ಉಡುಪಿಯ ಸಾಸ್ತಾನ ಟೋಲ್ ವಿವಾದ; ಸಿಬ್ಬಂದಿಯನ್ನು ಕ್ಷಮಿಸಿದ ಮಾಜಿ ಸೈನಿಕ ಶ್ಯಾಮರಾಜ್
ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಅಲ್ಲಿನ ಸಿಬ್ಬಂದಿ ಮಾಜಿ ಸೈನಿಕ ಶ್ಯಾಮರಾಜ್ ಅವರಿಗೆ ಅವಮಾನ ಮಾಡಿದ ಪ್ರಕರಣ ಸುಖಾಂತ್ಯ ಕಂಡಿದೆ. ಇದೀಗ ಶ್ಯಾಮರಾಜ ಅವರನ್ನು ಕ್ಷಮಿಸಿರುವುದಾಗಿ ತಿಳಿಸಿದ್ದಾರೆ. ಆ ಮೂಲಕ ವಿವಾದ ಬಗೆಹರಿದಿದೆ. ಈ ಬಗ್ಗೆ ಅವರು ವಿಡಿಯೊ ಮಾಡಿದ್ದಾರೆ.
ಸಾಸ್ತಾನ ಟೋಲ್ ಪ್ಲಾಜಾ ಮತ್ತು ಶ್ಯಾಮರಾಜ -
ಉಡುಪಿ, ಜ. 28: ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಅಲ್ಲಿನ ಸಿಬ್ಬಂದಿ ಮಾಜಿ ಸೈನಿಕ ಶ್ಯಾಮರಾಜ್ (Commando Shyamraj) ಅವರಿಗೆ ಅವಮಾನ ಮಾಡಿದ ಪ್ರಕರಣ ಸುಖಾಂತ್ಯ ಕಂಡಿದೆ. ಟೋಲ್ ವಿನಾಯಿತಿಗೆ ಕೇಂದ್ರ ಸರ್ಕಾರದ ಅಧಿಕೃತ ಆದೇಶ ಪತ್ರವಿದ್ದರೂ ಅದನ್ನು ಪರಿಗಣಿಸದೆ ಟೋಲ್ ಸಿಬಂದಿ ಅಗೌರವ ತೋರಿದ್ದ ಘಟನೆ ಭಾನುವಾರ (ಜನವರಿ 25) ನಡೆದಿತ್ತು (Udupi News). ಇದು ಹೊರ ಬಂದು ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ ಟೋಲ್ ಸಿಬ್ಬಂದಿ ಕ್ಷಮೆಯಾಚಿಸಿದ್ದರು. ಇದೀಗ ಶ್ಯಾಮರಾಜ ಅವರನ್ನು ಕ್ಷಮಿಸಿರುವುದಾಗಿ ತಿಳಿಸಿದ್ದಾರೆ. ಆ ಮೂಲಕ ವಿವಾದ ಬಗೆಹರಿದಿದೆ.
ಘಟನೆ ಬಳಿಕ ಮಾತನಾಡಿದ ಶ್ಯಾಮರಾಜ್, “ಟೋಲ್ ಸಿಬ್ಬಂದಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ಮೊನ್ನೆ ನನಗೆ ಅವಮಾನ ಮತ್ತು ಬೇಸರವಾಗಿದ್ದು ನಿಜ. ಬಳಿಕ ಅವರಿಗೆ ತಪ್ಪಿನ ಅರಿವಾಗಿ ಕ್ಷಮೆ ಕೇಳಿರುವುದರಿಂದ ನಾನು ಕ್ಷಮಿಸಿದ್ದೇನೆ. ನಾನು ಅವರನ್ನು ಕ್ಷಮಿಸದೇ ಇದ್ದರೆ ಮತ್ತಾರು ಕ್ಷಮಿಸುತ್ತಾರೆ? ಟೋಲ್ ಸಿಬ್ಬಂದಿ ನನ್ನ ಸಹೋದರರಂತೆ. ನಾವೆಲ್ಲರೂ ಸೇರಿ ಅವರನ್ನು ಕ್ಷಮಿಸೋಣ” ಎಂದು ಮನವಿ ಮಾಡಿದ್ದಾರೆ. “ನನ್ನ ಪರವಾಗಿ ಧ್ವನಿ ಎತ್ತಿದ ಎಲ್ಲರಿಗೂ ಧನ್ಯವಾದಗಳು. ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಟೋಲ್ ಸಿಬ್ಬಂದಿ ಭರವಸೆ ನೀಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಕಾಸರಗೋಡು ಮೂಲದ ನಿವೃತ್ತ ಪ್ಯಾರಾ ಕಮಾಂಡೋ ಶ್ಯಾಮರಾಜ್ ಅವರಿಗೆ ಅವಮಾನವಾದ ಘಟನೆ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಮಾಜಿ ಸೈನಿಕ ಶ್ಯಾಮರಾಜ ಅವರಿಗೆ ಟೋಲ್ ವಿನಾಯಿತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಸಿಬ್ಬಂದಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದರು.
ದೇಶ ಕಾಯುವವರಿಗೆ ಅವಮಾನ! ವ್ಹೀಲ್ ಚೇರ್‌ನಲ್ಲಿರುವ ಮಾಜಿ ಯೋಧನಿಗೆ ಟೋಲ್ ಸಿಬ್ಬಂದಿಯಿಂದ ಕಿರುಕುಳ
ಘಟನೆ ವಿವರ
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಯುದ್ಧದಲ್ಲಿ ಭಾಗವಹಿಸಿ ಅಂಗ ವೈಕಲ್ಯಕ್ಕೊಳಗಾಗಿರುವ ಶ್ಯಾಮರಾಜ್ ಅವರಿಗೆ ಯುದ್ಧ ಸಂತ್ರಸ್ತರ ನೆಲೆಯಲ್ಲಿ ಭಾರತದ ಎಲ್ಲ ಟೋಲ್‌ಗಳಲ್ಲಿ ಶುಲ್ಕ ವಿನಾಯಿತಿ ಸೌಲಭ್ಯವಿದೆ. ಅವರ ಪತ್ನಿ ಕೂಡ ಸೇನೆಯಲ್ಲಿ ನರ್ಸಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಭಾನುವಾರ ಕಾಸರಗೋಡಿನಿಂದ ಕಾರವಾರ ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ಯಾಮರಾಜ ಸಾಸ್ತಾನ ಟೋಲ್‌ನಲ್ಲಿ ತಮ್ಮ ಮಾಜಿ ಸೈನಿಕ ಹಾಗೂ ಯುದ್ಧ ಸಂತ್ರಸ್ತರ ಗುರುತು ಚೀಟಿಯನ್ನು ತೋರಿಸಿ ವಿನಾಯಿತಿ ಕೋರಿದ್ದರು. ಆಗ ಸಿಬಂದಿ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಲ್ಲದೆ ತುಂಬ ಹೊತ್ತು ಟೋಲ್ ಗೇಟ್‌ನಲ್ಲೇ ಅವರನ್ನು ತಡೆದು ನಿಲ್ಲಿಸಿದ್ದರು.
ಇದಾದ ಬಳಿಕ ಶ್ಯಾಮರಾಜ್ ಕಾರಿನಿಂದ ಇಳಿದು ವ್ಹೀಲ್‌ಚೇರ್‌ನಲ್ಲಿ ತಮಗಾದ ಅನುಭವವನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ʼʼದೇಶದ ಬಹುತೇಕ ಟೋಲ್‌ನಲ್ಲಿ ನಾನು ಸಂಚರಿಸಿದ್ದೇನೆ. ಎಲ್ಲ ಕಡೆ ವಿನಾಯಿತಿ ನೀಡಿದ್ದಾರೆ. ಆದರೆ ಸಾಸ್ತಾನದಲ್ಲಿ ಆಗಿರುವ ಘಟನೆ ಗಣರಾಜ್ಯೋತ್ಸವದ ಮುನ್ನಾ ದಿನ ಮಾಡಿದ ಅವಮಾನʼʼ ಎಂದು ಅಸಮಾಧಾನ ಹೊರಹಾಕಿದ್ದರು. ಸಾರ್ವಜನಿಕರಿಂದ ಆಕ್ರೋಶ ತೀವ್ರವಾಗುತ್ತಿದ್ದಂತೆ ಕರ್ತವ್ಯದಲ್ಲಿದ್ದ ಟೋಲ್ ಸಿಬ್ಬಂದಿ ಅಚಾತುರ್ಯದಿಂದ ಹೀಗಾಗಿದೆ ಎಂದು ಹೇಳಿ ಕ್ಷಮೆಯಾಚಿಸಿದ್ದರು.