ಹಾಸನ: ನಾನು ಕೋಟಿಗಟ್ಟಲೆ ಕನ್ನಡಿಗರ ಪ್ರೀತಿ, ಅಭಿಮಾನವನ್ನು ಪಡೆದಿದ್ದೇನೆ. ಇಂತಹುದ್ದರ ನಡುವೆ ಒಂದಿಬ್ಬರ ನಕಾರಾತ್ಮಕ ಟೀಕೆ, ಪ್ರತಿಕ್ರಿಯೆಗಳಿಗೆ ಉತ್ತರವನ್ನು ಕೊಡುವ ಅಗತ್ಯವಿಲ್ಲ. ಕೋಟಿ ಕನ್ನಡಿಗರ ಪ್ರೀತಿಯ ಮುಂದೆ ಒಂದಿಬ್ಬರ ಟೀಕೆ ಲೆಕ್ಕಕ್ಕಿಲ್ಲ. ಲಕ್ಷಾಂತರ ಜನರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಹೀಗಾಗಿ ಕೆಲವರ ವಿರೋಧ ಹಾಗೂ ಪ್ರತಿಕ್ರಿಯೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಬೂಕರ್ ಪ್ರಶಸ್ತಿ (Booker Award) ವಿಜೇತ ಲೇಖಕಿ, ಮೈಸೂರು ದಸರಾ (Mysuru Dasara) ಉದ್ಘಾಟನೆಗೆ ಆಹ್ವಾನಿತೆ ಬಾನು ಮುಷ್ತಾಕ್ (Banu Mushtaq) ಹೇಳಿದ್ದಾರೆ.
ಪ್ರಸಕ್ತ ಸಾಲಿನ ದಸರಾ ಉತ್ಸವವನ್ನು ಉದ್ಘಾಟಿಸಲು ರಾಜ್ಯ ಸರ್ಕಾರ ತಮ್ಮನ್ನು ಆಹ್ವಾನಿಸಿದ್ದನ್ನು ವಿರೋಧ ಪಕ್ಷಗಳು ಟೀಕಿಸುತ್ತಿರುವುದಕ್ಕೆ ಬಾನು ಮುಷ್ತಾಕ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಕ್ಷೇಪ ವ್ಯಕ್ತಪಡಿಸುತ್ತಿರುವ ನಾಯಕರಿಗೆ ಬೂಕರ್ ಪ್ರಶಸ್ತಿಯ ಮಹತ್ವ ತಿಳಿದಿದ್ದರೆ ಸರ್ಕಾರದ ನಿರ್ಧಾರವನ್ನು ಟೀಕಿಸುತ್ತಿರಲಿಲ್ಲ, ಪ್ರಶಸ್ತಿ ಬಗ್ಗೆ ಸಡಿಲವಾಗಿ ಮಾತನಾಡುವವರಿಗೆ ನಾನು ಉತ್ತರಿಸಲು ಬಯಸುವುದಿಲ್ಲ ಎಂದು ತಿಳಿಸಿದರು.
2023ರಲ್ಲಿ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮಾನಾಂತರವಾದ ಜನ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣ ಕುರಿತು ಮಾತನಾಡಿ, ನನ್ನ ಭಾಷಣವನ್ನು ತಿರುಚಲಾಗಿದ್ದು, ನನ್ನ ವರ್ಚಸ್ಸಿಗೆ ಧಕ್ಕೆ ತರಲು ಸಾಮಾಜಿಕ ಜಾಲಜಾಣಗಳಲ್ಲಿ ತಿರುಚಿದ ವೀಡಿಯೋಗಳನ್ನು ಹಂಚಲಾಗಿದೆ. ಸಮ್ಮೇಳನದಲ್ಲಿ ನಾನು ಮುಸ್ಲಿಮರು, ದಲಿತರು, ಮಹಿಳೆಯರು ಮತ್ತು ದೀನದಲಿತ ಬರಹಗಾರರ ನಿರ್ಲಕ್ಷ್ಯದ ಬಗ್ಗೆ ನಾನು ಮಾತನಾಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅವರ ಪ್ರತಿಕ್ರಿಯೆಯನ್ನು ಶ್ಲಾಘಿಸಿದ ಅವರು. ಇಂತಹ ನಾಯಕರ ಸಂಖ್ಯೆ ಹೆಚ್ಚಾಗಬೇಕು ಎಂದರು. ನಾನು ಬಿಜೆಪಿ ಪಕ್ಷದಲ್ಲಿ ಮೈಸೂರು ಸಂಸದ ಯದುವೀರ್ ಅವರಂತಹ ಸಂತತಿ ಹೆಚ್ಚಾಗಲಿ ಎಂಬುದಾಗಿ ಆಪೇಕ್ಷೆ ಪಡುತ್ತೇನೆ. ಒಂದು ಸಮತೋಲನದಿಂದ ವಿಷಯ ಅನ್ವೇಷಣೆ ಮಾಡಿ ಆ ಬಗ್ಗೆ ದ್ವಂದ್ವ ಇಲ್ಲದಂತೆ ಹೇಳಿಕೆ ನೀಡಬೇಕು. ಅವರವರ ಮಟ್ಟಕ್ಕೆ ತಕ್ಕಂತೆ ಅವರು ಮಾತನಾಡುತ್ತಾರೆ. ಮಾತನಾಡಲಿ ಬಿಡಿ ಎಂಬುದಾಗಿ ತಿರುಗೇಟು ನೀಡಿದರು.
ನನಗೆ ಕೋಟ್ಯಾಂತರ ಕನ್ನಡಿಗರು ತಮ್ಮ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಅಭಿಮಾನವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಎಲ್ಲೋ ಒಂದಿಬ್ಬರು ನೆಗೆಟಿವಿಟಿಗೆ ಯಾಕೆ ಪ್ರತಿಕ್ರಿಯೆ ನೀಡಬೇಕು? ಅದರ ಅಗತ್ಯವೇ ಇಲ್ಲ. ಈ ಟೀಕೆಗೆ ಜನರೇ ಪ್ರತಿಕ್ರಿಯೆ ಕೊಡುತ್ತಾರೆ. ರಾಜಕೀಯ ಮಾಡೋದಕ್ಕೆ ವಿರೋಧ ಪಕ್ಷ, ಆಡಳಿತ ಪಕ್ಷ ಅಂತ ಇರಬೇಕು. ಆದರೆ ಯಾವ ವಿಚಾರದಲ್ಲಿ ರಾಜಕೀಯ ಮಾಡಬೇಕೋ ಅದರಲ್ಲಿ ಮಾಡಬೇಕು. ಆ ಬಗ್ಗೆ ಪ್ರಜ್ಞೆ ಸಕ್ರೀಯ ರಾಜಕಾರಣದಲ್ಲಿರುವಂತವರಿಗೆ ಇರಬೇಕು ಎಂಬುದಾಗಿ ತಮ್ಮನ್ನು ಟೀಕಿಸಿದ ರಾಜಕಾರಣಿಗಳಿಗೆ ಕುಟುಕಿದರು.
ತಮ್ಮ ಗೆಳತಿ, ಮೈಸೂರಿನ ಲೇಖಕಿ ಮೀನಾ ಮೈಸೂರು ಅವರ ಬಗ್ಗೆ ಒಂದು ಆಸಕ್ತಿದಾಯಕ ವಿಷಯವನ್ನು ಭಾನು ಮುಷ್ತಾಕ್ ಹಂಚಿಕೊಂಡಿದ್ದಾರೆ. ʼನನ್ನ ಕೃತಿ ಬೂಕರ್ ಪ್ರಶಸ್ತಿಗೆ ಲಾಂಗ್‌ಲಿಸ್ಟ್ ಆದಾಗ, ಗೆಳತಿ ಮೀನಾ ಮೈಸೂರು ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದರಂತೆ. ಆ ವಿಷಯ ಕೇಳಿ ನಾನು ಸಂತೋಷಪಟ್ಟಿದ್ದೆ. ಬೂಕರ್ ಗೆದ್ದ ನಂತರ ಮೈಸೂರಿಗೆ ಹೋಗುವ ಅವಕಾಶ ಸಿಕ್ಕಿರಲಿಲ್ಲ. ಮೈಸೂರು ಲಿಟ್ ಫೆಸ್ಟ್ ಸಂದರ್ಭದಲ್ಲಿ ಒಮ್ಮೆ ಭೇಟಿಯಾಗಿದ್ದೆ. ಆಗ ಮೀನಾ, 'ಈಗ ಚಾಮುಂಡಿ ಬೆಟ್ಟಕ್ಕೆ ಹೋಗಿ ಹರಕೆ ತೀರಿಸೋಣ' ಎಂದಿದ್ದರು. ಆದರೆ, ಸಮಯದ ಕೊರತೆಯಿಂದ ಹೋಗಲಾಗಿರಲಿಲ್ಲ. ಈಗ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದು ಭಾವಿಸುತ್ತೇನೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Banu Mushtaq: ದಸರಾ ಉದ್ಘಾಟನೆಗೆ ಆಹ್ವಾನ- ವಿರೋಧ, ಬಾನು ಮುಷ್ತಾಕ್ ರಿಯಾಕ್ಷನ್