ಧಾರವಾಡ: ಜಿಲ್ಲೆಯ ಕಲಘಟಗಿ (Kalaghatagi) ತಾಲೂಕಿನ ಮಾಚಾಪುರದಲ್ಲಿ ಮಂಗಳವಾರ ಭಾರೀ ಆಲಿಕಲ್ಲು ಮಳೆಯಾಗಿದ್ದು (Hailstorm), ಇದರಿಂದ ರಸ್ತೆಗಳು ಹಾಗೂ ಮನೆಗಳ ಮೇಲೆ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದು, ಈ ಪ್ರದೇಶ ಕಾಶ್ಮೀರದಂತೆ ಬದಲಾಗಿರುವುದು ಕಂಡುಬಂದಿದೆ. ಆಲಿಕಲ್ಲು ಸಹಿತ ಮಳೆ ಪರಿಣಾಮ ಗ್ರಾಮವೆಲ್ಲ ಬಿಳಿ ಹೊದಿಕೆಯಿಂದ ಆವೃತವಾಗಿ ಹಿಮಪ್ರದೇಶದಂತೆ ಕಾಣಿಸಿತು. ಮಳೆ ನಿಂತ ಕೂಡಲೇ ಜನರು ಮನೆಗಳಿಂದ ಹೊರಬಂದು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಬಗ್ಗೆ ಭಾರತ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಡಾ. ಸಿ.ಎಸ್. ಪಾಟೀಲ್ ಅವರು ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಉಂಟಾದ ತೀವ್ರ ಗಾಳಿಚಲನೆ, ಉಷ್ಣತೆ ಹಾಗೂ ತೇವಾಂಶದ ಸಂಯೋಜನೆಯಿಂದ ಈ ರೀತಿಯ ಆಲಿಕಲ್ಲು ಮಳೆ ಸಂಭವಿಸಿದೆ. ಮಾನ್ಸೂನ್ ಪೂರ್ವ ಮಳೆಯ ಅವಧಿಯಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದು ಹೇಳಿದ್ದಾರೆ.
ಕರ್ನಾಟಕದ ಉತ್ತರ ಒಳನಾಡಿನಲ್ಲಿ ಗಾಳಿಯ ವ್ಯತ್ಯಾಸ ಮತ್ತು ಉತ್ತರ ದಕ್ಷಿಣ ದಿಕ್ಕಿನಲ್ಲಿನ ವಾಯುಭಾರ ಕುಸಿತವು ಅತಿಯಾದ ಆಲಿಕಲ್ಲು ಮಳೆಗೆ ಕಾರಣವಾಗಿದೆ. ಇದರೊಂದಿಗೆ, ಅತಿಯಾದ ಬಿಸಿಲು ಕೂಡ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಇನ್ನು ಈ ಬಗ್ಗೆ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, ಎರಡು ಗಂಟೆಗಳಿಗೂ ಹೆಚ್ಚು ಕಾಲ ಮಳೆ ಸುರಿಯಿತು. ಆ ಸಮಯದಲ್ಲೇ ನಿರಂತರವಾಗಿ ಆಲಿಕಲ್ಲುಗಳು ಬೀಳುತ್ತಲೇ ಇದ್ದವು. ರಸ್ತೆಗಳೆಲ್ಲ ಹಿಮಪಾತದಂತೆ ಕಂಗೊಳಿಸಿತು. ಇಂತಹ ದೃಶ್ಯ ನಾವು ಎಂದೂ ನೋಡಿರಲಿಲ್ಲ ಎಂದು ಹೇಳಿದ್ದಾರೆ.
ತೋಟಗಾರಿಕೆ ಬೆಳೆಗಳಿಗೆ ಹೊಡೆತ
ಪ್ರಕೃತಿಯ ಈ ವಿಸ್ಮಯ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಕೊಯ್ಲು ಮಾಡಲು ಸಿದ್ಧವಾಗಿದ್ದ ಟೊಮ್ಯಾಟೋ ಬೆಳೆ ಸಂಪೂರ್ಣವಾಗಿ ನಾಶಗೊಂಡಿದೆ. ಇದಲ್ಲದೆ ತೋಟಗಾರಿಕೆ ಬೆಳೆಗಳು ಮತ್ತು ಸಸಿಗಳು ಕೂಡ ಹಾನಿಯಾಗಿದ್ದು, ಭಾರೀ ಮಳೆ ರೈತರಿಗೆ ಹೊಡೆತ ನೀಡಿದಂತಾಗಿದೆ. ಆಲಿಕಲ್ಲು ಮಳೆಯಿಂದಾಗಿ ಕೆಲ ಮನೆಗಳ ಮೇಲ್ಚಾವಣಿಗೂ ಹಾನಿ ಉಂಟಾಗಿದ್ದು, ರೈತರು ಸ್ಥಳೀಯ ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.