ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪ್ರತೀಕವಾಗಿ ಎಲ್ಲರ ಮನೆ ಮನ ತಲುಪುತ್ತಿರುವ ʼಮನ್ ಕೀ ಬಾತ್ʼ (Mann Ki Baat) ಜನಸಾಮಾನ್ಯರ ಸಾಧನೆಗಳನ್ನು ದೇಶದೆದುರು ಪ್ರಚುರಪಡಿಸುವ ಒಂದು ಅಪೂರ್ವ ವೇದಿಕೆಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಿಸಿದರು.
ಹುಬ್ಬಳ್ಳಿ ಓಲೆ ಮಠದ ಜಗದ್ಗುರು ಗುರುಸಿದ್ದಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಪ್ರಧಾನಿ ಅವರ 139ನೇ ಆವೃತ್ತಿಯ ʼಮನ್ ಕೀ ಬಾತ್ʼ ಕಾರ್ಯಕ್ರಮ ಆಲಿಸಿ ಅನಿಸಿಕೆ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಅವರು ‘ಮನ್ ಕೀ ಬಾತ್’ ವಿಶಿಷ್ಠ ಕಾರ್ಯಕ್ರಮವನ್ನು ದೇಶದ ಮೂಲೆ ಮೂಲೆಗೂ ತಲುಪಿಸಿದ್ದಾರೆ. ಜತೆಗೆ ಸಾಮಾನ್ಯ ನಾಗರಿಕರ ಸಾಧನೆಗಳು, ಪ್ರಗತಿಪರ ರೈತರ ಸಾಧನೆ, ಯುವಜನರ ನವೀನ ಆಲೋಚನೆಗಳು ಹಾಗೂ ಮಹಿಳಾ ಸ್ವಾವಲಂಬನೆಯನ್ನು ದೇಶದೆಲ್ಲೆಡೆ ಪ್ರಸರಿಸಿದ್ದಾರೆ ಎಂದು ಹೇಳಿದರು.

ʼಮನ್ ಕೀ ಬಾತ್ʼ ನಮ್ಮ ಪರಿಸರ ಸಂರಕ್ಷಣೆ, ಸ್ವದೇಶಿ ಉತ್ಪನ್ನಗಳ ಬಳಕೆ, ಕ್ರೀಡೆ ಹಾಗೂ ಸಮಾಜ ಸೇವೆಯಂತಹ ಹಲವು ಕ್ಷೇತ್ರಗಳಲ್ಲಿ ದೇಶದ ಜನರು ತೋರುತ್ತಿರುವ ಸೇವಾ ಮನೋಭಾವ, ಸೃಜನಶೀಲತೆ ಮತ್ತು ಸಾಧನೆಗಳನ್ನು ಇಡೀ ದೇಶದ ಮುಂದೆ ಪರಿಚಯಿಸುವ ಒಂದು ಅಪೂರ್ವ ವೇದಿಕೆಯಾಗಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕದ ಹಿರಿಮೆ ಹೆಚ್ಚಿಸಿದೆ
ಪ್ರಧಾನಿ ಅವರ ಮನ್ ಕೀ ಬಾತ್ ನಮ್ಮ ಕರುನಾಡಿನ ಹಿರಿಮೆಯನ್ನೂ ತೆರೆದಿಟ್ಟಿದೆ ಎಂದ ಸಚಿವರು, ಕಲಬುರಗಿಯ ಪ್ರಸಿದ್ಧ ತೊಗರಿ ಬೇಳೆ ಮಲ್ಡೀವ್ಸ್‌ಗೆ ರಫ್ತಾಗುತ್ತಿರುವುದನ್ನು ಅನಾವರಣಗೊಳಿಸಿದೆ. ಅಲ್ಲದೆ, ಭಾರತೀಯ ರೈತರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಹೊಸ ಅವಕಾಶಗಳಿಗೆ ಇದು ಉತ್ತಮ ನಿದರ್ಶನವಾಗಿದೆ ಎಂದು ಹೇಳಿದರು.
ಕರ್ನಾಟಕದ ಒಂದು ಬಿದಿರು ಸ್ಟಾರ್ಟಪ್ ಸಂಸ್ಥೆಯು ಬಿದಿರು ಮತ್ತು ಕೃಷಿ ತ್ಯಾಜ್ಯಗಳಿಂದ ಪರಿಸರ ಸ್ನೇಹಿ ಪ್ಯಾಕೇಜಿಂಗ್ ಸಾಮಗ್ರಿ ತಯಾರಿಸುತ್ತಿರುವ ನಾವೀನ್ಯತೆಯನ್ನು ಪ್ರಧಾನಿ ಅವರು ಶ್ಲಾಘಿಸಿದ್ದು, ರಾಜ್ಯದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿದೆ ಎಂದರು.

ಪ್ರಧಾನಿ ಮೋದಿ ಅವರ ಪ್ರೇರಣಾದಾಯಕ ಮಾತುಗಳು ಪ್ರತಿಯೊಬ್ಬರಲ್ಲೂ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಸಂಕಲ್ಪಕ್ಕೆ ದಾರಿದೀಪ ಎಂದು ಹೇಳಿದರು.
'ಮನ್ ಕಿ ಬಾತ್' ಒಂದು ಸುಂದರ ತೀರ್ಥಯಾತ್ರೆ: 139ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ಪ್ರಭು ನವಲಗುಂದಮಠ, ಜಯತೀರ್ಥ ಕಟ್ಟಿ ಸೇರಿದಂತೆ ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.