ಬೆಂಗಳೂರು, ಏ. 15: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ (Yogesh Gowda Murder Case) ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ (MLA Vinay Kulkarni) ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರಿಂದ ಮತ್ತೆ ಅವರಿಗೆ ಜೈಲು ವಾಸವೇ ಗತಿಯಾಗಲಿದೆ. ಗುರುವಾರ (ಏಪ್ರಿಲ್ 16) ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಪ್ರಕರಣ ನಡೆದು ಸುಮಾರು 10 ವರ್ಷಗಳ ಬಳಿಕ ಈ ತೀರ್ಪು ಹೊರ ಬಿದ್ದಿದೆ. ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಈ ತೀರ್ಪು ಪ್ರಕಟಿಸಿದ್ದಾರೆ.
ಒಂದುವೇಳೆ ವಿನಯ್ ಕುಲಕರ್ಣಿ ಅವರಿಗೆ 3ಕ್ಕಿಂತ ಅಧಿಕ ವರ್ಷ ಜೈಲು ಶಿಕ್ಷೆಯಾದರೆ ಅವರ ಶಾಸಕ ಸ್ಥಾನ ರದ್ದಾಗಲಿದೆ. ಹೀಗಾಗಿ ನಾಳೆಯ ತೀರ್ಪಿನ ಮೇಲೆ ಅವರ ಭವಿಷ್ಯ ನಿಂತಿದೆ. ಇನ್ನು ಪ್ರಕರಣದ A 20 ವಾಸುದೇವ ನಿಲೇಕಣಿ, A21 ಸೋಮಶೇಖರ ಅವರ ಬಿಡುಗಡೆಗೆ ಕೋರ್ಟ್ ಆದೇಶಿಸಿದೆ.
ಏನಿದು ಪ್ರಕರಣ?
ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯರಾಗಿದ್ದ ಯೋಗೇಶ್ ಗೌಡ ಅವರನ್ನು 2016ರ ಜೂನ್ 15ರಂದು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರ ಬಳಿಕ ಸಿಬಿಐ ಕೈಗೆತ್ತಿಕೊಂಡು ಶಾಸಕ ವಿನಯ್ ಕುಲಕರ್ಣಿ ಅವರನ್ನು ಆರೋಪಿಯನ್ನಾಗಿ ಪರಿಗಣಿಸಿ ಬಂಧಿಸಿತ್ತು. ಬಳಿಕ ವಿನಯ್ ಕುಲಕರ್ಣಿ ಜಾಮೀನಿನ ಮೇಲೆ ಜೈಲಿನಿಂದ ಆಚೆ ಬಂದಿದ್ದರು. ಆದರೆ, ಸಾಕ್ಷ್ಯ ನಾಶ ಯತ್ನ ನಡೆಸಿದ್ದಾರೆಂದು ಸಿಬಿಐ ಸಾಕ್ಷಿ ಸಮೇತ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ವಿನಯ್ ಕುಲಕರ್ಣಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಪಡಿಸಿತ್ತು. ಅನಿವಾರ್ಯವಾಗಿ ವಿನಯ್ ಕುಲಕರ್ಣಿ 2025ರ ಜೂನ್ 13ರಂದು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾ, ಜೈಲೇ ಗತಿ
ಸಿಬಿಐ ತನಿಖೆಗೆ ಹಸ್ತಾಂತರ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ನಿರಾಕರಿಸಲಾಗಿತ್ತು. 2019ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ, ಯೋಗೇಶ್ ಗೌಡ ಕುಟುಂಬದ ಒತ್ತಾಯದ ಮೇರೆಗೆ 2019ರ ಸೆಪ್ಟೆಂಬರ್‌ನಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಾಕ್ಷ್ಯ ನಾಶ, ಬೆದರಿಕೆ ಮತ್ತು ಹತ್ಯೆಯ ಸಂಚು ರೂಪಿಸಿದ ಆರೋಪದ ಮೇಲೆ 2020ರಲ್ಲಿ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿತ್ತು.
ಕೊಲೆ ಆರೋಪ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ವಿನಯ್
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ವಿನಯ್‌ಗೆ 2021ರಲ್ಲಿ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಕೊಲೆ ಆರೋಪವಿದ್ದರೂ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತ್ತು. ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ಜಯಗಳಿಸಿದ್ದರು. ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ವಿನಯ್ ಕುಲಕರ್ಣಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದರು. ರಾಜಕೀಯ ದ್ವೇಷವೇ ಯೋಗೇಶ್ ಗೌಡ ಅವರ ಹತ್ಯೆಗೆ ಕಾರಣ ಎಂದು ಆರೋಪಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.