ಹುಬ್ಬಳ್ಳಿ, ನ.23: ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಜ್ಞಾನೋದಯ ಆದಂತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ (Pralhad Joshi) ಪ್ರತಿಕ್ರಿಯಿಸಿದ್ದಾರೆ. ಕಬ್ಬು ಬೆಳೆಗಾರರು ಮತ್ತು ಮೆಕ್ಕೆಜೋಳ ರೈತರ ವಿಚಾರದಲ್ಲಿ ಸಿಎಂ ಸ್ವಲ್ಪ ತಡವಾಗಿ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತುಕೊಂಡಿದ್ದಾರೆ. ಅಂತೂ ಎಥನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳ ಖರೀದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಡಿಸ್ಟಿಲರಿಗಳಿಗೆ ಪತ್ರ ಬರೆದಿದ್ದಾರೆಂದು ಜೋಶಿ ಹೇಳಿದ್ದಾರೆ.
ಎಥನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳ ಖರೀದಿಗೆ NCCF ಮತ್ತು NAFED ಜತೆ ಒಪ್ಪಂದ ಮಾಡಿಕೊಳ್ಳುವಂತೆ ಡಿಸ್ಟಿಲರಿಗಳಿಗೆ ಪತ್ರ ಬರೆಯುವ ಬುದ್ಧಿ ಈಗಲಾದರೂ ಬಂದಿತಲ್ಲ ಎಂದಿರುವ ಜೋಶಿ, ಇಷ್ಟು ದಿನ ಪ್ರತಿಯೊಂದಕ್ಕೂ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತಿದ್ದ ಸಿಎಂಗೆ ಈಗ ಜ್ಞಾನೋದಯವಾಗಿದೆ ಎಂದಿದ್ದಾರೆ.
ಎಥನಾಲ್ ಉತ್ಪಾದನೆಗಾಗಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಿಕೊಳ್ಳಲು NCCF ಮತ್ತು NAFED ನೊಂದಿಗೆ ಒಪ್ಪಂದ ಮಾಡಿಕೊಳ್ಳತಕ್ಕದ್ದೆಂದು ಸಿಎಂ ಇದೀಗ ಡಿಸ್ಟಿಲರಿಗಳಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರಕ್ಕೆ ತನ್ನ ಕಾರ್ಯದ ಬಗ್ಗೆ ಅರಿವಾದಂತಿದೆ ಎಂದಿದ್ದಾರೆ.
ಇದನ್ನೂ ಓದಿ : CM Siddaramaiah: ಸಿಎಂ ಆಗಿ ನಾನೇ ಮುಂದುವರಿಯುವೆ: ಮುಖ್ಯಮಂತ್ರಿ ಬದಲಾವಣೆ ವದಂತಿ ನಿರಾಕರಿಸಿದ ಸಿದ್ದರಾಮಯ್ಯ
ರಾಜ್ಯ ಸರ್ಕಾರ ಹೊಣೆಗಾರಿಕೆ ಮರೆತ ಬಗ್ಗೆ ನಿನ್ನೆ ತಾನೇ ಮಾಧ್ಯಮಗಳೆದುರು ಪ್ರಸ್ತಾಪಿಸಿದ್ದೆ. ಮೆಕ್ಕೆಜೋಳ ಖರೀದಿ ವಿಚಾರವಾಗಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು (SOP) ಪಾಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿತ್ತು. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ರಾಜ್ಯ ಸರ್ಕಾರಕ್ಕೆ ಇದೀಗ ಬುದ್ಧಿ ಬಂದಿದೆ ಎಂದಿದ್ದಾರೆ.
ಇನ್ನಾದರೂ ಕೇಂದ್ರದತ್ತ ಬೆರಳು ತೋರದಿರಲಿ:
ಸಿಎಂ ಸಿದ್ದರಾಮಯ್ಯ ಅವರು ಇನ್ನಾದರೂ ರೈತರಲ್ಲಿ ಇಲ್ಲ ಸಲ್ಲದ ಗೊಂದಲ ಸೃಷ್ಟಿಸುವುದನ್ನು ಬಿಡಲಿ. ತಮ್ಮ ಸರ್ಕಾರದ ಆಡಳಿತ ವೈಫಲ್ಯ ಮರೆಮಾಚುವುದಕ್ಕಾಗಿ ಕೇಂದ್ರ ಸರ್ಕಾರದತ್ತ ಬೆರಳು ತೋರುವುದನ್ನು ಇಲ್ಲಿಗೇ ನಿಲ್ಲಿಸಲಿ. ರಾಜ್ಯದಲ್ಲಿ ಜನ ಕೊಟ್ಟ ಅಧಿಕಾರವನ್ನು ಜನರಿಗಾಗಿ ಸದ್ವಿನಿಯೋಗ ಆಗುವಂತೆ ಪಾರದರ್ಶಕ ಆಡಳಿತ ನಿರ್ವಹಿಸಲಿ ಎಂದು ಸಚಿವ ಪ್ರಲ್ಹಾದ ಜೋಶಿ ಸಲಹೆ ಮಾಡಿದ್ದಾರೆ.
ಮೆಕ್ಕೆಜೋಳ ಖರೀದಿ-ಆಮದು ಬಗ್ಗೆ ಸಿಎಂ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ: ಪ್ರಲ್ಹಾದ್ ಜೋಶಿ ಕಿಡಿ
ಹುಬ್ಬಳ್ಳಿ, ನ.22: ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಮತ್ತು ಆಮದು ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿ ಹಸಿ ಸುಳ್ಳುಗಳನ್ನೇ ಬಿತ್ತರಿಸುತ್ತ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ರಾಜ್ಯದ ರೈತರ ಹಿತರಕ್ಷಣೆ ಕಡೆಗಣಿಸಿದೆ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ತನ್ನ ಆಡಳಿತ ವೈಫಲ್ಯದಿಂದ ಕಂಗೆಟ್ಟು ಈಗ ಕೇಂದ್ರದ ಮೇಲೆ ಗೂಬೆ ಕೂರಿಸಲು ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮೆಕ್ಕೆಜೋಳ ಖರೀದಿ, ಎಥನಾಲ್ ಉತ್ಪಾದನೆ ಮತ್ತು ಬೆಂಬಲ ಬೆಲೆ ನೀಡುವಲ್ಲಿ ರಾಜ್ಯ ಸರ್ಕಾರ ತಾನು ತತ್ ಕ್ಷಣ ಕೈಗೊಳ್ಳಬೇಕಾದ ಕಾರ್ಯ ಮರೆತು ಕೇಂದ್ರದತ್ತ ಬೊಟ್ಟು ತೋರುತ್ತಿದೆ. ಅಲ್ಲದೇ, ಸಿಎಂ ಮೆಕ್ಕೆಜೋಳ ಆಮದು ಬಗ್ಗೆ ಹಸಿ ಹಸಿ ಸುಳ್ಳುಗಳ ರೈಲು ಬಿಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಸಂಬಂಧ ಸಿಎಂಗೆ ನೇರಾ ನೇರಾ ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ.
ಡಿಸ್ಟಿಲರಿಗಳಿಗೇಕೆ ಸೂಚನೆ ನೀಡಿಲ್ಲ?
ಎಥನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳದ ಖಾತರಿ ಖರೀದಿಗೆ NCCF ಅಥವಾ NAFED ಜತೆ ಒಪ್ಪಂದ ಮಾಡಿಕೊಳ್ಳಲು ರಾಜ್ಯದ ಡಿಸ್ಟಿಲರಿಗಳಿಗೆ ನೀವೇಕೆ ಸೂಚನೆ ನೀಡಿಲ್ಲ? ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದಿಂದಲೇ ಪರವಾನಗಿ ಪಡೆದ ಈ ಡಿಸ್ಟಿಲರಿಗಳಿಗೆ ಮೆಕ್ಕೆಜೋಳ ಖರೀದಿಗಾಗಿ ಅಧಿಕೃತ ಒಪ್ಪಂದ ಮಾಡಿಕೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕಿತ್ತು ಎಂದು ಜೋಶಿ ತಿರುಗೇಟು ನೀಡಿದ್ದಾರೆ.
ಡಿಸ್ಟಿಲರಿಗಳಿಗೆ ಬೆಂಬಲ ಬೆಲೆ ಏಕೆ ಕಡ್ಡಾಯಗೊಳಿಸಿಲ್ಲ?; ಡಿಸ್ಟಿಲರಿಗಳು ಕನಿಷ್ಠ ಬೆಂಬಲ ಬೆಲೆ (MSP) ಯಲ್ಲೇ ಮೆಕ್ಕೆಜೋಳ ಖರೀದಿಸಬೇಕೆಂದು ಕಡ್ಡಾಯಗೊಳಿಸಿಲ್ಲವೇಕೆ ಸ್ಥಳೀಯ ಖರೀದಿ ನಿಯಮಗಳನ್ನು ಜಾರಿಗೊಳಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರದ ಬಳಿ ಇದೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Pralhad Joshi: ಸಿಎಂ ಅಲ್ಪಸಂಖ್ಯಾತರ ವಿಷಯದಲ್ಲಿ ಮಾತ್ರ ಅತೀ ಉದಾರಿ: ಪ್ರಲ್ಹಾದ್ ಜೋಶಿ
ಒಂದು ವೇಳೆ ಡಿಸ್ಟಿಲರಿಗಳು ಎಂಎಸ್‌ಪಿಗಿಂತ ಕಡಿಮೆ ದರದಲ್ಲಿ ಮೆಕ್ಕೆಜೋಳ ಖರೀದಿಸುತ್ತಿದ್ದರೆ ಅದಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಸೂಕ್ತ ಆದೇಶ ನೀಡದಿರುವುದೇ ಪ್ರಮುಖ ಕಾರಣ' ಎಂದು ಚಾಟಿ ಬೀಸಿದ ಸಚಿವರು, ಡಿಸ್ಟಿಲರಿಗಳು ಬೇಡಿಕೆ ನೀಡಬೇಕೆಂದು SOP ಯಲ್ಲಿ ಸ್ಪಷ್ಟವಾಗಿ ಹೇಳಿದೆ. ಅಲ್ಲದೇ, ಈ ಎಲ್ಲಾ ಡಿಸ್ಟಿಲರಿಗಳು ರಾಜ್ಯ ಸರ್ಕಾರದ ಅಬಕಾರಿ ಇಲಾಖೆ ಅಡಿ ಬರುತ್ತವೆ. ಇದೆಲ್ಲಾ ಗೊತ್ತಿದ್ದರೂ ನಿಮ್ಮ ವೈಫಲ್ಯ, ಆಡಳಿತ ನಿಷ್ಕ್ರಿಯತೆ ಮರೆಮಾಚಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಸಿಎಂ ವಿರುದ್ಧ ಕಿಡಿ ಕಾರಿದರು.