ಧಾರವಾಡ, ನ.8: ರಾಜ್ಯ ಕಾಂಗ್ರೆಸ್ ಸರ್ಕಾರ (Karnataka Government), ತನ್ನ ಗ್ಯಾರಂಟಿಗಳನ್ನು ನಿಭಾಯಿಸುವ ಸಲುವಾಗಿ ಆದಾಯ ಕ್ರೋಡೀಕರಿಸಲು ಯಾವುದನ್ನೂ ಬಿಟ್ಟಿಲ್ಲ. ಕಬ್ಬು ಬೆಳೆಗಾರರನ್ನೂ ಸುತ್ತಿಕೊಂಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಟುವಾಗಿ ಟೀಕಿಸಿದ್ದಾರೆ. ಧಾರವಾಡದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಹಣ ಸಂಗ್ರಹಣೆ ನೀತಿಯೇ ಕಬ್ಬು ಬೆಳೆಗಾರರ ಮತ್ತು ಸಕ್ಕರೆ ಕಾರ್ಖಾನೆಗಳ ಇಂದಿನ ಇಕ್ಕಟ್ಟಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ʼWater supply & Lifting chargeʼ ಎಂದು ಈಗ ಪ್ರತಿ ಸಕ್ಕರೆ ಕಾರ್ಖಾನೆಗಳಿಂದ ವರ್ಷಕ್ಕೆ ಬರೋಬ್ಬರಿ ₹1 ಕೋಟಿ ಸಂಗ್ರಹಿಸುತ್ತಿದೆ. ಕಳೆದ ಸರ್ಕಾರದಲ್ಲಿ ಇದು ಕೇವಲ ₹5 ಲಕ್ಷ ಶುಲ್ಕವಿತ್ತು. ಇದಿಂದು ಎಲ್ಲಿಂದ-ಎಲ್ಲಿಗೆ ಏರಿಕೆಯಾಗಿದೆ ನೋಡಿ! ಇದೂ ಸಾಲದೆಂಬಂತೆ ಕಳೆದ ತಿಂಗಳಿಂದ ಪ್ರತಿ ಯುನಿಟ್ ವಿದ್ಯುತ್‌ಗೆ 60 ಪೈಸೆ ʼಎನರ್ಜಿ ಸೆಸ್ʼ ಬೇರೆ ಹೇರಿದೆ ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯ ಸರ್ಕಾರ ಈ ವರ್ಷ ಅಬಕಾರಿ ಮೂಲದಿಂದ ₹39,000 ಕೋಟಿ ಆದಾಯ ನಿರೀಕ್ಷಿಸಿದೆ. ಬಿಯರ್, ವಿಸ್ಕಿ, ಬ್ರಾಂದಿ ಸೇರಿದಂತೆ 30ಕ್ಕೂ ಹೆಚ್ಚು ಉತ್ಪನ್ನಗಳಿಂದ ಶೇ.270 ತೆರಿಗೆ ಸಂಗ್ರಹಿಸುತ್ತಿದೆ. ಹಾಗಿದ್ದರೂ ರೈತರಿಗೆ ಉತ್ತಮ ಬೆಲೆ ನೀಡುವಲ್ಲಿ ಚೌಕಾಶಿ ಮಾಡುತ್ತಿದೆ. ಇದು ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರ ಪಾಲಿಗೆ ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ ಅಲ್ಲವೇ? ಎಂದು ಜೋಶಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಇಂಧನ ಬೆಲೆ ಏರಿಕೆಯೂ ಕಾರಣ
ಈ ಸರ್ಕಾರ ರಾಜ್ಯದಲ್ಲಿ ಡೀಸೆಲ್ ಮೇಲಿನ ವ್ಯಾಟ್‌ನ್ನು ಸುಮಾರು ಶೇ.50ರಷ್ಟು ಹೆಚ್ಚಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ವ್ಯಾಟ್ ಹೆಚ್ಚಳದಿಂದಲೇ ₹7000 ರಿಂದ ₹7500 ಕೋಟಿ ಆದಾಯ ಕಂಡುಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಪೆಟ್ರೋಲ್-ಡೀಸೆಲ್ ಚಿಲ್ಲರೆ ಬೆಲೆಯನ್ನು ಕನಿಷ್ಠ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಹೆಚ್ಚಿಸಿದೆ. 2024ರ ಜೂನ್ 15ರಂದು ರಾಜ್ಯ ಸರ್ಕಾರ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು (ವ್ಯಾಟ್‌ಗಿಂತ) ಶೇ.25.92 ರಿಂದ ಶೇ.29.84ಕ್ಕೆ ಮತ್ತು ಡೀಸೆಲ್ ಮೇಲಿನ ವ್ಯಾಟ್‌ನ್ನು ಶೇ.14.34ರಿಂದ ಶೇ.18.44ಕ್ಕೆ ಹೆಚ್ಚಿಸಿತು. ಪರಿಣಾಮ ಪೆಟ್ರೋಲ್ ಸುಮಾರು ₹3, ಡೀಸೆಲ್‌ಗೆ ಸುಮಾರು ₹3.02 ಪ್ರತಿ ಲೀಟರ್ ಹೆಚ್ಚಳಕ್ಕೆ ಕಾರಣವಾಯಿತು.
2025ರ ಏಪ್ರಿಲ್ 1ರಂದು ಡೀಸೆಲ್ ವ್ಯಾಟ್ ಅನ್ನು ಮತ್ತಷ್ಟು ಶೇ.18.44ರಿಂದ ಶೇ.21.17ಕ್ಕೆ ಹೆಚ್ಚಿಸಿತು. ಇದರಿಂದಾಗಿ ಡೀಸೆಲ್ ಬೆಲೆಯಲ್ಲಿ ಮತ್ತೆ ಸುಮಾರು ₹2 ಪ್ರತಿ ಲೀಟರ್ ಹೆಚ್ಚಳ ಕಂಡಿತು. ಇದೆಲ್ಲಾ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರಿಗೆ ಸಾರಿಗೆ ವೆಚ್ಚದ ಮೇಲೆ ಪರಿಣಾಮ ಬೀರಿಲ್ಲವೇ?. ಮೂರು ವರ್ಷಗಳ ಹಿಂದೆ ಸಾರಿಗೆ ವೆಚ್ಚ ₹500-₹550ರ ಆಸುಪಾಸಿತ್ತು. ಆದರೀಗ ಸುಮಾರು ₹750-900ಕ್ಕೆ ಏರಿದೆ. ಇದೇ ತಮ್ಮ ಸರ್ಕಾರದ ಕೊಡುಗೆಯೇ? ಎಂದು ಸಿಎಂಗೆ ಖಾರವಾಗಿ ಪ್ರಶ್ನಿಸಿದರು ಸಚಿವ ಪ್ರಲ್ಹಾದ್ ಜೋಶಿ.
ಈ ಸುದ್ದಿಯನ್ನೂ ಓದಿ | Pralhad Joshi: ಕಬ್ಬು ಬೆಳೆಗಾರರ ದಿಕ್ಕು ತಪ್ಪಿಸೋ ಕ್ರಮ; ಸಿಎಂಗೆ ಸಚಿವ ಪ್ರಲ್ಹಾದ ಜೋಶಿ ಖಡಕ್ ಪತ್ರ
ಕೇಂದ್ರದ ಕೊಡುಗೆ
ರಾಜ್ಯದ ಸಕ್ಕರೆ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವ ಯಾವ ರೀತಿಯಲ್ಲಿ ನೆರವಾಗಿದೆ ಎಂಬುದನ್ನೂ ಎಳೆಎಳೆಯಾಗಿ ವಿವರಿಸಿದ ಸಚಿವರು, ಸಿಎಂ ಕೇಂದ್ರದತ್ತ ಬೆರಳು ತೋರುವುದು ಅರ್ಥಹೀನ ಎಂದು ಪ್ರತಿಕ್ರಿಯಿಸಿದರು.
ಕೇಂದ್ರ ಸರ್ಕಾರ ಹೆಚ್ಚುವರಿ ಸಕ್ಕರೆ ಸಮತೋಲನಗೊಳಿಸುವ ಜತೆಗೆ ಇಂಧನ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸುವ ಪ್ರಯತ್ನ ಮಾಡಿದೆ. ಇಂಧನದಲ್ಲಿ ಎಥನಾಲ್ ಬ್ಲೆಂಡಿಂಗ್ ಅನ್ನು 2014ರಲ್ಲಿ ಇದ್ದ 1.53ಕ್ಕೆ ಬದಲಾಗಿ ಇಂದು ಶೇ.20ಕ್ಕೆ ಕೊಂಡೋಯ್ದಿದೆ. 38 ಕೋಟಿ ಲೀಟರ್ ಇದ್ದದ್ದು ಪ್ರಸ್ತುತ 1001 ಕೋಟಿ ಲೀಟರ್ ತಲುಪಿದೆ. ಅಲ್ಲದೇ, ರೈತರಿಗೆ 2025ರಲ್ಲಿ ₹1.02 ಲಕ್ಷ ಕೋಟಿ ಖರೀದಿ ಮೊತ್ತ ನೀಡಿದೆ. ಇದು 2014ರಲ್ಲಿ ಕೇವಲ ₹57.104 ಕೋಟಿ ಆಗಿತ್ತು ಎಂದು ವಿವರಿಸಿದರು.
₹16,500 ಕೋಟಿ ಆರ್ಥಿಕ ನೆರವು
ಕಬ್ಬಿನ FRP (Fair & Remuneration Price) ಬೆಲೆ 2014ರಲ್ಲಿ ₹210 ಪ್ರತಿ ಕ್ವಿಂಟಲ್ ಇತ್ತು. ಅದನ್ನೀಗ 2025ರಲ್ಲಿ ₹355ಗೆ ಹೆಚ್ಚಿಸಿದೆ. ರೈತರಿಗೆ ಸಕಾಲಕ್ಕೆ ಬಾಕಿ ಬಿಲ್ ಪಾವತಿಸುವ ಸಲುವಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ₹16,500 ಕೋಟಿ ಆರ್ಥಿಕ ನೆರವನ್ನೂ ಸಕ್ಕರೆ ಕಾರ್ಖಾನೆಗಳಿಗೆ ನೀಡಿದೆ. ಇದಲ್ಲದೆ, ಸಕ್ಕರೆ Minimum Selling Price ಅನ್ನು ಮೊದಲ ಬಾರಿಗೆ 2018ರಲ್ಲಿ ಪ್ರತಿ ಕೆಜಿಗೆ ₹29 ನಿರ್ಧರಿಸಿ ನಂತರ 2019ರಲ್ಲಿ ಅದನ್ನು ₹31ಕ್ಕೆ ಹೆಚ್ಚಳ ಮಾಡಿದೆ. ಸಕ್ಕರೆ ಬೆಲೆಯಲ್ಲಿ ಸಮತೋಲನ ಕಾಪಾಡಲು ಕಳೆದ ವರ್ಷ 10 ಲಕ್ಷ ಮೆಟ್ರಿಕ್ ಟನ್ ರಫ್ತಿಗೆ ಅನುಮತಿ ನೀಡಲಾಗಿತ್ತು. ಅದನ್ನು ಪ್ರಸ್ತುತ 15 ಲಕ್ಷ ಮೆಟ್ರಿಕ್ ಟನ್‌ಗೆ ಹೆಚ್ಚಿಸಲಾಗಿದೆ ಎಂದು ಸಂಪೂರ್ಣ ಮಾಹಿತಿ ನೀಡಿದರು.
ಕೇಂದ್ರದಿಂದ ಅಬಕಾರಿ ಸುಂಕ ಕಡಿತ
ಕಳೆದ 5 ವರ್ಷಗಳಲ್ಲಿ ಭಾರತ ಸರ್ಕಾರ ಕೇಂದ್ರೀಯ ಅಬಕಾರಿ ಸುಂಕವನ್ನು (Central Excise Duty) ಎರಡು ಬಾರಿ ಕಡಿತಗೊಳಿಸಿದೆ. 2021ರ ನವೆಂಬರ್ 4ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ₹5 ಮತ್ತು ಡೀಸೆಲ್‌ಗೆ ₹10 ಕಡಿತ ಮಾಡಿತು. ಮತ್ತೊಮ್ಮೆ 2022ರ ಮೇ 22ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮೇಲೆ ₹8 ಮತ್ತು ಡೀಸೆಲ್ ಮೇಲೆ ₹6 ಕಡಿಮೆ ಮಾಡಿತು. ಆದರೆ ರಾಜ್ಯ ಸರ್ಕಾರ ಮಾಡಿದ್ದೇನು? ಎಂದು ಪ್ರಶ್ನಿಸಿದರು.
ಇಲ್ಲೇಕೆ PPA ಮಾಡಿಲ್ಲ?
ಮಹಾರಾಷ್ಟ್ರದಲ್ಲಿ Power Purchase Fixed Charge ಪ್ರತಿ ಯುನಿಟ್‌ಗೆ ₹4.88 variable charge ₹1.50 ಮಾಡಿ ಪ್ರತಿ ಯುನಿಟ್‌ಗೆ ₹6ರಂತೆ ನಿಗದಿಪಡಿಸಿ ರೈತರಿಗೆ ನೀಡಲಾಗುತ್ತಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಇಲ್ಲಿನ್ನೂ ಪಿಪಿಎ (Powe Purchase Agriment) ಅನ್ನೇ ಮಾಡಿಲ್ಲ ಎಂದು ಸಚಿವರು ಆರೋಪಿಸಿದರು.
ಮಹಾರಾಷ್ಟ್ರ, ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತಿತರ ರಾಜ್ಯಗಳು ಅತ್ಯಂತ ಶಿಸ್ತುಬದ್ಧವಾಗಿ ನಿಯಮ ಜಾರಿಗೊಳಿಸಿವೆ. ಯಾವುದೇ ಕಾರ್ಖಾನೆ ರೈತರಿಗೆ FRP ದರ ನೀಡಲು ವಿಫಲವಾದಲ್ಲಿ ಅಲ್ಲಿನ ಸರ್ಕಾರಗಳೇ ಹೊಂದಾಣಿಕೆ ಮೊತ್ತ ಬಿಡುಗಡೆ ಮಾಡಿ ರೈತರ ಹಿತ ಕಾಪಾಡುತ್ತಿವೆ. ಕರ್ನಾಟಕ ಸರ್ಕಾರದಿಂದ ಏಕೆ ಇದು ಸಾಧ್ಯವಾಗಿಲ್ಲ? ಎಂದು ಪ್ರಶ್ನಿಸಿದರು.
ಕಬ್ಬು ಕಾರ್ಖಾನೆಗಳಿಗೆ ಮಾಹಾರಾಷ್ಟ್ರದಲ್ಲಿ ಫೆಡರೇಶನ್ ಹಾಗೂ ಕೋ-ಆಪರೇಟಿವ್ ಬ್ಯಾಂಕ್‌ಗಳ ಮೂಲಕ ಶೇ.10ರ ಬಡ್ಡಿ ದರದಲ್ಲಿ ಸ್ವತಃ ಸರ್ಕಾರವೇ ಗ್ಯಾರಂಟಿದಾರನಾಗಿ ಸಾಲ ಒದಗಿಸುತ್ತದೆ. ಆದರೆ ಕರ್ನಾಟಕದಲ್ಲಿ ಸಾಲದ ಬಡ್ಡಿ ಮೊತ್ತ ಫೆಡರೇಶನ್ & ಕೋ-ಆಪರೇಟಿವ್ ಸಂಸ್ಥೆಗಳ ಮೂಲಕ ಶೇ.13.5ರಲ್ಲಿ ನೀಡಲಾಗುತ್ತಿದೆ. ಇದು ಪಕ್ಕದ ರಾಜ್ಯಕ್ಕಿಂತ ಶೇ.3.5ರಷ್ಟು ಜಾಸ್ತಿ ಆಗಿದ್ದು ಇದನ್ನು ಸರಿಪಡಿಸಲು ಈ ಸರ್ಕಾರ ಪ್ರಯತ್ನ ಮಾಡಿಲ್ಲ ಎಂದು ದೂರಿದರು.
ಬೊಮ್ಮಾಯಿ ಸರ್ಕಾರ SAPಗೆ ಸಮ್ಮತಿಸಿತ್ತು
ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕಬ್ಬು ಬೆಳೆಗಾರರ ಒತ್ತಾಸೆ ಮೇರೆಗೆ ಎಫ್‌ಆರ್‌ಪಿ ಜತೆಗೆ ರಾಜ್ಯ ಸಲಹಾ ಬೆಲೆ (State Advised Price) ನಿಗದಿಪಡಿಸಲು ಸಮ್ಮತಿಸಲಾಗಿತ್ತು. ಉಪ ಉತ್ಪನ್ನಗಳ ಲಾಭಾಂಶ ರೂಪದಲ್ಲಿ ಪ್ರತಿ ಟನ್‌ಗೆ ₹150 ಹೆಚ್ಚುವರಿ ಪಾವತಿಗೂ ಆದೇಶ ನೀಡಲಾಗಿತ್ತು. ಆದರೆ ಈ ನಿರ್ಧಾರ ಕೋರ್ಟ್ ಕಟಕಟೆ ಏರಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಾರ್ಖಾನೆಗಳಿಂದ ತಾನೇ ಪಾವತಿ ಮಾಡುವುದಾಗಿ ಹೇಳಿ ಅಫಿಡವಿಟ್ ಸಲ್ಲಿಸಿ ಒಂದೂವರೆ ವರ್ಷವಾದರೂ ಬಾಕಿ ಹಣ ಪಾವತಿಯಾಗಿಲ್ಲ ಎಂದು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Road Potholes: ರಸ್ತೆ ಗುಂಡಿ ಮುಚ್ಚಲು ಆಗ್ರಹ; ಆರ್. ಅಶೋಕ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ
ಸಿಎಂ ಸಲಹೆಗಳೆಲ್ಲ ಎಲ್ಲಿ ಹೋದವು?
ಸಿಎಂ ಸಿದ್ದರಾಮಯ್ಯ ಅವರಿಗೆ ಮರೆಗುಳಿ ಹೆಚ್ಚಾದಂತೆ ಕಾಣುತ್ತಿದೆ. ಅವರು ವಿರೋಧ ಪಕ್ಷದಲ್ಲಿದ್ದಾಗ ರೈತರಿಗೆ ಹೆಚ್ಚಿನ ಪ್ರೋತ್ಸಾಹ ಧನ ನಿಗದಿ ಮಾಡಿ, ₹5 ಸಾವಿರ ಕೊಟಿ ಆವರ್ತ ನಿಧಿ ಸ್ಥಾಪನೆ ಮಾಡಿ, ಗ್ರಾಪಂ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಎಂದೆಲ್ಲಾ ಸಲಹೆ ನೀಡಿದ್ದರು. ಈಗ ತಾವೇ ಅಧಿಕಾರದಲ್ಲಿ ಇದ್ದಾರೆ. ಅವೆಲ್ಲಾ ಸಲಹೆಗಳು ಎಲ್ಲಿ ಹೋದವು? ಏಕೆ ಕಾರ್ಯರೂಪಕ್ಕೆ ತರಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಟಿ ಬೀಸಿದರು.