ಹುಬ್ಬಳ್ಳಿ: ನಗರದ ಮಂಟೂರ ರಸ್ತೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆ ಹಂಚಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಿದ್ದ ಬೃಹತ್ ಕಟೌಟ್‌ಗಳು ಮುರಿದುಬಿದ್ದು (cutout collapse) ಗಾಯಗೊಂಡವರನ್ನು ಸಿಎಂ ಸಿದ್ದರಾಮಯ್ಯ ಅವರು ಆಸ್ಪತ್ರೆಯಲ್ಲಿ ಶನಿವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಕಟೌಟ್ ಅಳವಡಿಸುತ್ತಿದ್ದಾಗ, ಆಕಸ್ಮಿಕವಾಗಿ ಕಟೌಟ್ ಬಿದ್ದು ಮೂವರು ಗಾಯಗೊಂಡು ನಗರದ ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಸತಿರಹಿತರಿಗೆ ನೂತನ ಮನೆಗಳ ವಿತರಣೆ ಕಾರ್ಯಕ್ರಮದ ನಂತರ, ಹುಬ್ಬಳ್ಳಿ ಸುಚಿರಾಯು ಆಸ್ಪತ್ರೆಗೆ ಭೇಟಿ ನೀಡಿದರು.

ಗಾಯಾಳುಗಳಾದ ಬ್ಯಾಹಟ್ಟಿಯ ಶಂಕರ ಹಡಪದ (28), ಹುಬ್ಬಳ್ಳಿಯ ಶಾಂತಾ ಕ್ಯಾರಕಟ್ಟಿ ( 60) ಮತ್ತು ಧಾರವಾಡದ ಲಕ್ಷ್ಮಿ ನಗರದ ಮಂಜುನಾಥ (33) ಅವರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ಗಾಯಾಳುಗಳು ಸಂಪೂರ್ಣ ಗುಣಮುಖರಾಗುವವರೆಗೆ ಉಚಿತವಾಗಿ ಅಗತ್ಯವಾದ ಉತ್ತಮ ಚಿಕಿತ್ಸೆ, ಔಷಧಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇಕರಾದ ಸಲೀಂ ಅಹ್ಮದ,
ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ, ಪ್ರಭಾರ ಜಿಲ್ಲಾದಿಕಾರಿ ಭುವನೇಶ ಪಾಟೀಲ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ ಹೊನಕೇರಿ ಹಾಗೂ ಸುಚಿರಾಯು ಆಸ್ಪತ್ರೆಯ ತಜ್ಞ ವೈದ್ಯರು, ಸಿಬ್ಬಂದಿಗಳು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮ ಗ್ಯಾರಂಟಿ ಯೋಜನೆಗಳು ಇರುವುದೇ ಬಡವರನ್ನು ಮುಖ್ಯವಾಹಿನಿಗೆ ತರಲು: ಸಿಎಂ
ಕೊಳೆಗೇರಿ ಜನರೂ ಮುಖ್ಯವಾಹಿನಿಗೆ ಬರಬೇಕು. ಇದಕ್ಕಾಗಿ ಇಷ್ಟು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಇರುವುದೇ ಬಡವರನ್ನು ಮುಖ್ಯವಾಹಿನಿಗೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಇಂದು ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಅರ್ಹ ಫಲಾನುಭವಿಗಳಿಗೆ ನೂತನ ಮನೆಯ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಸಿಎಂ ಮಾತನಾಡಿದರು.
ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಕಾಂಗ್ರೆಸ್ ಸರ್ಕಾರ 14,58,000 ಮನೆಗಳನ್ನು ಕಟ್ಟಿ ವಸತಿ ಕ್ರಾಂತಿ ಮಾಡಿದ್ದೆವು. ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ 2024 ರಲ್ಲಿ 36,789 ಮನೆಗಳನ್ನು ಮೊದಲನೇ ಹಂತದಲ್ಲಿ ವಿತರಿಸಿದ್ದ ನಮ್ಮ ಸರ್ಕಾರವು, ಈಗ ಎರಡನೇ ಹಂತದಲ್ಲಿ 45 ಸಾವಿರ ಮನೆಗಳನ್ನು ಹಂಚುತ್ತಿದೆ. ನಾವು ಹೇಳಿದ್ದನ್ನೆಲ್ಲಾ ಮಾಡಿ ನುಡಿದಂತೆ ನಡೆದಿದ್ದೇವೆ. ಅವರು ಹೇಳಿದ್ದನ್ನು ಮಾಡದೆ ನಮ್ಮ ಬಗ್ಗೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಟೀಕಿಸಿದರು.
ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದರು. ಹಾಕಿದ್ರಾ?, ಮಹದಾಯಿ, ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ ಎಲ್ಲದರಲ್ಲೂ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಾತು ತಪ್ಪಿದೆ. ರಾಜ್ಯದ ಜನತೆಗೆ ವಂಚಿಸಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಇದಕ್ಕೆಲ್ಲಾ ಉತ್ತರಿಸಬೇಕು.
ಒಂದು ಮನೆಗೆ 4 ರಿಂದ 5 ಲಕ್ಷ ರೂಪಾಯಿಯನ್ನು ಕೊಡೋದು ರಾಜ್ಯ ಸರ್ಕಾರ. ಕೇಂದ್ರ ಸರ್ಕಾರ ಕೊಡೋದು ಒಂದು ಲಕ್ಷಕ್ಕಿಂತ ಕಡಿಮೆ. ಆದರೆ ಹೆಸರು ಮಾತ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆ. ಹಣ ನಮ್ಮದು ಅಂದರೆ ರಾಜ್ಯ ಸರ್ಕಾರದ್ದು. ಹೆಸರು ಮಾತ್ರ ಕೇಂದ್ರದ್ದು. ನಮ್ಮ ಸರ್ಕಾರ ಬಂದ ಬಳಿಕ 5,500 ಕೋಟಿ ರೂಪಾಯಿ ಹಣವನ್ನು ಎರಡು ವರ್ಷದಲ್ಲಿ ವಸತಿ ಯೋಜನೆಗಳಿಗಾಗಿ ಖರ್ಚು ಮಾಡಿದ್ದೇವೆ.
ಹುಬ್ಬಳ್ಳಿಯಲ್ಲಿ 88,345 ಮನೆಗಳ ವಿತರಣೆಗೆ ಸಿಎಂ ಚಾಲನೆ; ಬಡವರು, ನಿರಾಶ್ರಿತರ ಮುಖದಲ್ಲಿ ಮಂದಹಾಸ
ಇಷ್ಟೆಲ್ಲಾ ಆದರೂ ಸರ್ಕಾರದ ಬೊಕ್ಕಸ ಖಾಲಿ ಎಂದು ಬಿಜೆಪಿ ಸುಳ್ಳು ಹಂಚುತ್ತಾ ತಿರುಗುತ್ತಿದೆ. ರೈತರ ಪಂಪ್ ಸೆಟ್ ಗಳಿಗೆ ₹2,500 ಕೋಟಿ ಸಬ್ಸಿಡಿ ಪ್ರತಿ ವರ್ಷ ಕೊಡುತ್ತಿದ್ದೇವೆ. ಇದರ ಜೊತೆಗೆ ವಿಧವಾ ವೇತನ, ವೃದ್ದಾಪ್ಯ ವೇತನ ಸೇರಿ ಪ್ರತಿಯೊಂದಕ್ಕೂ ಹೇರಳವಾಗಿ ಹಣ ಬಿಡುಗಡೆ ಮಾಡುತ್ತಲೇ ಇದ್ದೇವೆ. ರಾಜ್ಯ ಮತ್ತು ನಮ್ಮ ಸರ್ಕಾರ ಎರಡೂ ಸದೃಢವಾಗಿದೆ ಎಂದು ಹೇಳಿದರು.