ಹಾವೇರಿ, ಜ.29: ಪ.ಪೂ. ಶ್ರೀ ವಲ್ಲಭ ಚೈತನ್ಯರು (ಪ.ಪೂ. ಶ್ರೀ ಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿ) ಅವರು ಸ್ಥಾಪಿಸಿರುವ ತಡಸ ಶ್ರೀ ಗಾಯತ್ರೀ ತಪೋಭೂಮಿ (Shri Gayatri Tapobhoomi) ರಜತ ಮಹೋತ್ಸವ ಪೂರೈಸಿ 26ನೇ ವರ್ಷದ ಸಂಭ್ರಮಕ್ಕೆ ಮುಂದಾಗಿದೆ. ಹೀಗಾಗಿ ಜ.31ರಂದು ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ ಗಾಯತ್ರಿ ಮಾತಾ ದೇಗುಲದಲ್ಲಿ 26ನೇ ವಾರ್ಷಿಕೋತ್ಸವ ಹಮ್ಮಿಕೊಂಡಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಜ.30 ರಂದು ಶುಕ್ರವಾರ ಗುರುಚರಿತ್ರೆ ಮಂಗಳ, ಸಂಜೆ 6 ಗಂಟೆಗೆ ಪುರೋಹಿತರಿಂದ ಉದಕ ಶಾಂತಿ, ಜ.31ರಂದು ಶನಿವಾರ ಬೆ. 6:30ಕ್ಕೆ ಕಾಕಡಾರತಿ, 7ಕ್ಕೆ ಸಾಮೂಹಿಕ ಗಾಯತ್ರಿ ಜಪ, 8ಕ್ಕೆ ಉಪಹಾರ 9ಕ್ಕೆ ಹವನ ಆರಂಭ 10ಕ್ಕೆ ಗಾಯತ್ರಿ ಮಾತೆಗೆ ಮಹಾಭಿಷೇಕ, 12ಕ್ಕೆ ಹವನಗಳು ಪೂರ್ಣಾಹುತಿ. 12:30ಕ್ಕೆ ಯುವಾ ಬ್ರಿಗೇಡ್ ರಾಜ್ಯ ಪ್ರಕಲ್ಪ ಪ್ರಮುಖ್ ಪ್ರಾ. ಶಿಕ್ಷಣ ಭಾರತಿ ಸಂಪನ್ಮೂಲ ವ್ಯಕ್ತಿ ಕಿರಣ್ ರಾಮ್ ಅವರಿಂದ ಸತ್ಸಂಗ ಕಾರ್ಯಕ್ರಮ, ಶಿರಹಟ್ಟಿಯ ಶ್ರೀ ಫಕೀರೇಶ್ವರ ಸಂಸ್ಥಾನಮಠದ ಪಪೂ ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮೀಜಿ, ಹುಬ್ಬಳ್ಳಿ ಅದೈತ ವಿದ್ಯಾಶ್ರಮದ ಪಪೂ ಶ್ರೀ ಪ್ರಣವಾನಂದತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ.
ದಕ್ಷಿಣ ಭಾರತದ ಏಕೈಕ ಗಾಯತ್ರೀ ಪೀಠ ʼಗಾಯತ್ರೀ ತಪೋಭೂಮಿʼ
ವೇದಗಳಿಗೆ ಗಾಯತ್ರೀ ಮಾತೆಯೇ ಅಧಿದೇವತೆ, ಹೀಗಾಗಿ ಪ.ಪೂ. ವಲ್ಲಭ ಚೈತನ್ಯರು, 2000ರಲ್ಲಿ ಭಗವದ್ ಪ್ರೇರಣೆ ಮತ್ತು ಅವರ ಪರಮಗುರು ಶ್ರೀ ಕೃಷ್ಣೇಂದ್ರ ಗುರುಗಳ ದಿವ್ಯ ಅನುಗ್ರಹದಿಂದ ಮಾಘಮಾಸದಲ್ಲಿ ಪಂಚಮುಖಿ ಗಾಯತ್ರಿ ಮಾತೆಯನ್ನು ಪ್ರತಿಷ್ಠಾಪಿಸಿ, ತಮ್ಮ ತಪಃಪಶಕ್ತಿಯಿಂದ ಜಗನ್ಮಾತೆಯನ್ನು ಇಲ್ಲೇ ನೆಲೆಯೂರಿ ನಿಲ್ಲುವಂತೆ ಮಾಡಿದ್ದಾರೆ. ಪರಿವಾರ ದೇವತೆಗಳಾಗಿ ವಿಘ್ನನಿವಾರಕ ಶ್ರೀ ಗಣೇಶ, ಶ್ರೀ ಸುಬ್ರಹ್ಮಣ್ಯ ದೇವರು, ಶ್ರೀ ದತ್ತಾವತಾರಿ ಸದ್ಗುರು ಶ್ರೀಕೃಷ್ಣಂದ್ರ ಗುರುಗಳಮೂರ್ತಿಯನ್ನು ಸಹ ಗಾಯತ್ರಿ ತಪೋಭೂಮಿಯಲ್ಲಿ ಸ್ಥಾಪಿಸಿದ್ದಾರೆ.
ಗಾಯತ್ರೀ ತಪೋಭೂಮಿಯು ದಕ್ಷಿಣ ಭಾರತದ ಏಕೈಕ ಗಾಯತ್ರೀ ಪೀಠ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಹಾಗೂ ಹುಬ್ಬಳ್ಳಿಯಿಂದ ಕೇವಲ 23 ಕಿ.ಮೀ. ದೂರದಲ್ಲಿ ಜಗನ್ಮಾತೆ ಗಾಯತ್ರಿದೇವಿ ನೆಲೆಸಿದ್ದಾಳೆ. ಪಪೂ ವಲ್ಲಭರು ಭಕ್ತಸಮೂಹದ ಇಚ್ಛೆಯಂತೆ 1994ರ ಏಪ್ರಿಲ್ 16, 17 ರಂದು ಈಗಿನ ತಪೋಭೂಮಿಯ ಜಾಗವನ್ನು ಖರೀದಿಸಿ ಉದ್ಘಾಟಿಸಿದ್ದರು. 1996ರಲ್ಲಿ ಶ್ರೀಗಾಯತ್ರೀ ಮಂದಿರದ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ಮಾಡಿ ಮಂದಿರ ಕಟ್ಟುವ ಕೆಲಸ ಜ. 26ರಂದು ಪ್ರಾರಂಭಗೊಂಡಿತ್ತು. ಶಾಸ್ತ್ರಗಳ ಅನುಸಾರವಾಗಿ ಜಗನ್ಮಾತೆಯ ಪ್ರತಿಷ್ಠಾಪನೆ ವಿಜೃಂಭಣೆಯಿಂದ ಜರುಗಿತ್ತು.
ಗುಜ್ಜನಡು ವೀರಾಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ನೆರವೇರಿದ ಭೂಮಿ ಪೂಜೆ
ಇಲ್ಲಿ ದೇವಿಗೆ ನಿತ್ಯ ತ್ರಿಕಾಲಪೂಜೆ, ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ, ಬಳಿಕ ಆಗಮಿಸಿದ ಭಕ್ತಸಮೂಹಕ್ಕೆ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ. ಪ್ರತೀ ಭಾನುವಾರ ಗಾಯತ್ರೀ ಹವನ, ಕುಂಕುಮಾರ್ಚನೆ, ಪ್ರತಿಮಾಸದ ಸಂಕಷ್ಠಿಯಂದು ಗಣಹೋಮ, ನವರಾತ್ರಿ ವಿಶೇಷ ಕಾರ್ಯಕ್ರಮಗಳು, ಗಂಗಾಪೂಜೆ, ಶ್ರೀ ಕೃಷ್ಣಂದ್ರಸ್ವಾಮಿಗಳ ಜಯಂತಿ. ಗುರುಪೂರ್ಣಿಮಾ ಉತ್ಸವಗಳು ಹಲವು ಕಾರ್ಯಕ್ರಮಗಳು ಗುರುಗಳ ಆಜ್ಞೆಯಂತೆ ನಡೆಯುತ್ತಲಿವೆ ಎಂದು ಹುಬ್ಬಳ್ಳಿ ಸದ್ಗುರು ದೇಸಾಯಿ ಅವರು ತಿಳಿಸಿದ್ದಾರೆ.