ಹುಬ್ಬಳ್ಳಿ: ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಶಿವಶಂಕರ ಕಾಲೋನಿ ಬಳಿ ನಡೆದಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ದುರಂತ ನಡೆದಿದೆ. ಮೃತರನ್ನು ಹುಬ್ಬಳ್ಳಿಯ ಭರತ್ ನಗರದ ನಿವಾಸಿ, 38 ವರ್ಷದ ವಿದ್ಯಾ ಮಂಜುನಾಥ ಗೌಡ ಎಂದು ಗುರುತಿಸಲಾಗಿದೆ.
ವಿದ್ಯಾ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಮನೆಯಿಂದ ಲ್ಯಾಬ್ಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮಾಂಜಾ ದಾರ ಕುತ್ತಿಗೆಗೆ ಸಿಲುಕಿದ ಪರಿಣಾಮ ವಿದ್ಯಾ ಸ್ಕೂಟಿಯಿಂದ ಕೆಳಗೆ ಬಿದ್ದಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿ ಮೃತ ಮಹಿಳೆಯ ದೇಹವನ್ನು ಪರಿಶೀಲಿಸಿದರು. ಕುಟುಂಬಸ್ಥರಿಂದ ಘಟನೆಯ ಕುರಿತು ಮಾಹಿತಿ ಪಡೆದರು. ಬಳಿಕ ಎಚ್ಚರಿಕೆ ನೀಡಿದ ಪೊಲೀಸ್ ಆಯುಕ್ತರು, ಗಾಳಿಪಟ ಹಾರಿಸಲು ಮಾಂಜಾ ದಾರ ಬಳಸುವವರನ್ನು ಪತ್ತೆಹಚ್ಚಲಾಗುವುದು. ಮಾಂಜಾ ದಾರ ಬಳಸುವವರ ವಿರುದ್ಧ ಮಾತ್ರವಲ್ಲದೆ, ಅದನ್ನು ಮಾರಾಟ ಮಾಡುವವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಮಾಂಜಾ ದಾರ ಬಳಸಬಾರದು ಎಂದು ಅವರು ಎಚ್ಚರಿಸಿದ್ದಾರೆ.