ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿನ್ನೆ ರಾಮನಗರ, ಇಂದು ಶಿಗ್ಗಾಂವಿ-ಸವಣೂರು, ಹುಬ್ಬಳ್ಳಿ-ಧಾರವಾಡ ಎಲ್ಲೆಡೆಯೂ SIR ಅಕ್ರಮಗಳ ಸುರಿಮಳೆ: ಜೋಶಿ ಆರೋಪ

Karnataka SIR: ರಾಮನಗರ, ಶಿಗ್ಗಾಂವಿ-ಸವಣೂರು, ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ ಹಲವೆಡೆ SIR ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕಿನಿಂದಲೇ ಕಾನೂನು ಬಾಹಿರವಾಗಿ ಅಕ್ರಮವೆಸಗಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪ ಮಾಡಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

ನವದೆಹಲಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (Karnataka SIR) ವೇಳೆ ನಿನ್ನೆ ರಾಮನಗರ, ಇಂದು ಶಿಗ್ಗಾಂವಿ-ಸವಣೂರು, ಹುಬ್ಬಳ್ಳಿ-ಧಾರವಾಡದಲ್ಲಿ ಅಕ್ರಮ ನಡೆದಿದೆ. ಮಸೀದಿಗಳಲ್ಲಿ ಕುಳಿತು ಫಾರ್ಮ್‌ ಭರ್ತಿ ಮಾಡುತ್ತಿದ್ದು, ರಾಜ್ಯಾದ್ಯಂತ SIR ಅಕ್ರಮಗಳ ಸುರಿಮಳೆಯಾಗುತ್ತಿದೆ. ಬೃಹತ್ ಹಗರಣವೇ ನಡೆಯುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ಮಸೀದಿಯಲ್ಲಿ ಕುಳಿತು ಫಾರ್ಮ್‌ ಭರ್ತಿ ಮಾಡಿಕೊಡಲಾಗುತ್ತಿದೆ. ಸಾಲದ್ದಕ್ಕೆ ರಾಜಾರೋಷವಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಬಹಿರಂಗ ಪ್ರಚಾರ ಸಹ ಮಾಡಲಾಗುತ್ತಿದೆ. ತಕ್ಷಣವೇ ಇದಕ್ಕೆಲ್ಲ ಬ್ರೇಕ್‌ ಹಾಕಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.

ರಾಮನಗರ, ಶಿಗ್ಗಾಂವಿ-ಸವಣೂರು, ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ ಹಲವೆಡೆ SIR ಪ್ರಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕಿನಿಂದಲೇ ಕಾನೂನು ಬಾಹಿರವಾಗಿ, ವ್ಯವಸ್ಥಿತವಾಗಿ ಬೃಹತ್ ಅಕ್ರಮವೆಸಗಲಾಗುತ್ತಿದೆ ಎಂದು ಜೋಶಿ ಆಕ್ರೋಶ ಹೊರ ಹಾಕಿದ್ದಾರೆ.

SIR ಅಕ್ರಮ ಬಗ್ಗೆ ಫೋನ್‌ ಕರೆ:

ರಾಜ್ಯದಲ್ಲಿ ನಡೆಯುತ್ತಿರುವ ಈ ಬಗೆಯ SIRನಿಂದ ಕೇವಲ ನಿಯಮ ಉಲ್ಲಂಘನೆಯಲ್ಲ, ಪ್ರಜಾಪ್ರಭುತ್ವದ ಆಶಯಗಳಿಗೇ ವಿರುದ್ಧವಾಗಿದೆ. ನಿಯಮಗಳನ್ನೆಲ್ಲ ಗಾಳಿಗೆ ತೂರಿ ʼಮಸೀದಿಯಲ್ಲಿ ಕುಳಿತು ಎನ್ಯುಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡುತ್ತಿರುವ ಬಗ್ಗೆʼ, ಅದನ್ನು ವಾಟ್ಸಪ್‌ಗಳಲ್ಲಿ ಹಂಚಿಕೊಳ್ಳುತ್ತಿರುವ ಅಕ್ರಮಗಳ ಬಗ್ಗೆ ರಾಜ್ಯದ ಅನೇಕ ಕಡೆಗಳಿಂದ ಫೋನ್‌ ಕರೆಗಳೂ ಬರುತ್ತಿವೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಮಸೀದಿಗಳಲ್ಲಿ ಫಾರ್ಮ್‌ ಭರ್ತಿ!:

SIR ನಿಯಮ ಪ್ರಕಾರ ಮತಗಟ್ಟೆ ಅಧಿಕಾರಿಗಳು (BLO) ಜಿಲ್ಲಾ ಚುನಾವಣಾಧಿಕಾರಿ (DEO/DC) ಅವರ ಕಟ್ಟುನಿಟ್ಟಿನ ನಿರ್ದೇಶನದಂತೆ ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಕುಟುಂಬ ಸದಸ್ಯರನ್ನು ಖುದ್ದಾಗಿ ಗುರುತಿಸಬೇಕು. ಆದರೆ, ರಾಜ್ಯದಲ್ಲಿ ಅದರ ಹೊರತಾಗಿ ಮಸೀದಿಗಳಲ್ಲಿ ಪ್ರಕ್ರಿಯೆ ನಡೆಸುತ್ತಿರುವುದು ನಿಜಕ್ಕೂ ತೀವ್ರ ಆತಂಕಕಾರಿ ಬೆಳವಣಿಗೆ ಎಂದು ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬೃಹತ್ ಹಗರಣವೇ ನಡೆಯುತ್ತಿದೆ. ಕೇಂದ್ರ ಚುನಾವಣಾ ಆಯೋಗದ (ECI) ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ರಾಜಕೀಯ ಲಾಭಕ್ಕಾಗಿ ಮತದಾರರ ಪಟ್ಟಿಯನ್ನು ತಮಗೆ ಬೇಕಾದಂತೆ ಸಿದ್ಧಪಡಿಸಿಕೊಳ್ಳಲು ರಾಜ್ಯ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದಂತಿದೆ ಎಂದು ಆರೋಪಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೂರ್ವ-72 ವಿಧಾನಸಭಾ ಕ್ಷೇತ್ರದ ವಾರ್ಡ್-63‌, ಬೂತ್‌ ನಂ.16ರಲ್ಲಿ ಸಹ SIRನಲ್ಲಿ ನಿಯಮ ಬಾಹಿರ ಚಟುವಟಿಕೆ ನಡೆದಿದೆ. ಇಲ್ಲಿನ ಬಿಎಲ್‌ಒ ಮೇರಿ ರಾಮಚಂದ್ರ ಹರಪನಾಳ ಮನೆ ಮನೆಗೆ ತೆರಳದೆ ಸ್ಥಳವೊಂದರಲ್ಲಿ ಕುಳಿತು ಎನ್ಯುಮರೇಷನ್‌ ಫಾರ್ಮ್‌ ಭರ್ತಿ ಮಾಡಿರುವುದು ಸಾರ್ವಜನಿಕವಾಗಿ ಬಹಿರಂಗಗೊಂಡಿದೆ.

ರಾಜ್ಯದಲ್ಲಿ ಈ ಮಟ್ಟದಲ್ಲಿ ನಡೆಯುತ್ತಿರುವ SIR ಹಗರಣದ ಹಿಂದೆ ಯಾರ ಹಿತಾಸಕ್ತಿ ಅಡಗಿದೆ? ಎಂಬುದನ್ನು ಬಯಲಿಗೆಳೆಯಲು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಇದರ ಹಿಂದಿರುವ ರಾಜಕೀಯ ಕೈಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.