ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಾ. 21ರಂದು ಕಾವೇರಿ ಆರತಿ, ಸಾರ್ವಜನಿಕರಿಗೆ ಮುಕ್ತ ಪ್ರವೇಶ: ಡಿಕೆಶಿ

DK Shivakumar: ʼʼಬೆಂಗಳೂರಿನ ಇತಿಹಾಸದಲ್ಲಿ ಎಂದೂ ಕಾವೇರಿ ಆರತಿ ನಡೆದಿಲ್ಲ. ಮುಂದೆ ಇದಕ್ಕಿಂತ ದೊಡ್ಡ ಕಾರ್ಯಕ್ರಮ ನಡೆಯಬಹುದು. ಆದರೆ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಯುತ್ತಿದೆ. ಬೆಂಗಳೂರಿನಲ್ಲಿ ಮುಂದೆಂದೂ ನೀರಿಗೆ ತೊಂದರೆ ಆಗಬಾರದು, ಅಂತರ್ಜಲ ಹೆಚ್ಚಿಸಬೇಕು ಎಂದು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ನಾವು ಪ್ರಾರ್ಥನೆ ಮೂಲಕ ಒಂದು ಪ್ರಯತ್ನ ಮಾಡುತ್ತಿದ್ದೇವೆʼʼ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್.

ಬೆಂಗಳೂರು: ಬೇಸಗೆ ಸಮಯದಲ್ಲಿ ನೀರಿನ ಸಂರಕ್ಷಣೆ ಅಭಿಯಾನದ ಜತೆಗೆ, ಬೆಂಗಳೂರು ಹಾಗೂ ರಾಜ್ಯದಲ್ಲಿ ನೀರಿನ ಅಭಾವ ಎದುರಾಗದಿರಲಿ ಎಂದು ಪ್ರಾರ್ಥಿಸಲು ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಮಾಡಲು ಸರ್ಕಾರ ತೀರ್ಮಾನಿಸಿದೆ. ಇದು ಸರ್ಕಾರದ ಕಾರ್ಯಕ್ರಮವೇ ಹೊರತು ರಾಜಕೀಯ ಕಾರ್ಯಕ್ರಮವಲ್ಲ. ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು ಜನರು ಬಂದು ಇದನ್ನು ಕಣ್ತುಂಬಿಕೊಳ್ಳಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು. ವಿಧಾನಸೌಧ ಹಾಗೂ ಸ್ಯಾಂಕಿ ಕೆರೆ ಆವರಣದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾ. 22ರಂದು ವಿಶ್ವ ಜಲ ದಿನ. ಈ ಬಾರಿ ರಾಜ್ಯದಲ್ಲಿ ಈ ದಿನವನ್ನು ಬಹಳ ವಿಶೇಷವಾಗಿ ಆಚರಿಸುತ್ತಿದ್ದೇವೆ. ಬೆಂಗಳೂರು ಜಲ ಮಂಡಳಿ, ನೀರಾವರಿ ಹಾಗೂ ಸಣ್ಣ ನೀರಾವರಿ ಇಲಾಖೆಗಳು ಸೇರಿ ನೀರಿನ ಸಂರಕ್ಷಣೆ ಕುರಿತು ಅಭಿಯಾನ ನಡೆಸುತ್ತಿವೆ. ಬೆಂಗಳೂರಿಗೆ ಕಾವೇರಿ ನೀರು ಆಧಾರ ಹೀಗಾಗಿ ಶುಕ್ರವಾರ ಭಾಗಮಂಗಲಕ್ಕೆ ಹೋಗಿ ಅಲ್ಲಿನ ಸ್ಥಳೀಯ ಶಾಸಕರ ಜತೆ ತಲಕಾವೇರಿಗೆ ಪೂಜೆ ನೆರವೇರಿಸಲಿದ್ದೇನೆ. ನಂತರ ಸಂಜೆ 5 ಗಂಟೆಗೆ ಇಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು, 7 ಗಂಟೆಗೆ ಕತ್ತಲಾದ ಬಳಿಕ ಆರತಿ ನಡೆಯಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಇತಿಹಾಸದಲ್ಲಿ ಎಂದೂ ಕಾವೇರಿ ಆರತಿ ನಡೆದಿಲ್ಲ. ಮುಂದೆ ಇದಕ್ಕಿಂತ ದೊಡ್ಡ ಕಾರ್ಯಕ್ರಮ ನಡೆಯಬಹುದು. ಆದರೆ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಯುತ್ತಿದೆ. ಬೆಂಗಳೂರಿನಲ್ಲಿ ಮುಂದೆಂದೂ ನೀರಿಗೆ ತೊಂದರೆ ಆಗಬಾರದು, ಅಂತರ್ಜಲ ಹೆಚ್ಚಿಸಬೇಕು ಎಂದು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ನಾವು ಪ್ರಾರ್ಥನೆ ಮೂಲಕ ಒಂದು ಪ್ರಯತ್ನ ಮಾಡುತ್ತಿದ್ದೇವೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಂಬಿದ್ದೇವೆ. ಉತ್ತಮ ಮಳೆಯಾಗಲಿ, ರಾಜ್ಯಕ್ಕೆ ಜಲ ಸಮಸ್ಯೆ ಬಾರದಿರಲಿ ಎಂದು ಪ್ರಾರ್ಥಿಸೋಣ ಎಂದರು.

ಈ ಸುದ್ದಿಯನ್ನೂ ಓದಿ: DK Shivakumar: ಕೃಷ್ಣಾ ಮೇಲ್ದಂಡೆ 3ನೇ ಹಂತ ಜಾರಿಗೆ 87,818 ಕೋಟಿ ರೂ. ಬೇಕು: ಡಿ.ಕೆ.ಶಿವಕುಮಾರ್

ನಾವು ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದೇವೆ. ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು 6ನೇ ಹಂತದ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗಿದೆ. ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆಗೆ ಜನರಲ್ಲಿ ಜಾಗೃತಿ ಮೂಡಿಸಲು ಒಂದು ತಿಂಗಳ ಕಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅನೇಕರು ಕಾರು, ವಾಹನ ತೊಳೆಯಲು, ಗಿಡಗಳಿಗೆ ಕುಡಿಯುವ ನೀರನ್ನು ಬಳಸುತ್ತಿದ್ದಾರೆ. ಹೀಗೆ ಸುಮಾರು 20% ಕುಡಿಯುವ ನೀರು ವ್ಯರ್ಥವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿಜ್ಞಾ ಸ್ವೀಕಾರ ಮಾಡಿಸಲಾಗುವುದು. ಇನ್ನು ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಮಾಡಲು ನಾನು ಈ ಹಿಂದೆಯೇ ಘೋಷಣೆ ಮಾಡಿದ್ದೆ. ಅದಕ್ಕೆ ಪೂರ್ವ ತಯಾರಿ ನಡೆಯುತ್ತಿದೆ. ಈ ಸಂಬಂಧ ಒಂದು ತಂಡ ಕಾಶಿ ಸೇರಿದಂತೆ ಅನೇಕ ಕಡೆಗಳಲ್ಲಿ ಹೋಗಿ ನೋಡಿಕೊಂಡು ಬರಲಾಗಿದೆ ಎಂದು ಹೇಳಿದರು.

ಇಲ್ಲಿ ಈ ಹಿಂದೆ ಕರ್ನಾಟಕ ರಾಜ್ಯೋತ್ಸವ, ಶಾಸಕರ ಹುಟ್ಟುಹಬ್ಬ ಕಾರ್ಯಕ್ರಮಗಳು ನಡೆದಿವೆ. ನಾನು ಐದಾರು ಕೆರೆ ಪರಿಶೀಲಿಸಿ, ಕೊನೆಗೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಮಾಡಲು ತೀರ್ಮಾನಿಸಿದ್ದೇವೆ. ಕೆರೆ ಪಕ್ಕದಲ್ಲಿ ಗಂಗಮ್ಮ ದೇವಿ ದೇವಾಲಯವಿದ್ದು, ಅಲ್ಲಿ ಪೂಜೆ ಮಾಡಿ, ಆರತಿ ತಂದು ಕಾವೇರಿ ಆರತಿ ಮಾಡಲಿದ್ದೇವೆ. ಈ ಕಾರ್ಯಕ್ರಮ ವಿರೋಧಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು, ನಾವು ಕೂಡ ನಮ್ಮ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಿದೆವು. ಈ ಕಾರ್ಯಕ್ರಮಕ್ಕೆ ಆಕ್ಷೇಪ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನಾವು ಯಾರಿಗೂ ಹಾನಿ ಮಾಡದೆ ಕಾರ್ಯಕ್ರಮ ಮಾಡುತ್ತೇವೆ. ಇದು ರಾಜಕೀಯ ಕಾರ್ಯಕ್ರಮವಲ್ಲ, ಸರ್ಕಾರಿ ಕಾರ್ಯಕ್ರಮ. ನಾಳೆ ನಡೆಯಲಿರುವ ಕಾವೇರಿ ಆರತಿ ಪೂಜಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ನೀವು ಬಂದು ಕಾರ್ಯಕ್ರಮ ನೋಡಿ, ನಂತರ ನೀವು ನಿಮ್ಮ ಅಭಿಪ್ರಾಯ ತಿಳಿಸಿ. ಎಲ್ಲಾ ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸಿ, ನೀರಿನ ಉಳಿತಾಯ ಮಾಡಬೇಕು ಎಂದರು.

ಸಂಗೀತ ಕಾರ್ಯಕ್ರಮ, ದೀಪಾಲಂಕಾರ

ಸಂಜೆ 5.30ಕ್ಕೆ ಅನನ್ಯ ಭಟ್ ಹಾಗೂ ರಘು ದೀಕ್ಷಿತ್ ಅವರ ಸಂಗೀತ ಕಾರ್ಯಕ್ರಮ ಇರಲಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ತೇಲುವ ವೇದಿಕೆ ಸಿದ್ಧಪಡಿಸಲಾಗಿದೆ. ಮುಂಬೈನಿಂದ ವಿಶೇಷವಾಗಿ ತರಿಸಲಾಗಿದೆ. ಎರಡು ತಂಡ ಸುಮಾರು 50 ನಿಮಿಷಗಳ ಕಾಲ ವಿಜೃಂಭಣೆಯಿಂದ ಕಾವೇರಿ ಆರತಿ ನಡೆಸಲಿವೆ. ಇದರ ಜತೆಗೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ಮುಂದೆ ಯಾವ ರೀತಿ ಇದನ್ನು ಇನ್ನಷ್ಟು ಉತ್ತಮವಾಗಿ ಮಾಡಬಹುದು ಎಂದು ಸಾರ್ವಜನಿಕರು ಸಲಹೆ ನೀಡಬಹುದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಯಾವುದೇ ರೀತಿಯ ಪಾಸ್, ಶುಲ್ಕ ಇರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.