ಬೆಂಗಳೂರು, ಜು. 2: ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಶಿಸ್ತು ಕ್ರಮ ಮುಂದುವರಿದಿದೆ. ಇತ್ತೀಚೆಗಷ್ಟೆ ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ (MG Mahesh) ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿತ್ತು. ಪಕ್ಷದ ಹೈಕಮಾಂಡ್ ನಾಯಕರು ಮತ್ತು ರಾಜ್ಯ ನಾಯಕತ್ವದ ವಿರುದ್ಧ ಹಗುರವಾಗಿ ಮಾತನಾಡಿದ ಆರೋಪದ ಮೇಲೆ ಉಚ್ಚಾಟಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಡತನಮಲೆ (Satish Kadathanamale) ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ 6 ವರ್ಷ ಅಮಾನತು ಮಾಡಲಾಗಿದೆ. ಆ ಮೂಲಕ ಬಿಜೆಪಿಯಲ್ಲಿ ʼಶುದ್ಧೀಕರಣʼ ಕಾರ್ಯ ನಡೆಯುತ್ತಿದೆ.
ಬಮೂಲ್ ನಿರ್ದೇಶಕರೂ ಆಗಿರುವ ಸತೀಶ್ ಕಡತನಮಲೆ ಅವರನ್ನು ಉಚ್ಚಾಟಿಸಿ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಸತೀಶ್ ಅವರ ನಡವಳಿಕೆ ಕುರಿತು ಸ್ಥಳೀಯ ಮುಖಂಡರು ರಾಜ್ಯ ಶಿಸ್ತು ಸಮಿತಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಪಕ್ಷವು ಅವರಿಗೆ ನೋಟಿಸ್ ನೀಡಿ ಸ್ಪಷ್ಟೀಕರಣ ಕೇಳಿತ್ತು. ಸತೀಶ್ ನೀಡಿದ ಸ್ಪಷ್ಟೀಕರಣವು ತೃಪ್ತಿ ನೀಡದ ಕಾರಣ, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿ 6 ವರ್ಷ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಕ್ಷದ ನಾಯಕರ ವಿರುದ್ಧ ಅವಹೇಳನಕಾರಿ ಆರೋಪ; ಬಿಜೆಪಿಯಿಂದ ಎಂ.ಜಿ. ಮಹೇಶ್ 6 ವರ್ಷ ಉಚ್ಚಾಟನೆ
ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಸೇರಿ ಸ್ಥಳೀಯ ಪ್ರಮುಖ ಬಿಜೆಪಿ ನಾಯಕರ ವಿರುದ್ಧ ಸತೀಶ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು ಈಗ ಅವರಿಗೇ ಮುಳುವಾಗಿ ಪರಿಣಮಿಸಿದೆ. ಸತೀಶ್ ಈ ಹಿಂದೆ ಬಿಜೆಪಿ ಸಂಸದ ಡಾ.ಕೆ. ಸುಧಾಕರ್ ಅವರಿಗೆ ಅತ್ಯಂತ ಆಪ್ತರಾಗಿದ್ದರು. ಆದರೆ ಇತ್ತೀಚೆಗೆ ಅವರಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್‌ನ ನಾಯಕ ಡಿ.ಕೆ. ಸುರೇಶ್ ಅವರೊಂದಿಗೂ ಗುರುತಿಸಿಕೊಳ್ಳುತ್ತಿದ್ದರು. ಸದ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಶಿಸ್ತು ಕ್ರಮ ಪಕ್ಷವನ್ನು ಪುನರ್ ಸಂಘಟಿಸುವ ಕ್ರಮದ ಭಾಗ ಎನಿಸಿಕೊಂಡಿದೆ. 2028ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಈ ಮೂಲಕ ತಯಾರಿ ನಡೆಸುತ್ತಿದೆ.
ಮಹೇಶ್ ಉಚ್ಚಾಟನೆಗೊಂಡಿದ್ದು ಯಾಕೆ?
ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ವಿರುದ್ಧ ಅವಹೇಳನಕಾರಿ ಆರೋಪ ಮಾಡಿ, ಶಿಸ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದ ವಕ್ತಾರ, ಮೈಸೂರಿನ ಎಂ.ಜಿ. ಮಹೇಶ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿತ್ತು. ಈ ಬಗ್ಗೆ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಆದೇಶ ಹೊರಡಿಸಿದ್ದರು.
ಬಿಜೆಪಿ-ದಳದ ಟೀಕೆಗಳು ಸತ್ತಿವೆ, ನಮ್ಮ ಸರ್ಕಾರದ ಯೋಜನೆಗಳು ಶಾಶ್ವತವಾಗಿ ಉಳಿಯಲಿವೆ: ಡಿ.ಕೆ.ಶಿವಕುಮಾರ್
ಜೂನ್ 19ರಂದು ನಡೆದ ಪಕ್ಷದ ವೆಬೆಕ್ಸ್ ಸಭೆಯಲ್ಲಿ, ತಾವು ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ಬಿಜೆಪಿ ಪ್ರಮುಖರ ಕುರಿತಾಗಿ ಇಲ್ಲಸಲ್ಲದ ಮತ್ತು ಕೀಳುಮಟ್ಟದ ಹಾಗೂ ಅವಹೇಳನಕಾರಿ ಆರೋಪಗಳನ್ನು ಮಾಡಿ, ಪಕ್ಷದ ಸಂಘಟನೆಯಲ್ಲಿ ಅಶಿಸ್ತು ಪ್ರದರ್ಶಿಸಿರುವುದು ಗಮನಕ್ಕೆ ಬಂದಿದ್ದು, ಅದರ ಕುರಿತಾಗಿ ಸ್ಪಷ್ಟಿಕರಣ ಕೇಳಿ ನೋಟಿಸ್ ನೀಡಲಾಗಿತ್ತು. ಇದಕ್ಕೆ ಮಹೇಶ್ ನೀಡಿದ ಸ್ಪಷ್ಟೀಕರಣ ಸಮಂಜಸವಾಗಿಲ್ಲದ ಕಾರಣ ಉಚ್ಚಾಟಿಸಲಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.