ಬೆಳಗಾವಿ, ಮಾ. 31: ಬೇಸಿಗೆ ರಜೆ (Summer holidays) ಆರಂಭವಾದ ಹಿನ್ನೆಲೆಯಲ್ಲಿ ಕೆರೆ ಕುಂಟೆಗಳತ್ತ ಈಜಲು ತೆರಳುತ್ತಿರುವ ಮಕ್ಕಳ ಬಗ್ಗೆ ಹೆತ್ತವರು ಕಣ್ಣಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ರಾಜ್ಯದ ನಾನಾ ಕಡೆ ನಡೆದ ಪ್ರತ್ಯೇಕ ಘಟನೆಗಳಲ್ಲಿ, ನೀರಿನ ಆಕರಗಳಲ್ಲಿ ಈಜು ಇತ್ಯಾದಿಗೆ ತೆರಳಿದ ಐವರು (drowned) ನೀರುಪಾಲಾಗಿದ್ದಾರೆ.
ಹುಕ್ಕೇರಿ ತಾಲೂಕಿನ ಹಳೆಗುಡಗನಟ್ಟಿ ಗ್ರಾಮದ ಬಳಿಯ ಹಿಡಕಲ್ ಡ್ಯಾಮ್ನ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ಕೃಷ್ಣಾ ಖಾನಾಪುರಿ(14) ಮತ್ತು ಪ್ರಜ್ವಲ್ ಗೋಕಾರ್(13) ಮೃತ ಬಾಲಕರು. ಹಿಡಕಲ್ ಜಲಾಶಯ ಹಿನ್ನೀರಿನಲ್ಲಿ ಬಾಲಕರು ಈಜಲು ತೆರಳಿದ್ದರು. ಈ ವೇಳೆ ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರ ಶವಗಳನ್ನ ಸ್ಥಳೀಯರು ಮತ್ತು ಪೊಲೀಸರು ಹೊರತೆಗೆದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.
ಯುವಕ ಕೆರೆಯಲ್ಲಿ ಮುಳುಗಿ ದುರ್ಮರಣ
ಎತ್ತಿನ ಮೈತೊಳೆಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ದುರ್ಮರಣ ಹೊಂದಿರುವ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ. ಮುತ್ತಪ್ಪ ಮುರ್ಲಾಪುರ(20) ಮೃತ ಯುವಕ. ಗದಗ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸಂಬಂಧಿಕರ ಮನೆಗೆ ಬಂದಿದ್ದ ಮುಳುಗುಂದ ಗ್ರಾಮದ ಮುತ್ತಪ್ಪ ಮುರ್ಲಾಪುರ ಈ ವೇಳೆ ಎತ್ತಿನ ಮೈ ತೊಳೆಯಲು ಕೆರೆಗೆ ಹೋದಾಗ ದುರ್ಘಟನೆ ಸಂಭವಿಸಿದೆ. ಆಯ ತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ.
ಕೃಷಿಹೊಂಡಕ್ಕೆ ಬಿದ್ದು ಬಾಲಕಿ ಸಾವು
ಆಟವಾಡುವ ವೇಳೆ ಆಯತಪ್ಪಿ ಕೃಷಿಹೊಂಡಕ್ಕೆ ಬಿದ್ದು ಬಾಲಕಿ ಸಾವನ್ನಪ್ಪಿರುವಂತಹ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿಯಲ್ಲಿ ನಡೆದಿದೆ. ಕೀರ್ತನಾ(10) ಮೃತ ಬಾಲಕಿ. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಜಲು ಹೋಗಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಿಯೂರು ಗ್ರಾಮದಲ್ಲಿ ಸ್ನೇಹಿತರ ಜತೆ ಈಜಲು ಹೋಗಿದ್ದ SSLC ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕುಶಾಲ್(16) ಮೃತ ವಿದ್ಯಾರ್ಥಿ. ಸದ್ಯ ಅಗ್ನಿಶಾಮಕದಳ ಸಿಬ್ಬಂದಿಯಿಂದ ಮೃತದೇಹಕ್ಕೆ ಶೋಧ ಕಾರ್ಯ ನಡೆದಿದೆ. ನಿನ್ನೆ ಶಾಲೆಯ ವಿಶೇಷ ತರಗತಿ ಮುಗಿಸಿಕೊಂಡು ಮನೆಗೆ ತೆರಳಿದ್ದ ವಿದ್ಯಾರ್ಥಿ ಕುಶಾಲ್, ಬಳಿಕ ಸ್ನೇಹಿತರ ಜೊತೆಗೆ ಕೆರೆಗೆ ತೆರಳಿದ್ದು, ಕೆರೆಯ ಆಳ ಪ್ರದೇಶದಲ್ಲಿ ಮುಳುಗಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಸ್ನೇಹಿತರು ಹಾಗೂ ಕುರಿಗಾಹಿಗಳು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಕುಶಾಲ್ ದೇಹ ನಾಪತ್ತೆಯಾಗಿದೆ.