ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ನಿಧನ; ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತೀವ್ರ ಸಂತಾಪ

Dr Anand Pandurangi Passes Away: ಡಾ. ಆನಂದ ಪಾಂಡುರಂಗಿ ಒಬ್ಬ ಅತ್ಯಾಪ್ತ ಸ್ನೇಹಿತರಲ್ಲೊಬ್ಬರಾಗಿ ಅನೇಕ ವಿಷಯದಲ್ಲಿ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದರು. ನಾನಿಂದು ಒಬ್ಬ ಅತ್ಯುತ್ತಮ ಮಾರ್ಗದರ್ಶಕ, ಹಿತೈಷಿ, ಹಿರಿಯ ಸ್ನೇಹಿತನನ್ನು ಕಳೆದುಕೊಂಡ ದುಃಖ ಆವರಿಸಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಡಾ. ಆನಂದ ಪಾಂಡುರಂಗಿ ಮತ್ತು ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ)

ನವದೆಹಲಿ, ಸೆ. 24: ಕರ್ನಾಟಕದ ಹಿರಿಯ ಮನೋ ವೈದ್ಯ, ಪ್ರೇರಣಾದಾಯಿ ವಾಗ್ಮಿ ಮತ್ತು ಅಂಕಣಕಾರರೂ ಆಗಿದ್ದ ಧಾರವಾಡದ ಡಾ. ಆನಂದ ಪಾಂಡುರಂಗಿ (Dr Anand Pandurangi) ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕಂಬನಿ ಮಿಡಿದಿದ್ದಾರೆ. ವೈಯಕ್ತಕಿವಾಗಿ ತಮ್ಮ ಮತ್ತು ಡಾ. ಪಾಂಡುರಂಗಿ ಅವರ ಕುಟುಂಬದ ನಡುವೆ ಅತ್ಯಂತ ಆತ್ಮೀಯ, ಅನ್ಯೋನ್ಯ ಸಂಬಂಧವಿತ್ತು. ಸದಾ ಕಾಲ ನನ್ನ ಆರೋಗ್ಯ, ಹಿತವನ್ನು ಬಯಸಿದರೆಂದು ನೆನೆದ ಸಚಿವರು, ಸಂಘ ಪರಿವಾರದ ಜತೆಗೂ ಉತ್ತಮ ಸಂಪರ್ಕ ಹೊಂದಿ ಸದಾ ಕಾಲ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಸ್ಮರಿಸಿದ್ದಾರೆ.

ಡಾ. ಆನಂದ ಓರ್ವ ಅತ್ಯಾಪ್ತ ಸ್ನೇಹಿತರಲ್ಲೊಬ್ಬರಾಗಿ ಅನೇಕ ವಿಷಯದಲ್ಲಿ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದರು. ನಾನಿಂದು ಒಬ್ಬ ಅತ್ಯುತ್ತಮ ಮಾರ್ಗದರ್ಶಕ, ಹಿತೈಷಿ, ಹಿರಿಯ ಸ್ನೇಹಿತನನ್ನು ಕಳೆದುಕೊಂಡ ದುಃಖ ಆವರಿಸಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

‎ಡಾ. ಆನಂದ ‎ಪಾಂಡುರಂಗಿ ದಶಕಗಳ ಕಾಲ ವೈದ್ಯಕೀಯ ಸೇವೆಯಲ್ಲಿ ತೊಡಗಿ, ಸಮಾಜದಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ, ಯುವ ಜನರಲ್ಲಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಆತ್ಮವಿಶ್ವಾಸ ಬೆಳೆಸುವಲ್ಲಿ ಸ್ಮರಣೀಯ ಕೊಡುಗೆ ನೀಡಿದ್ದರು. ಇವರ ಅಗಲಿಕೆಯಿಂದ ಸಮಾಜಕ್ಕಿಂದು ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಸಚಿವ ಜೋಶಿ ಹೇಳಿದ್ದಾರೆ.

ಡಾ. ಆನಂದ ಪಾಂಡುರಂಗಿ ಪ್ರೇರಣಾದಾಯಿ ಉಪನ್ಯಾಸಗಳು, ಅಂಕಣಗಳು ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಅತ್ಯಮೂಲ್ಯವಾದ ಮಾರ್ಗದರ್ಶನ ನೀಡುತ್ತಿದ್ದರು. ಆ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣಿಕರ್ತೃರಾಗಿದ್ದರು ಎಂದು ಬಣ್ಣಿಸಿದ್ದಾರೆ.

‎‎ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಭಾರತೀಯ ವೈದ್ಯಕೀಯ ಕ್ಷೇತ್ರದ ಪ್ರತಿಷ್ಠಿತ ಡಾ. ಬಿ.ಸಿ.ರಾಯ್ ಪ್ರಶಸ್ತಿ ಸೇರಿದಂತೆ ಹಲವು ಗೌರವ-ಪುರಸ್ಕಾರಗಳಿಗೆ ಭಾಜನರಾಗಿದ್ದ ಈ ನನ್ನ ಆತ್ಮೀಯ ಸ್ನೇಹಿತರ ಅಗಲಿಕೆಯಿಂದ ವೈಯಕ್ತಿಕವಾಗಿ ಮಾತ್ರವಲ್ಲದೆ, ವೈದ್ಯಕೀಯ ಕ್ಷೇತ್ರ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.