒಪ್ಪಿದ್ದ ಮಹಾರಾಷ್ಟ್ರ ಇಂದು ವಿರೋಧ ವ್ಯಕ್ತಪಡಿಸುತ್ತಿದೆ. ಮಹದಾಯಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದರೂ ಅನುಷ್ಠಾನ ಆಗಿಲ್ಲ. ಗೋವಾದಲ್ಲಿ ಒಬ್ಬ ಸಂಸದ ಇದ್ದಾನೆ. ನಮ್ಮಲ್ಲಿ 28 ಸಂಸದರಿದ್ದರೂ ನಮ್ಮ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ. ಈ ಯೋಜನೆ ಜಾರಿಗೆ ಟೆಂಡರ್ ಕರೆಯಲಾಗಿದೆ. ಆದರೆ ಕೇಂದ್ರದ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದ ಪ್ರಮುಖ ಕೃಷ್ಣಾ, ಮಹದಾಯಿ, ತುಂಗಭದ್ರಾ, ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕೇಂದ್ರದ ಮಂತ್ರಿಗಳನ್ನು ಐದು ಬಾರಿ ಭೇಟಿ ಮಾಡಿದ್ದೇನೆ. ಯಾವುದೇ ಫಲಿತಾಂಶ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಹಿತ ಕಾಪಾಡುವುದು ಹೇಗೆ? ಎಂದು ಪ್ರಶ್ನಿಸಿದರು.

ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸದರು ಧ್ವನಿ ಎತ್ತುತ್ತಿಲ್ಲ

ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು. ಅದರ ಅಧಾರದ ಮೇಲೆ ಬೊಮ್ಮಾಯಿ ಅವರು ಕೂಡ ರಾಜ್ಯ ಬಜೆಟ್‌ನಲ್ಲಿ ಅನುದಾನ ತೋರಿಸಿದ್ದರು. ಆದರೆ ಈವರೆಗೂ ಕೇಂದ್ರ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ. ಈ ಬಗ್ಗೆ ಪ್ರಶ್ನೆ ಮಾಡುವ ಆತ್ಮಸ್ಥೈರ್ಯ ಬಿಜೆಪಿಯ ಯಾವ ಸಂಸದರಿಗೂ ಇಲ್ಲ. ಅವರು ರಾಜ್ಯದ ಪರ ಒಂದೇ ಒಂದು ಮಾತು ಆಡಿಲ್ಲ. ಅಷ್ಟಾದರೂ ಇವರು ಸಂಸದರಾಗಿ ಹೇಗೆ ಮುಂದುವರಿಯುತ್ತಿದ್ದಾರೆ ಎಂಬುದೇ ನನಗೆ ಅರಿವಾಗುತ್ತಿಲ್ಲ. ಕೇವಲ ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನೆರೆಯ ತಮಿಳುನಾಡು, ಆಂಧ್ರ ಪ್ರದೇಶದವರು ತಮ್ಮ ರಾಜ್ಯದ ವಿಚಾರ ಬಂದಾಗ ಪಕ್ಷಬೇಧ ಮರೆತು ಒಂದಾಗಿ ಧ್ವನಿ ಎತ್ತುತ್ತಾರೆ. ನಮ್ಮ ಕೈಯಲ್ಲಿ ಎಷ್ಟು ದಿನ ಅಧಿಕಾರ ಇರುತ್ತದೆ ಎಂಬುದಕ್ಕಿಂತ, ಅಧಿಕಾರ ಇದ್ದಷ್ಟು ದಿನ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಕಿಡಿಕಾರಿದರು.

ನೀರು ಎಲ್ಲರಿಗೂ ಬೇಕು. ಬೆಂಗಳೂರು ಅಷ್ಟು ದೊಡ್ಡದಾಗಿ ಬೆಳೆಯಲು ಕಾರಣ ನೀರು. ಬೆಂಗಳೂರು ಜಾಗತಿಕ ನಗರ ಎಂದು ವಾಜಪೇಯಿ ಅವರು ತಿಳಿಸಿದ್ದರು. ಈ ರಾಜ್ಯದಲ್ಲಿ ಮಹರಾಜರು ಕಟ್ಟಿದ ಅಣೆಕಟ್ಟುಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಅಣೆಕಟ್ಟುಗಳು ನಿರ್ಮಾಣವಾಗಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ನನಗೆ ರಾಜಕಾರಣ ಮಾತನಾಡಲು ಇಷ್ಟವಿಲ್ಲ. ಆದರೂ ಕಾಂಗ್ರೆಸ್ ಬಿಟ್ಟು ಬೇರೆ ಸರ್ಕಾರಗಳು ರಾಜ್ಯದಲ್ಲಿ ಒಂದೇ ಒಂದು ಅಣೆಕಟ್ಟು ನಿರ್ಮಿಸಿದೆಯೇ? ಎಂದು ಪ್ರಶ್ನಿಸಿದರು.

10 ನದಿ ವಿವಾದಗಳ ಪೈಕಿ ಕರ್ನಾಟಕದ್ದೇ 5 ನದಿ ವಿವಾದಗಳಿವೆ

ದೇಶದಲ್ಲಿರುವ 10 ನದಿ ವಿವಾದಗಳ ಪೈಕಿ ಐದು ಕರ್ನಾಟಕದ್ದೇ ಆಗಿವೆ. ಈ ಬಗ್ಗೆ ಪುಸ್ತಕದಲ್ಲಿ ತಿಳಿಸಿದ್ದೇನೆ ಎಂದು ತಿಳಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ರಾಜ್ಯದಲ್ಲಿ ಪ್ರತ್ಯೇಕ ಜಲ ಆಯೋಗ ಸ್ಥಾಪಿಸಲಾಗುವುದು. ನೀರಾವರಿಯಿಂದ ಕುಡಿಯುವ ನೀರಿನ ಉದ್ದೇಶ ಹಾಗೂ ಕೈಗಾರಿಕೆಗಳಿಗೆ ನೀರು ಒದಗಿಸುವ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ಸಲಹೆ ನೀಡಲು ಈ ಆಯೋಗದ ಅಗತ್ಯವಿದೆ ಎಂದು ಹೇಳಿದರು.

ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಬಿಡುವುದರಲ್ಲಿ ನಮ್ಮ ತಕರಾರಿಲ್ಲ. ಈ ಹಿಂದೆ ಇದ್ದ ನ್ಯಾಯಾಧೀಶರು ಒಮ್ಮೆ ತಮಿಳುನಾಡಿನವರಿಗೆ ಒಂದು ಮಾತು ಕೇಳುತ್ತಾರೆ. ನಿಮ್ಮ ಪಾಲಿನ 177 ಟಿಎಂಸಿ ನೀರು ನಿಮಗೆ ಬರುತ್ತಿರುವಾಗ, ಅವರು ಅಣೆಕಟ್ಟು ಕಟ್ಟಲು ಯಾಕೆ ಅಡ್ಡಿ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. ಅದು ನನ್ನ ತಲೆಯಲ್ಲಿತ್ತು. ನಾವು ಇದನ್ನೇ ಇಟ್ಟುಕೊಂಡು ನಮ್ಮ ವಾದವನ್ನು ಬಲಿಷ್ಠವಾಗಿ ಮಂಡನೆ ಮಾಡಿದೆವು. ನಮ್ಮ ವಕೀಲರು ಬೇರೆ ರೀತಿ ವಾದ ಮಾಡಲು ಮುಂದಾಗಿದ್ದರು. ಆದರೆ ನಾನು ನಮ್ಮ ಸರ್ಕಾರದ ನಿಲುವು ಹೀಗಿದೆ, ನಮ್ಮ ವಾದ ನೇರವಾಗಿ ಸ್ಪಷ್ಟವಾಗಿ ನ್ಯಾಯಾಲಯದ ಮುಂದೆ ಮಂಡಿಸಬೇಕು ಎಂದು ಮಾರ್ಗದರ್ಶನ ನೀಡಿದೆ. ಅದರಂತೆ ವಾದ ಮಾಡಿದ ಪರಿಣಾಮ ವಿಶೇಷ ಪೀಠ ರಚನೆಯಾಗಿ ಈ ವಿಚಾರದಲ್ಲಿ ನ್ಯಾಯಾಲಯ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದೆ. ಸುಪ್ರೀಂ ಕೋರ್ಟಿನ ತೀರ್ಪು ತಮಿಳುನಾಡಿಗೂ ಅನುಕೂಲವಾಗಲಿದೆ. 66 ಟಿಎಂಸಿ ನೀರನ್ನು ಶೇಖರಣೆ ಮಾಡಿ ಕುಡಿಯುವ ಉದ್ದೇಶಕ್ಕೆ ಬಳಕೆ ಹಾಗೂ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಈ ಯೋಜನೆಯಿಂದ ನಮ್ಮ ರಾಜ್ಯಕ್ಕೆ ಆಗುವ ಉಪಯೋಗ. ಉಳಿದಂತೆ ಹೆಚ್ಚು ಅನುಕೂಲ ತಮಿಳುನಾಡಿಗೆ ಆಗಲಿದೆ ಎಂದು ತಿಳಿಸಿದರು.

ಈಗ ನಮ್ಮ ಹೋರಾಟ ಏನಿದ್ದರೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಅನುಮತಿ ಕೊಡಿಸಬೇಕು. ನಾನು ಈಗಾಗಲೇ ಮೇಕೆದಾಟು ವಿಭಾಗದ ಕಚೇರಿ ಆರಂಭಿಸಿ, ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯ ಜಮೀನು ನಿಗದಿ ಮಾಡಿದ್ದೇವೆ. ರಾಜಕೀಯದಲ್ಲಿ ಇಚ್ಛಾಶಕ್ತಿ ಇದ್ದರೆ ಇದೆಲ್ಲವೂ ಸಾಧ್ಯ ಎಂದು ಹೇಳಿದರು.

ತುಂಗಭದ್ರಾ ಸೇರಿ ಎಲ್ಲಾ ಅಣೆಕಟ್ಟು ಗೇಟ್ ಬದಲಿಸಲು ತೀರ್ಮಾನ

ಇನ್ನು ತುಂಗಭದ್ರಾ ನೀರಿನ ವಿಚಾರವಾಗಿ ಇಂದು ಬೆಳಗ್ಗೆ ಸಭೆ ನಡೆಯಿತು. ರೈತರು ನಮಗೆ ಒಂದು ಬೆಳೆ ನಷ್ಟವಾಗುತ್ತದೆ ಎಂದು ಒತ್ತಾಯ ಮಾಡುತ್ತಿದ್ದರು. ಆಗ ನಾನು ಅವರಿಗೆ ಕೇಳಿದೆ. ನಿಮಗೆ ಒಂದು ಬೆಳೆ ಮುಖ್ಯವೋ ಅಥವಾ ಅಣೆಕಟ್ಟು ಮುಖ್ಯವೋ ಎಂದು ಹೇಳಿದೆ. ಕೆಲವರು ರಾಜಕೀರಣ ಮಾಡಲು ಪ್ರಯತ್ನಿಸಿದರು. ರಾಜಕಾರಣ ಮಾಡುವುದಾದರೆ ಇಲ್ಲಿಗೆ ಬರಬೇಡಿ ಎಂದು ಹೇಳಿದೆ. ನನ್ನ ಸ್ಥಾನದಲ್ಲಿ ಕೂತು ಆಲೋಚಿಸಿ ಎಂದಾಗ ಅವರು ಒಪ್ಪಿದರು. ಅಣೆಕಟ್ಟಿನಲ್ಲಿ ಹೂಳು ತುಂಬಿ 28 ಟಿಎಂಸಿ ನೀರು ನಷ್ಟವಾಗುತ್ತಿದೆ. ಇದಕ್ಕೆ ಪರ್ಯಾಯ ಯೋಜನೆ ರೂಪಿಸುವ ಬಗ್ಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಐದು ಬಾರಿ ಕರೆ ಮಾಡಿ ಸಭೆಗೆ ಸಮಯ ನಿಗದಿ ಮಾಡುವಂತೆ ಕೋರಿದ್ದೇನೆ. ಆದರೆ ಅವರಿಗೆ ಹೆಚ್ಚಿನ ನೀರು ಸಿಗುತ್ತಿದೆ ಎಂದು ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನೀರಾವರಿ ಯೋಜನೆಗಳ ವಿಚಾರವಾಗಿ ನಮ್ಮ ಸರ್ಕಾರದಿಂದ ದಿಟ್ಟ ಕ್ರಮ

ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಬೊಮ್ಮಾಯಿ ಅವರ ಸರ್ಕಾರ ನಿಗದಿಪಡಿಸಿದ ದರವನ್ನು ರೈತರು ಒಪ್ಪಿಕೊಳ್ಳಲಿಲ್ಲ. ಆದರೆ ನಮ್ಮ ಸರ್ಕಾರ ಪ್ರತಿ ಎಕರೆಗೆ 40 ಲಕ್ಷ ಪರಿಹಾರ ನಿಗದಿ ಪಡಿಸಿ ರೈತರ ಪರಿಹಾರಕ್ಕಾಗಿಯೇ 78 ಸಾವಿರ ಕೋಟಿ ಹಣವನ್ನು ನೀಡಲು ತೀರ್ಮಾನಿಸಿದೆ. ರೈತರ ಹಿತಕ್ಕಾಗಿ ನಾವು ಈ ತೀರ್ಮಾನ ಮಾಡಿದ್ದೇವೆ. ಇನ್ನು ಕಾಲುವೆಗಳಲ್ಲಿ ಮೋಟಾರ್ ಇಟ್ಟು ನೀರು ಕದಿಯುತ್ತಿದ್ದವರ ವಿರುದ್ಧ ಕ್ರಮಕ್ಕೆ ಕಾನೂನು ತಂದಿದ್ದೇವೆ. ಎತ್ತಿನಹೊಳೆ ಯೋಜನೆಯಿಂದ ನೀರನ್ನು ಹೊರ ತೆಗೆಯಲು ಸಾಧ್ಯವಿಲ್ಲ ಎಂದು ಅನೇಕರು ಹೇಳುತ್ತಿದ್ದರು. ಆದರೆ ನಾವು ಅಧಿಕಾರಕ್ಕೆ ಬಂದ ನಂತರ ನೀರನ್ನು ಹೊರಕ್ಕೆ ಹರಿಸಿದ್ದೇವೆ. ಈ ಮಧ್ಯೆ ಅರಣ್ಯ ಇಲಾಖೆ ತಕರಾರು ಮಾಡುತ್ತಿದ್ದಾರೆ. ನಾವು ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ನೀಡುವುದಾಗಿ ಹೇಳಿದರೂ ಅನುಮತಿ ನೀಡುತ್ತಿಲ್ಲ. ಈ ಅಡಚಣೆ ಮಾಡದೇ ಇದ್ದರೆ ಇಷ್ಟುಹೊತ್ತಿಗೆ ಎತ್ತಿನಹೊಳೆ ನೀರನ್ನು ತುಮಕೂರಿನವರೆಗೆ ಹರಿಸುತ್ತಿದ್ದೆವು ಎಂದು ಹೇಳಿದರು.

ಈ ಯೋಜನೆಗಾಗಿ ಗುಬ್ಬಿಯಲ್ಲಿ ನಿರ್ಮಿಸಿರುವ ಅಕ್ವಾಡೆಕ್ ಇಡೀ ಏಷ್ಯಾದಲ್ಲಿ ಎಲ್ಲೂ ಇಲ್ಲ. ಕುಡಿಯುವ ನೀರು ತರಲು ಇದನ್ನು ನಿರ್ಮಿಸಿದ್ದೇವೆ. ಈ ಯೋಜನೆಯಲ್ಲಿ ಮೊದಲು ಕುಡಿಯುವ ನೀರನ್ನು ಪೂರೈಸಬೇಕು. ಆನಂತರ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ನೋಡೋಣ ಎಂದು ಸಿಎಂ ನನಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.

ನೀರಿಗೆ ಜಾತಿ, ಬಣ್ಣ, ಧರ್ಮದ ಭೇದವಿಲ್ಲ. ನೀರು ನಮ್ಮ ಜೀವವಾಗಿದೆ. ನೀರನ್ನು ಸದುಪಯೋಗ ಮಾಡಿಕೊಳ್ಳಬೇಕು, ರೈತರನ್ನು ಬದುಕಿಸಬೇಕು, ಈ ವಿಚಾರದಲ್ಲಿ ನನ್ನ ಕೈಲಾದ ಸೇವೆ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ. ನಾನು ಕಾವೇರಿ ಆರತಿ ಮಾಡಿದಾಗ ಅನೇಕರು ಲೇವಡಿ ಮಾಡಿ ನಕ್ಕರು. ತುಂಗಭದ್ರ ಅಣೆಕಟ್ಟು ಗೇಟ್ ತುಂಡರಿಸಿದಾಗ ವಿರೋಧ ಪಕ್ಷದವರೆಲ್ಲರೂ ಟೀಕೆ ಮಾಡಿದರು. ನಾವು ಕೆಲವೇ ದಿನಗಳಲ್ಲಿ ಅದನ್ನು ದುರಸ್ತಿ ಮಾಡಿ ಅಣೆಕಟ್ಟು, ನೀರು ಹಾಗೂ ರೈತರನ್ನು ಕಾಪಾಡಿದೆವು. ಇಂದು ಕೂಡ ತುಂಗಭದ್ರಾ ವಿಚಾರವಾಗಿ ಸಭೆ ಮಾಡಿದೆವು. ರಾಜ್ಯದ ಎಲ್ಲಾ ಅಣೆಕಟ್ಟುಗಳ ಗೇಟ್ ಬದಲಿಗೆ ತೀರ್ಮಾನಿಸಿದ್ದೇವೆ. ರಾಜಕಾರಣ ಉದ್ದೇಶದಿಂದ ಟೀಕೆ ಮಾಡಿದಾಗ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳಿದೆ ಎಂದು ಸ್ಮರಿಸಿದರು.

ಬೊಮ್ಮಾಯಿ ಅವರಿಗೂ ಆಹ್ವಾನ ನೀಡಿದ್ದೆ

ಮಾಜಿ‌ ನೀರಾವರಿ ಸಚಿವರನ್ನು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಹ್ವಾನ ಮಾಡಿದ್ದೆ. ಈ ಹಿಂದೆ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದೆ. ಆದರೆ ಅವರು ‘ನೀವು ನಮ್ಮನ್ನು ಟೀಕೆ ಮಾಡಿದ್ದೀರಿ, ಹೇಗೆ ಬರುವುದುʼ ಎಂದು ಕೇಳಿದರು. ನಾನು ಇರುವ ವಾಸ್ತವವನ್ನು ತಿಳಿಸಬೇಕು. ಯಾರು ಯಾವ ಕಾಲದಲ್ಲಿ ಎಷ್ಟು ಸಹಕಾರ ನೀಡಿದ್ದಾರೆ, ಕೇಂದ್ರ ಸರ್ಕಾರ ಎಲ್ಲಿ ಸಹಕಾರ ನೀಡಲು ವಿಫಲವಾಗಿದೆ ಎಂದು ಈ ಪುಸ್ತಕದಲ್ಲಿ ತಿಳಿಸಿದ್ದೇನೆ ಎಂದರು.

ನಮ್ಮ ರಾಜ್ಯದಲ್ಲಿ ಯಾರೇ ಜಲಸಂಪನ್ಮೂಲ ಸಚಿವರಾದರೂ ನಾಲ್ಕೂ ನೀರಾವರಿ ನಿಗಮಗಳಿಗೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಅವರೇ ಅಂತಿಮ ನಿರ್ಣಯ ಕೈಗೊಳ್ಳುತ್ತಾರೆ. ಹೀಗಾಗಿ ಮುಖ್ಯಮಂತ್ರಿಗಳಿಂದ ಪುಸ್ತಕ ಬಿಡುಗಡೆ ಮಾಡಿಸಿದ್ದೇವೆ. ನನ್ನ ಕರೆಗೆ ಓಗೊಟ್ಟು ಈ ಪುಸ್ತಕ ಬಿಡುಗಡೆಗೆ ಬಂದ ಮುಖ್ಯಮಂತ್ರಿಗಳಿಗೆ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಹುಲ್ ಗಾಂಧಿ ಅವರು ನೀವೇ ನೀರಾವರಿ ಇಲಾಖೆಯ ಜವಾಬ್ದಾರಿ ತೆಗೆದುಕೊಳ್ಳಬೇಕು. ವಿದ್ಯುತ್ ಖಾತೆ ಬೇಡ ಎಂದರು. ಇದಕ್ಕೆ ಸಿದ್ದರಾಮಯ್ಯ ಅವರೇ ಸಾಕ್ಷಿ. ಆಗ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿ ನನ್ನ ಹೆಗಲಿಗೆ ಬಂದಿತು. ಪಾವಗಡದಲ್ಲಿ ಯಾವ ರೈತರ ಜಮೀನನ್ನೂ ಸ್ವಾಧೀನ ಪಡಿಸಿಕೊಳ್ಳದೇ 13 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ಅನ್ನು ನಾವು ಮಾಡಿದ್ದೇವೆ‌. ಪ್ರತಿ ತಾಲೂಕಿನಲ್ಲೂ 20 - 50 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ನಮಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | KSET Results 2025: ಕೆಸೆಟ್-2025ರ ತಾತ್ಕಾಲಿಕ ಅಂಕಪಟ್ಟಿ ಪ್ರಕಟಿಸಿದ ಕೆಇಎ; ಇಲ್ಲಿದೆ ಲಿಂಕ್‌

ನೀರು ನೀಲಿ ಬಂಗಾರ. ಸಾಕಷ್ಟು ಇತಿಹಾಸಗಳ ಅಧ್ಯಯನ ಮಾಡಿ ಈ ಪುಸ್ತಕವನ್ನು ರಚಿಸಲಾಗಿದೆ. ಅಂತಾರಾಷ್ಟ್ರೀಯ ಒಪ್ಪಂದಗಳು, ನಮ್ಮ ರಾಜ್ಯದ ನದಿಗಳ ವಿಚಾರ ಸೇರಿದಂತೆ 10 ರಾಜ್ಯಗಳ ನದಿಗಳ ವಿಚಾರ, ದೇವೇಗೌಡರು ತೆಗೆದುಕೊಂಡು ತೀರ್ಮಾನ, ಒಪ್ಪಂದ ಹಾಗೂ ಅದರ ಯಶಸ್ಸು ಎಲ್ಲವನ್ನು ಇದರಲ್ಲಿ ಉಲ್ಲೇಖಿಸಿದ್ದೇನೆ. ಇದರಲ್ಲಿ ನಾನು ರಾಜಕೀಯ ಮಾಡದೇ ಅವರನ್ನು ಅಭಿನಂದಿಸಿದ್ದೇನೆ. ಸದನದಲ್ಲಿ ನಂಜೇಗೌಡರು ನೀರಾವರಿ ಬಗ್ಗೆ ಚರ್ಚೆ ಮಾಡುವಾಗ ನಾನು ಅದನ್ನು ಆಲಿಸಿದ್ದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.