ಬೆಂಗಳೂರು, ಸೆ.30: ಬರಗಾಲಕ್ಕೆ ಸಂಬಂಧಿಸಿದಂತೆ ರೈತರಿಗಾಗಿ ನಾವು ಇಟ್ಟ ಬೇಡಿಕೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿಲ್ಲ. ಅದರ ಬದಲು ಕೇವಲ 2,500 ರೂ. ನೀಡಿ ಕೈ ತೊಳೆದುಕೊಳ್ಳಲಾಗಿದೆ. ಆದ್ದರಿಂದ ಕೇಂದ್ರಕ್ಕೆ ನಿಯೋಗ ಹೋಗುವ ಬದಲು ನಾವು ಜನರ ಬಳಿಗೆ, ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಅವರ ಜೋಡಿಯ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಮೂರು ಸಂಕಷ್ಟಗಳಿಗೆ ದೂಡಿದೆ ಎಂದು ಆರೋಪಿಸಿದರು.
ಬರಗಾಲದಿಂದಾಗಿ ರೈತರು ಸಾಯುವ ಪರಿಸ್ಥಿತಿಗೆ ಹೋಗಿದ್ದಾರೆ. ಮಂಡ್ಯದ ಮಳವಳ್ಳಿಯಲ್ಲಿ ಯುವಕ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಹಾಗೂ ಇನ್ನೊಬ್ಬ ರೈತ ಕೆ.ಎಂ. ದೊಡ್ಡಿ ಬಳಿ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ದನಕರುಗಳಿಗೆ ನೀರಿಲ್ಲ, ಬೋರ್‌ವೆಲ್‌ಗಳು ಹಾಳಾಗಿವೆ. ಮನಸ್ಸಿಗೆ ಬಂದಂತೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಖಜಾನೆಯ ಮೇಲೆ ಒತ್ತಡ ಅಧಿಕವಾಗಿದೆ. ಈ ನಾಲ್ಕು ದಿನಗಳ ಅಧಿವೇಶನದ ವಿಶೇಷ ಚರ್ಚೆಯಲ್ಲಿ ಈ ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸಲಾಯಿತು.
ಅಷ್ಟೇಲ್ಲಾ ಮನವರಿಕೆ ಮಾಡಿದರೂ ಎಕರೆಗೆ ಕನಿಷ್ಟ 25,000 ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿತ್ತು. ವಿಬಿ ಜಿ ರಾಮ್‌ಜಿ ಮೂಲಕ ವಲಸೆ ಹೋಗುವವರನ್ನು ತಡೆಯಿರಿ ಎಂದು ಆಗ್ರಹಿಸಲಾಗಿತ್ತು. ಆದರೆ ಈ ಯಾವುದೇ ಆಗ್ರಹಗಳನ್ನು ಈಡೇರಿಸಿಲ್ಲ. ಬದಲಾಗಿ 50 ಲಕ್ಷ ಕುಟುಂಬಕ್ಕೆ ತಲಾ 2,500 ರೂ. ನೀಡುವುದಾಗಿ ಸರ್ಕಾರ ಪ್ರಕಟಿಸಿ ರೈತರನ್ನು ಅಪಮಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವರು ಕೊಡುವ ಪರಿಹಾರದಲ್ಲಿ ಎತ್ತುಗಳಿಗೆ ಲಾಳ ಹೊಡೆಸಲು, ಮೂಗುದಾರ ಹಾಕಲು ಹಣ ಸಾಲುವುದಿಲ್ಲ. ರಾಜ್ಯದ 50 ಲಕ್ಷ ರೈತರಿಗೆ 1250 ಕೋಟಿ ರೂ. ನೀಡಲಾಗುತ್ತಿದೆ. ಆದರೆ ಬರಗಾಲದ ಕುರಿತು ಕೇಂದ್ರಕ್ಕೆ ಪತ್ರ ಬರೆಯುವ ಬಗ್ಗೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಕಸ್ತೂರಿ ರಂಗನ್ ವರದಿ ಕುರಿತು ಸರ್ವಾನುಮತದ ನಿರ್ಣಯದ ಬಗ್ಗೆ ನಮ್ಮನ್ನು ಕೇಳಿ, ಚರ್ಚಿಸಿ ಮಾಹಿತಿ ಪಡೆದು ಮನವಿ ಸಿದ್ದಪಡಿಸಿದರು. ಬರದ ವಿಷಯದಲ್ಲಿ ಆ ಕೆಲಸ ಮಾಡಿಲ್ಲ ಎಂದರು.
ರಾಜ್ಯ ರೈತರಿಗೆ ಸಿಹಿಸುದ್ದಿ; MSP ಅಡಿ ಹೆಸರುಕಾಳು, ಸೂರ್ಯಕಾಂತಿ, ಸೋಯಾಬೀನ್ ಖರೀದಿಗೆ ಕೇಂದ್ರ ಸರ್ಕಾರ ಅಸ್ತು
ಬರಗಾಲದಲ್ಲಿ ರಾಜಕೀಯ ಬೇಡ
ರೈತರಿಗೆ ಭಿಕ್ಷೆ ನೀಡಿದಂತೆ ನೀಡುತ್ತಾರೆ ಆದರೆ ಗ್ಯಾರಂಟಿ ಸಮಿತಿಗಳಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಭಾರತ್ ಜೋಡೋ ಸಮಿತಿಗಳಿಗೆ 1,110 ಕೋಟಿ ರೂ. ನೀಡಲಾಗುತ್ತಿದೆ. ಈ ಸಮಿತಿಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ಸೀಮಿತವಾಗಿರಲಿದೆ. ಕಾಂಗ್ರೆಸ್ ಪಕ್ಷದವರಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಿ ಗಂಜಿ ಕೇಂದ್ರ ಆರಂಭಿಸುತ್ತಾರೆ. ಆದರೆ, ರೈತರಿಗೆ ಬಿಡಿಗಾಸು ನೀಡಲಾಗುತ್ತಿದೆ. ಈಗ ಸಿಎಂ ಡಿ.ಕೆ.ಶಿವಕುಮಾರ್ ನಮಗೆ ಪತ್ರ ಬರೆದು ಕೇಂದ್ರಕ್ಕೆ ನಿಯೋಗ ಹೋಗೋಣ ಎಂದು ಮನವಿ ಮಾಡಿದ್ದಾರೆ. ನಾವು ಕೇಂದ್ರಕ್ಕೆ ಹೋಗಲು ಸಿದ್ಧವಿದ್ದೇವೆ. ಆದರೆ ಸರ್ಕಾರದಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಿಯೇ ಇಲ್ಲ. ಕುಡಿಯುವ ನೀರಿಗೂ ಹಣ ಬಿಡುಗಡೆ ಮಾಡಿಲ್ಲ. ಸರ್ವಪಕ್ಷ ನಿಯೋಗ ಹೋಗಬೇಕೆಂದರೆ ಬರಗಾಲದ ಬಗ್ಗೆ ನಮ್ಮ ಜತೆ ಚರ್ಚಿಸಬೇಕಿತ್ತು. ಅದನ್ನು ಬಿಟ್ಟು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ರಾಜಕೀಯ ಮಾಡಲಾಗಿದೆ ಎಂದು ದೂರಿದರು.
ರಾಜ್ಯದಲ್ಲಿ 36% ಹಾಗೂ ದಕ್ಷಿಣ ಒಳನಾಡಿನಲ್ಲಿ 46% ಮಳೆ ಕೊರತೆಯಾಗಿದೆ. ಆದರೆ ಕೇವಲ 2,500 ರೂ. ನೀಡಿ ಕೈ ತೊಳೆದುಕೊಳ್ಳಲಾಗಿದೆ. ನಾನು ಮೈಕ್ರೋ ಫೈನಾನ್ಸ್ ಹಾವಳಿ ಬಗ್ಗೆ ಅಧಿವೇಶನದಲ್ಲಿ ಮಾತಾಡಿ ಬಿಗಿ ಕ್ರಮಕ್ಕೆ ಆಗ್ರಹಿಸಿದ್ದೆ. ಆದರೂ ಈಗ ಮಂಡ್ಯ ಜಿಲ್ಲೆಯಲ್ಲಿ ಎರಡು ಆತ್ಮಹತ್ಯೆ ಘಟನೆಗಳು ನಡೆದಿದ್ದು, ಇವು ಸರ್ಕಾರಿ ಪ್ರಾಯೋಜಿತ ಕೊಲೆಗಳು ಎಂದು ಆರೋಪಿಸಿದ ಅವರು, ಬ್ಯಾಂಕ್‌ನವರನ್ನು ಕರೆದು, ಅಧಿಕಾರಿಗಳನ್ನು ಕರೆದು ಸಭೆ ಮಾಡಿ ಸೂಚನೆ ನೀಡಿ ಎಂದು ನಾನು ಹೇಳಿದ್ದರೂ ಅದನ್ನು ಮಾಡಿಲ್ಲ. ಸಭೆ ಮಾಡಿದ್ದರೆ ರೈತರ ಜೀವ ಉಳಿಸಬಹುದಿತ್ತು ಎಂದರು.
ಹಣಕಾಸಿನ ಪರಿಸ್ಥಿತಿ ಏನು?
ಬರಗಾಲ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಪ್ರತಿ ಕ್ಷೇತ್ರಕ್ಕೆ ಒಂದು ಕೋಟಿ ರೂ. ಘೋಷಿಸಲಾಗಿದೆ. ಇನ್ನೂ ಬಿಡುಗಡೆ ಮಾಡಿಲ್ಲ. ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಬರ ಬಂದು ಇಷ್ಟು ತಿಂಗಳಾದರೂ ಇನ್ನೂ ಅಂದಾಜು ಮಾಡುವುದರಲ್ಲೇ ಇದ್ದಾರೆ. ಸರ್ಕಾರ ಪಾಪರ್ ಆಗಿದೆ ಎಂದು ನಾನು ಹೇಳುತ್ತಿದ್ದೇನೆ. ಹಾಗಾದರೆ ಹಣಕಾಸಿನ ಪರಿಸ್ಥಿತಿ ಏನಿದೆ ಎಂಬುದನ್ನು ತಿಳಿಸಲಿ. ಯಾವುದೇ ಮುಖ್ಯಮಂತ್ರಿ ಮಾಡದಷ್ಟು ಸಾಲವನ್ನು ಇವರು ಮಾಡಿ ರಾಹುಲ್ ಗಾಂಧಿಗೆ ಕಳುಹಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಬೇಕಿದೆ. ಸಾಲದ ಮಿತಿ 2.94% ದಾಟಿದೆ ಆದರೂ ಸರ್ಕಸ್ ಮಾಡಿ ಮಿತಿಯಲ್ಲಿ ಇಟ್ಟಿದ್ದಾರೆ. ಆದರೆ ವಾಸ್ತವದಲ್ಲಿ ಅದನ್ನು ಮೀರಿ ಹೋಗಿದೆ ಎಂದು ಹೇಳಿದರು.
ದಾಖಲೆ ಸಾಲ
ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬರೇ 4,36,803 ರೂ. ಸಾಲ ಮಾಡಿದ್ದಾರೆ. ಜೆ.ಎಚ್. ಪಟೇಲ್ 5,664 ರೂ., ಬಿ.ಎಸ್.ಯಡಿಯೂರಪ್ಪ ಇಡೀ ಅವಧಿಯಲ್ಲಿ 1,63,713 ರೂ., ಎಚ್.ಡಿ.ಕುಮಾರಸ್ವಾಮಿ 1,01,419 ರೂ. ಸಾಲ ಮಾಡಿದ್ದರು. ಬಸವರಾಜ ಬೊಮ್ಮಾಯಿ 67,000 ರೂ., ಡಿ.ವಿ. ಸದಾನಂದಗೌಡ 24,525 ರೂ., ಎಸ್.ಎಂ. ಕೃಷ್ಣ 20,576 ರೂ., ಧರ್ಮಸಿಂಗ್ 16,974 ರೂ., ಸಾಲ ಮಾಡಿದ್ದರು. ಎಲ್ಲ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ದರಾಮಯ್ಯ ಒಬ್ಬರೇ 52.33% ಸಾಲ ಮಾಡಿದ್ದಾರೆ, ಉಳಿದೆಲ್ಲ ಮುಖ್ಯಮಂತ್ರಿಗಳು 47% ಸಾಲ ಮಾಡಿದ್ದರು. ಕಳೆದ ಬಜೆಟ್‌ನಲ್ಲಿ 8,34,677 ಲಕ್ಷ ಕೋಟಿ ರೂ. ಸಾಲವಿದ್ದು, ಅದರಲ್ಲಿ ಸಿದ್ದರಾಮಯ್ಯ ಅವರ ಪಾಲು ದೊಡ್ಡದಿದೆ. ಕಾಂಗ್ರೆಸ್ ಪಕ್ಷದಿಂದ 5,66,970 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಅಂದರೆ ಇದು 68% ಆಗುತ್ತದೆ. ಬಿಜೆಪಿ ಅವಧಿಗಳಲ್ಲಿ 2,62,000 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಜೆಡಿಎಸ್ ಅವಧಿಯಲ್ಲಿ 5,664 ಕೋಟಿ ರೂ. ಸಾಲ ಮಾಡಲಾಗಿದೆ ಎಂದು ವಿವರಿಸಿದರು.
ಕೆಆರ್‌ಐಡಿಎಲ್ ಅಧಿಕಾರಿ ನಾಪತ್ತೆ
ಕೆಆರ್‌ಐಡಿಎಲ್ ಅಧಿಕಾರಿ ಫರ್ವೇಜ್ ಪತ್ರ ಬರೆದಿಟ್ಟು ಕಾಣೆಯಾಗಿದ್ದಾರೆ. “ಅನುದಾನ ಬಿಡುಗಡೆ ಬಗ್ಗೆ ಪತ್ರ ಬರೆದರೂ ಬಿಡುಗಡೆಯಾಗಿಲ್ಲ. ಪ್ರತಿ ನಿತ್ಯ ನನಗೆ ಹಿಂಸೆ ನೀಡುವುದು ಹಾಗೂ ಕಚೇರಿಯಲ್ಲಿ ಕೂಗಾಡುವುದರಿಂದ ನನಗೆ ಬೇಸರವಾಗಿದೆ. ನನ್ನ ಮಾನಸಿಕ ಆರೋಗ್ಯ ಹಾಳಾಗಿದೆ. ಆದ್ದರಿಂದ ನನ್ನ ಜೀವನವನ್ನು ಕೊನೆ ಮಾಡುತ್ತಿದ್ದೇನೆ”ಎಂದು ಬರೆದಿದ್ದಾರೆ. ಇದರಿಂದ ಆರ್ಥಿಕ ಇಲಾಖೆ ಯೋಗ್ಯತೆ ಗೊತ್ತಾಗಿದೆ. ಇದರ ಜತೆಗೆ ಕಾಂಟ್ರಾಕ್ಟ್ ಅಸೋಸಿಯೇಶನ್‌ನವರು ಪತ್ರ ಬರೆದಿದ್ದು, 38,000 ಕೋಟಿ ರೂ. ಬಿಡುಗಡೆ ಮಾಡಲು ಕ್ರಮ ವಹಿಸಬೇಕೆಂದು ಆಗ್ರಹಿಸಲಾಗಿದೆ. ರೈತರಿಗೆ ರಾಗಿ ಖರೀದಿ ಬಾಕಿ 260 ಕೋಟಿ ರೂ. ಇದೆ. ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಇದೇ ದಾಖಲೆ ಎಂದು ಆರೋಪಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಬಳಿ ಹೋಗುತ್ತಾರೆ? ಕೇಂದ್ರ ಸರ್ಕಾರಕ್ಕೆ ಬರಗಾಲಕ್ಕೆ ಕಾಲಕಾಲಕ್ಕೆ ಪರಿಹಾರ ನೀಡುತ್ತಾ ಬಂದಿದೆ. ಆದರೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಿಲ್ಲ. ಗ್ಯಾರಂಟಿಗಳನ್ನು ನೀಡಿದ ನಂತರ ಇದರಿಂದ ಅಭಿವೃದ್ಧಿಯಾಗುತ್ತಿಲ್ಲ ಎಂದು ಕಾಂಗ್ರೆಸ್ ಸಚಿವ ಬಾಲಕೃಷ್ಣ ಹೇಳಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಆರ್ಥಿಕ ಸ್ಥಿತಿಯನ್ನು ಪಾತಾಳಕ್ಕೆ ತಳ್ಳಿದ್ದಾರೆ. ನಾವು ಮತ್ತೆ ರೈತರ ಬಳಿಗೆ ಹೋಗಿ ಅವರ ಕಷ್ಟಗಳನ್ನು ಆಲಿಸುತ್ತೇವೆ ಎಂದರು.
ಹಿಂದಿನ ಸರ್ಕಾರಗಳು ಸಾಲ ಬಿಟ್ಟು ಹೋಗುವುದು ಸಹಜ. ಹಾಗೆಂದು ಹಿಂದಿನ ಸರ್ಕಾರದ ಮೇಲೆ ದೂರು ಹೇಳಲು ಸಾಧ್ಯವಿಲ್ಲ. ಗುತ್ತಿಗೆದಾರರಿಂದ ಕಮಿಷನ್ ವಸೂಲಿ ಮಾಡುತ್ತಿರುವುದರಿಂದ ಅವರು ಕೂಡ ಆತ್ಮಹತ್ಯೆ ಪರಿಸ್ಥಿತಿಗೆ ಹೋಗಿದ್ದಾರೆ. ಕಮಿಷನ್‌ಗೆ ಸಂಬಂಧಿಸಿದಂತೆ ಆಡಿಯೋ ಹೊರಬಂದಿದ್ದು, ಅದು ತನಿಖೆಯಾಗಬೇಕು. ಹೋದಲ್ಲೆಲ್ಲ ಕಮಿಷನ್ ಪಡೆಯುವುದು ಕಾಂಗ್ರೆಸ್ ಶೈಲಿಯಾಗಿದೆ. ಪ್ರಣಾಳಿಕೆಯಲ್ಲಿ 590 ಭರವಸೆಗಳನ್ನು ನೀಡಿದ್ದು, ಇದುವರೆಗೆ 245 ಮಾತ್ರ ಈಡೇರಿವೆ ಎಂದು ಟೀಕಿಸಿದರು.
ನೈಸ್ ಯೋಜನೆಯಲ್ಲಿ ಒಂದರಿಂದ ಎರಡು ಲಕ್ಷ ಕೋಟಿಯಷ್ಟು ಅವ್ಯವಹಾರ ನಡೆದಿದೆ. ಇದನ್ನು ಯಾರು ಶುರು ಮಾಡಿದ್ದಾರೆ ಎಂಬುದು ಮುಖ್ಯವಲ್ಲ. ಸರ್ಕಾರಕ್ಕೆ ಎಷ್ಟು ನಷ್ಟವಾಗಿದೆ ಎಂದು ನೋಡಬೇಕು. ಇದು ಆರಂಭವಾದಾಗಲೇ ನಾನು ಪ್ರತಿಭಟನೆ ಮಾಡಿದ್ದೆ. ನೈಸ್ ಕಂಪನಿ ಒಂದು ರೂಪಾಯಿ ಕೂಡ ಹೂಡಿಕೆ ಮಾಡಿಲ್ಲ. ಕೊಟ್ಟ ಜಮೀನಿಂದಲೇ ಸಾಲ ಪಡೆದು ರಸ್ತೆ ನಿರ್ಮಿಸಿ, ಹಣ ಸಂಪಾದಿಸುತ್ತಿದ್ದಾರೆ. ಇದಕ್ಕೆ ಗ್ಯಾರಂಟಿ ಕೊಟ್ಟವರೇ ಕಾಂಗ್ರೆಸ್‌ನ ನಾಯಕರು. ಹೊಸ ಯೋಜನೆ ಬಿಟ್ಟರೆ ಸರ್ಕಾರಕ್ಕೆ ಒಂದು ಲಕ್ಷ ಕೋಟಿ ರೂ. ಉಳಿಯುತ್ತದೆ. ಸಿಎಂ ಡಿ.ಕೆ.ಶಿವಕುಮಾರ್ ನೈಸ್ ಜತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಹಾಲಿನ ಪ್ರೋತಾಹಧನವನ್ನು 7 ರೂ. ಗೆ ಹೆಚ್ಚಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದು, ಅದನ್ನು ಜಾರಿ ಮಾಡಬೇಕು. ಅದನ್ನು ಬಿಟ್ಟು ಜನರ ಮೇಲೆ ಹೊರೆ ಹಾಕಬಾರದು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.