ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hubballi Chalo padayatra: ಕಬ್ಬು ಬೆಳೆಗಾರರ ಪಾದಯಾತ್ರೆ ತಾತ್ಕಾಲಿಕ ಸ್ಥಗಿತ; ಕೇಂದ್ರಕ್ಕೆ ಒಂದು ತಿಂಗಳ ಗಡುವು

Sugarcane Farmers Padayatra: ಕಬ್ಬಿನ ದರ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಿಂದ ಹುಬ್ಬಳ್ಳಿಗೆ ರೈತರು ಪಾದಯಾತ್ರೆ ಕೈಗೊಂಡಿದ್ದರು. ತಜ್ಞರ ಸಮಿತಿಯ ವರದಿ ಬಂದ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಭರವಸೆ ನೀಡಿದ ಬಳಿಕ ʼಹುಬ್ಬಳ್ಳಿ ಚಲೋ ಪಾದಯಾತ್ರೆʼ ಸ್ಥಗಿತಗೊಳಿಸಲು ರೈತರು ನಿರ್ಧರಿಸಿದ್ದಾರೆ.

ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರ ಭರವಸೆ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಕಳೆದ ಒಂದು ವಾರದಿಂದ ನಡೆಸುತ್ತಿದ್ದ ಪಾದಯಾತ್ರೆ ಸೋಮವಾರ ಅಂತ್ಯವಾಗಿದೆ. ಬೆಳಗಾವಿಯಿಂದ ಹುಬ್ಬಳ್ಳಿವರೆಗೆ ಪಾದಯಾತ್ರೆ ಕೈಗೊಂಡಿದ್ದ (ಹುಬ್ಬಳ್ಳಿ ಚಲೋ) ಕಬ್ಬು ಬೆಳೆಗಾರರು, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಳೆದೊಂದು ವಾರದಿಂದ ಚುರುಕು ಮುಟ್ಟಿಸಿದ್ದರು. ಇದೀಗ ಕೆಲವು ಷರತ್ತುಗಳನ್ನು ಇಟ್ಟು ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.

ಕಳೆದೊಂದು ವಾರದಿಂದ ಕಬ್ಬು ಬೆಳೆಗಾರರು ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಧರಣಿ ಕುಳಿತಿದ್ದರು. ಎರಡು ದಿನಗಳ ಕಾಲ ಹೆದ್ದಾರಿ ಬಂದ್ ಮಾಡಿದ್ದ ರೈತರು ಬಳಿಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಗಮನಿಸಿ, ಹೆದ್ದಾರಿ ಬಂದ್ ಮರಳಿ ಪಡೆದಿದ್ದರು. ಆದರೆ ಹೆದ್ದಾರಿ ಪಕ್ಕದಲ್ಲಿ ಟೆಂಟ್ ಹಾಕಿ ಹೋರಾಟವನ್ನು ಮುಂದುವರಿಸಿದ್ದರು. ಈ ಒಟ್ಟಾರೆ ಹೋರಾಟ ಇಂದು ಏಳನೇ ದಿನಕ್ಕೆ ಕಾಲಿಟ್ಟಿತ್ತು.

ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ರೈತ ನಾಯಕರು ಭಾಗವಹಿಸಿದ್ದರು. ಈ ವೇಳೆ ತಜ್ಞರ ಸಮಿತಿಯ ವರದಿ ಬಂದ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಜೋಶಿ ಭರವಸೆ ನೀಡಿದ ಬಳಿಕ ಹೋರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಯಿತು.

ಬಳಿಕ ಇಂದು ಯರಿಕೊಪ್ಪ ಕ್ರಾಸ್ ಬಳಿ ಬಹಿರಂಗ ಸಭೆ ಸೇರಿದ್ದ ರೈತರಿಗೆ ರೈತ ಮುಖಂಡರು ಹುಬ್ಬಳ್ಳಿಯಲ್ಲಿ ನಡೆದ ಸಭೆಯ ವಿವರವನ್ನು ನೀಡಿದರು. ಸಭೆಯಲ್ಲಿ ಮಾತನಾಡಿದ ಪಾದಯಾತ್ರೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರು ಸಭೆ ನಡೆಸಿ ಭರವಸೆ ನೀಡಿದ್ದಾರೆ. ಕನಿಷ್ಠ ಬೆಂಬಲ ಬೆಲೆ (MSP) ವಿಚಾರವಾಗಿ ಕಾಲಾವಕಾಶ ಕೇಳಿದ್ದು, ಅವರ ಮಾತಿಗೆ ಬೆಲೆ ನೀಡಿ ಎಲ್ಲರೂ ಅವಕಾಶ ನೀಡೋಣ. ಮುಂದಿನ ನಾಲ್ಕೈದು ದಿನಗಳಲ್ಲಿ ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರ ಸಭೆ ನಡೆಯಬೇಕು. ಅಲ್ಲದೆ, ಕಾರ್ಖಾನೆಗಳಿಂದ ಸಕ್ಕರೆ ಹೊರಗೆ ಸಾಗಣೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರಕ್ಕೆ ನವೆಂಬರ್​ 26ರವರೆಗೆ ಕಾಲಾವಕಾಶ

ನಮ್ಮ ಬೇಡಿಕೆ ಈಡೇರಿಸಲು ನವೆಂಬರ್​ 26ರವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗಿದೆ. ಅಷ್ಟರಲ್ಲಿ ಬೇಡಿಕೆ ಈಡೇರಿಸಬೇಕು. ಅಲ್ಲದೆ, ಸಿಎಂ ಅವರು ಸುವರ್ಣ ಸೌಧದಲ್ಲಿ ಸಭೆ ಮಾಡಬೇಕು. ಸಿಎಂ ಹಾಗೂ ಕೇಂದ್ರ ಸಚಿವರ ಮಾತಿಗೆ ನಾವೆಲ್ಲ ಬೆಲೆ ಕೋಡೋಣ. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಒಂದು ಕೋಟಿ ರೈತರಿಂದ ಪ್ರತಿಭಟನೆ ನಡೆಸಲಾಗುವುದು. ನ.27ರಂದು ಎಲ್ಲರೂ ಹೋರಾಟಕ್ಕೆ ಸಿದ್ಧರಿರೋಣ. ಅಂದು ಪ್ರಲ್ಹಾದ್ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಲು ಮುಂದಾಗುತ್ತೇವೆ ಎಂದು ಸಭೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.