ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಬಗ್ಗೆ ಡಿ.ಕೆ. ಶಿವಕುಮಾರ್ ಕೊಟ್ರು ಬಿಗ್ ಅಪ್‌ಡೇಟ್
DK Shivakumar: ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ʼʼರಾಜ್ಯದ ಎಲ್ಲ ಸಂಸದರನ್ನು ನಿವಾಸದಲ್ಲಿ ನಡೆದ ಸಭೆಗೆ ಆಹ್ವಾನಿಸಿದ್ದೆ. 24 ಸಂಸದರು ಆಗಮಿಸಿದ್ದರು. ಜೆಡಿಎಸ್ ಬಿಟ್ಟು ಬಿಜೆಪಿ, ಕಾಂಗ್ರೆಸ್ ಸಂಸತ್ ಸದಸ್ಯರು, ಸ್ವತಂತ್ರರು ಹಾಜರಿದ್ದರು. ಅವರ ಜತೆ ರಾಜ್ಯದ ಅನೇಕ ನೀರಾವರಿ ಯೋಜನೆಗಳನ್ನು ಪ್ರಸ್ತಾವಿಸಿದ್ದೇನೆ. ಸದ್ಯದಲ್ಲೇ ಸರ್ವ ಪಕ್ಷ ಸಭೆ ನಡೆಸಲು ನಿರ್ಧರಿಸಿದ್ದೇವೆ. ಕೃಷ್ಣ ನದಿ ನೀರಿನ ವಿಚಾರದಲ್ಲಿ ಚರ್ಚೆ ನಡೆಸಿದ್ದೇನೆʼʼ ಎಂದರು. ಜತೆಗೆ ಮಾಧ್ಯಮದವರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.
ಬೆಂಗಳೂರು, ಮಾ. 19: ''ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಸಚಿವ ಎಂ.ಬಿ. ಪಾಟೀಲ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ. ಖರ್ಚು ಎಷ್ಟಾಗುತ್ತದೆ ಎನ್ನುವ ಬಗ್ಗೆ ಸಮಾಲೋಚನೆ ನಡೆಸಬೇಕಾಗಿದೆ. ಜತೆಗೆ ಯೋಜನೆಗೆ ಅಗತ್ಯವಾದ ಜಾಗವನ್ನೂ ವಶಪಡಿಸಿಕೊಳ್ಳಬೇಕಿದೆ. ಅದನ್ನೆಲ್ಲ ಅಧ್ಯಯನ ಮಾಡಬೇಕಿದೆʼʼ ಎಂದು ಮಾಧ್ಯಮದವರ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ತರಿಸಿದರು. ʼʼಬೆಂಗಳೂರಿನಲ್ಲಿರುವ ಎಚ್ಎಎಲ್, ಜಕ್ಕೂರು, ವಾಯುನೆಲೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಕಟ್ಟಡ ಎತ್ತರದ ಮಿತಿಯಿಂದ ಅಭಿವೃದ್ಧಿ ಕಾಮಗಾರಿಗೆ ತೊಡಕಾಗಿದ್ದು, ಈ ಮಿತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಮಾಡಲಾಗಿದೆʼʼ ಎಂದರು. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪಚುನಾವಣೆಯ ಟಿಕೆಟ್ ಬಗ್ಗೆ ಸದ್ಯದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ನಮ್ಮ ಅಭ್ಯರ್ಥಿ ಗೆಲ್ಲುವುದೇ ನಮಗೆ ಮುಖ್ಯ. ಅಳೆದೂ ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಹೈಕಮಾಂಡ್ ಮುಂದಿಡುತ್ತೇವೆ. ಅವರ ತೀರ್ಮಾನವೇ ಅಂತಿಮ. ಕುಟುಂಬ ಮುಖ್ಯವಲ್ಲ. ಪಕ್ಷ ಮುಖ್ಯʼʼ ಎಂದು ತಿಳಿಸಿದರು.