ಹುಬ್ಬಳ್ಳಿ: ಯುವತಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ (Anjali Ambiger murder case) ಅಪರಾಧಿ ಗಿರೀಶ್ ಅಲಿಯಾಸ್ ವಿಶ್ವನಾಥ್ ಎಸ್.ಸಾವಂತ್ಗೆ ಜೀವಾವಧಿ ಶಿಕ್ಷೆ ವಿಧಿಸಿ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ಆರೋಪಿಯಾಗಿದ್ದ ಗಿರೀಶ್ನನ್ನು ದೋಷಿ ಎಂದು ನ.21ರಂದು ನ್ಯಾಯಾಲಯ ಘೋಷಿಸಿತ್ತು. ಇದೀಗ ಶಿಕ್ಷೆ ಪ್ರಕಟಿಸಲಾಗಿದೆ. ಇನ್ನು ಹಂತಕನಿಗೆ 45 ಸಾವಿರ ರೂ. ದಂಡ ವಿಧಿಸಿದ್ದು, ಇದರಲ್ಲಿ 42 ಸಾವಿರ ರೂಪಾಯಿ ಅಂಜಲಿ ಕುಟುಂಬಕ್ಕೆ ಪರಿಹಾರವಾಗಿ ನೀಡಲು ಕೋರ್ಟ್ ಆದೇಶಿಸಿದೆ.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 451, 302 ಹಾಗೂ 201ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಲ್ಲಿ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಲಾಗಿತ್ತು. ಶಿಕ್ಷೆಯ ಪ್ರಮಾಣದ ಕುರಿತು ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿದೆ.
ಏನಿದು ಪ್ರಕರಣ?:
2024ರ ಮೇ 15ರಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿರುವ ನಿವಾಸದಲ್ಲಿ 20 ವರ್ಷದ ಅಂಜಲಿ ಅಂಬಿಗೇರ ಬರ್ಬರವಾಗಿ ಹತ್ಯೆಯಾಗಿದ್ದಳು. ಮನೆಯಲ್ಲಿದ್ದ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಗಿರೀಶ್ ಅಲಿಯಾಸ್ ವಿಶ್ವನಾಥ್ ಎಸ್.ಸಾವಂತ್ ಆರೋಪಿಯಾಗಿದ್ದ.
ಅಂಜಲಿ ಮತ್ತು ಆರೋಪಿಯ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ್ದೇ ಕೊಲೆಗೆ ಕಾರಣ ಎಂಬ ಅಂಶ ತನಿಖೆಯಲ್ಲಿ ತಿಳಿದುಬಂದಿತ್ತು. ಅಂಜಲಿ ಸಂಪರ್ಕ ಕಡಿದುಕೊಂಡಿದ್ದ ಹಿನ್ನೆಲೆಯಲ್ಲಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.
ಸಹಪಾಠಿಗಳ ಮುಂದೆ 'ಶೋ ಆಫ್' ಮಾಡಲು ಗನ್ ತಂದ 9ನೇ ಕ್ಲಾಸ್ ವಿದ್ಯಾರ್ಥಿ! ಆಕಸ್ಮಿಕ ಗುಂಡೇಟಿಗೆ ಸಹಪಾಠಿ ಗಂಭೀರ ಗಾಯ
ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಾವಣಗೆರೆ ಸಮೀಪ ರೈಲ್ವೆ ಪೊಲೀಸರ ನೆರವಿನಿಂದ ಬಂಧಿಸಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ತನಿಖೆ ಪೂರ್ಣಗೊಳಿಸಿದ ಸಿಐಡಿ ಅಧಿಕಾರಿಗಳು, 2024ರ ಆಗಸ್ಟ್ನಲ್ಲಿ ನ್ಯಾಯಾಲಯಕ್ಕೆ 494 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಂಡಿರುವ ಹಿನ್ನೆಲೆ ಇದೀಗ ಹುಬ್ಬಳ್ಳಿಯ ನ್ಯಾಯಾಲಯವು ಅಪರಾಧಿಗೆ ಶಿಕ್ಷೆ ಪ್ರಕಟಿಸಿದೆ.