ಬೆಂಗಳೂರು, ಜು. 18: ಅದು 2001ರ ಫೆಬ್ರವರಿ 21. ಪ್ರತಿವರ್ಷದಂತೆ ಅಂದೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ (Chennamma Deve Gowda) ಮತ್ತು ಮಗ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ, ಶಿವರಾತ್ರಿ ಪೂಜೆ ಸಲ್ಲಿಸಲು ಹುಟ್ಟೂರಾದ ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲೂಕಿನ ಹರದನ ಹಳ್ಳಿಯ ದೇವಸ್ಥಾನಕ್ಕೆ ಆಗಮಿಸಿದ್ದರು. ಆಗ ಅಲ್ಲಿಗೆ ಬಂದ ದೇವೇಗೌಡ ಅವರ ತಮ್ಮನ ಮಗ ಲೋಕೇಶ್ ಇಬ್ಬರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ. ಶೇಕಡಾ 30ರಷ್ಟು ಸುಟ್ಟ ಗಾಯಗಳೊಂದಿಗೆ ಚೆನ್ನಮ್ಮ ಮತ್ತು ಶೇಕಡಾ ಶೇಕಡಾ 25ರಷ್ಟು ಸುಟ್ಟ ಗಾಯಗಳಿಂದ ಒದ್ದಾಡುತ್ತಿದ್ದ ಭವಾನಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಸಕಾಲಕ್ಕೆ ಚಿಕಿತ್ಸೆ ಲಭಿಸಿದ್ದರಿಂದ ಬಳಿಕ ಇಬ್ಬರೂ ಚೇತರಿಸಿಕೊಂಡರು. ಈ ಘಟನೆ ನಡೆದು ಸುಮಾರು 25 ವರ್ಷ ಕಳೆದಿದೆ. ಎಚ್.ಡಿ. ದೇವೇಗೌಡ ಅವರ ಬೆನ್ನುಲುಬಾಗಿ ನಿಂತಿದ್ದ ಚೆನ್ನಮ್ಮ ಇದೀಗ ನಿಧನ ಹೊಂದಿದ್ದಾರೆ.
85 ವರ್ಷದ ಚೆನ್ನಮ್ಮ ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ (ಜುಲೈ 18) ಸಂಜೆ ಇಹಲೋಕ ತ್ಯಜಿಸಿದರು. 4 ದಿನಗಳಿಂದ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಇದರೊಂದಿಗೆಎಚ್.ಡಿ. ದೇವೇಗೌಡ ಅವರ ಶಕ್ತಿಯಾಗಿ, ಬೆನ್ನುಲಾಗಿ ಶ್ರಮಿಸಿದ್ದ ದಿಟ್ಟ ಹೆಣ್ಣು ಮಗಳೊಬ್ಬಳ ಹೋರಾಟದ ಬದುಕು ಅಂತ್ಯವಾಗಿದೆ.
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ
ಆ್ಯಸಿಡ್ ದಾಳಿ
ಬಹಿರಂಗವಾಗಿ ರಾಜಕೀಯಕ್ಕೆ ಧುಮುಕದ ಚೆನ್ನಮ್ಮ ಅವರ ಮೇಲೆ ಆ್ಯಸಿಡ್ ದಾಳಿ ನಡೆದಿದ್ದೇಕೆ? ನಡೆಸಿದ್ದು ಯಾರು? ಅವರ ಮೇಲೆ ಯಾರಿಗೆ ಅಂತಹ ದ್ವೇಷವೇನಿತ್ತು? ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. 2001ರ ಫೆಬ್ರವರಿ 21ರಂದು ಹೊಳೆನರಸೀಪುರ ತಾಲೂಕಿನ ಈಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ಬರುವಾಗ ದೇವೇಗೌಡರ ಪತ್ನಿ ಚನ್ನಮ್ಮ ಹಾಗೂ ಸೊಸೆ ಭವಾನಿ ರೇವಣ್ಣ ಅವರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಕೌಟುಂಬಿಕ, ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ದೇವೇಗೌಡ ಅವರ ತಮ್ಮನ ಮಗ ಲೋಕೇಶ್ ಈ ಕೃತ್ಯ ಎಸಗಿದ್ದ. ಆ್ಯಸಿಡ್ ಎರಚುತ್ತಿರುವಾಗ ಆರೋಪಿ ಲೋಕೇಶ್‌ನ್ನು ಸ್ಥಳದಲ್ಲಿಯೇ ಪೊಲೀಸರು ಬಂಧಿಸಿದ್ದರು. ಜ್ಞಾನೇಶ್ ಮತ್ತು ಶ್ರೀನಿವಾಸ್ ಎಂಬವರನ್ನೂ ಬಂಧಿಸಲಾಗಿತ್ತು. ಚೆನ್ನಮ್ಮ ಮತ್ತು ಭವಾನಿ ಅವರ ಜತೆಗಿದ್ದ ಎಸ್‌ಐ ಪಾಟೀಲ್ , ಒಬ್ಬ ಎಸ್.ಪಿ. ಜಿ. ಸಿಬ್ಬಂದಿ ಮತ್ತು ಇಬ್ಬರು ಪೇದೆಗಳಿಗೂ ಗಾಯಗಳಾಗಿದ್ದವು. ಈ ಘಟನೆ ದೇವೇಗೌಡರ ಜೀವನದಲ್ಲಿ ಭಾರಿ ಪರಿಣಾಮ ಬೀರಿತ್ತು.
ಬಳಿಕ ಆ್ಯಸಿಡ್ ಎರಚಿದ ಪ್ರಕರಣದಲ್ಲಿ ಲೋಕೇಶ್ ಅಪರಾಧಿ ಎಂದು ಸಾಬೀತಾಗಿ ನ್ಯಾಯಾಲಯ ಆತನಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಮಾನವೀಯತೆಯ ಆಧಾರದ ಮೇಲೆ ದೇವೇಗೌಡರೇ ಆತನನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದರು. "ನನ್ನ ತಮ್ಮನಿಗೆ ಕ್ಯಾನ್ಸರ್ ಇತ್ತು. ಆತ ಇನ್ನು ಕೆಲವೇ ವರ್ಷ ಬದುಕುತ್ತಾನೆ ಎಂಬುದು ಗೊತ್ತಿತ್ತು. ಲೋಕೇಶ್ ಇನ್ನೂ ನಾಲ್ಕುವರೆ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿತ್ತು. ಆದರೆ ತಮ್ಮನ ಆರೋಗ್ಯ ಸ್ಥಿತಿ ಕಂಡು ಮನನೊಂದು ಲೋಕೇಶ್‌ನನ್ನು ಬಿಡುಗಡೆ ಮಾಡುವಂತೆ ತಿಳಿಸಿದ್ದೆʼʼ ಎಂದು ಹಿಂದೆ ದೇವೇಗೌಡ ತಿಳಿಸಿದ್ದರು.
ಪತಿಗೆ ಬೆಂಬಲ ಸೂಚಿಸಿದ್ದ ಚೆನ್ನಮ್ಮ
ತಮ್ಮ ಮೇಲೆ ಆ್ಯಸಿಡ್ ದಾಳಿ ಮಾಡಿದ ಅಪರಾಧಿಯನ್ನು ಪತಿ ಬಿಡುಗಡೆ ಮಾಡಿಸಿದರೂ ಚೆನ್ನಮ್ಮ ಅವರು ಯಾವುದೇ ಬೇಸರ ಮಾಡಿಕೊಳ್ಳಲಿಲ್ಲ ಎನ್ನುವುದು ವಿಶೇಷ. ಘಟನೆಯಲ್ಲಿ ಚೆನ್ನಮ್ಮ ಅವರಿಗೆ ಮುಖ ಸೇರಿ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದವು. ಅವರು ಸುಮಾರು ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಸಿಡ್ ದಾಳಿಯ ನಂತರ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನಮ್ಮ ಅವರಿಗೆ ಎರಡು ತಿಂಗಳು ಪ್ರಜ್ಞೆಯೇ ಇರಲಿಲ್ಲ. ಆ ಸಮಯದಲ್ಲಿ ದೇವೇಗೌಡರು ತುಂಬಾ ಬೇಜಾರು ಮಾಡಿಕೊಂಡು ಅಳುತ್ತಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.