ಧಾರವಾಡ: ಬೆಳಗಾವಿ ಜಿಲ್ಲೆ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ (Baburao Bolashetti) ಅವರ ಪುತ್ರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಮಾಪುರ ಗ್ರಾಮದ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆಗೈದ ಬಳಿಕ ಮೃತದೇಹವನ್ನು ಸುಟ್ಟು ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) (Raju Bolashetti) ಮೃತ ದುರ್ದೈವಿ. ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ಬಳಿಯ ರೈಲ್ವೆ ಟ್ರ್ಯಾಕ್ ಪಕ್ಕದ ದಟ್ಟಾರಣ್ಯದಲ್ಲಿ ಮೃತದೇಹ ಪತ್ತೆಯಾಗಿದೆ. ರಾಜು ಬೋಳಶೆಟ್ಟಿ ಅವರು ತಮ್ಮದೇ ಆದ ವ್ಯಾಗನರ್ ಕಾರಿನಲ್ಲಿ ಸುಟ್ಟು ಬೂದಿಯಾಗಿದ್ದಾರೆ. ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದ ವ್ಯಕ್ತಿಯ ಈ ನಿಗೂಢ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೊಲೆ ಶಂಕೆ
ದುಷ್ಕರ್ಮಿಗಳು ರಾಜು ಬೋಳಶೆಟ್ಟಿ ಅವರನ್ನು ಮೊದಲು ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ನಿರ್ಜನ ಪ್ರದೇಶದಲ್ಲಿ ಅವರದೇ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಬಾಡಿಗೆದಾರನೊಂದಿಗೆ ಸೊಸೆಯ ಲವ್ವಿ-ಡವ್ವಿ; ಪ್ರೇಮಿಯೊಂದಿಗೆ ಸೇರಿ ಅತ್ತೆಯ ಭೀಕರ ಕೊಲೆ
ಘಟನಾ ಸ್ಥಳಕ್ಕೆ ಧಾರವಾಡ ಎಸ್‌ಪಿ ಗುಂಜನ್ ಆರ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ತಂಡ ಹಾಗೂ ಶ್ವಾನದಳ ಕೂಡ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿವೆ. ಪ್ರಸ್ತುತ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಂತಕರ ಪತ್ತೆಗಾಗಿ ತೀವ್ರ ತನಿಖೆ ಆರಂಭಿಸಿದ್ದಾರೆ.