ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೃಹತ್‌ ಗಾಳಿ ವಿದ್ಯುತ್ ಉತ್ಪಾದನಾ ಯಂತ್ರಗಳ ಸಾಗಾಟಕ್ಕೆ ಗಿಡ-ಮರಗಳ ಮಾರಣ ಹೋಮ; ಪರಿಸರ ಪ್ರೇಮಿಗಳ ಆಕ್ರೋಶ

Gadag News: ಗಾಳಿ ವಿದ್ಯುತ್ ಉತ್ಪಾದನಾ ಯಂತ್ರಗಳ ಸಾಗಾಟಕ್ಕಾಗಿ ಗದಗ-ಲಕ್ಷ್ಮೇಶ್ವರ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿದ್ದ ಗಿಡಮರಗಳ ರೆಂಬೆ-ಕೊಂಬೆಗಳನ್ನು ಕಡಿದು ಹಾಕಲಾಗಿದೆ. ಹುಣಸೆ ಮರಗಳ ಫಸಲು ನೀಡುವ ಕೊಂಬೆಗಳಿಗೂ ಕೊಡಲಿ ಹಾಕಲಾಗಿದ್ದು, ಕೆಲವು ಕಡೆ ಮರಗಳನ್ನೇ ತೆರವುಗೊಳಿಸಲಾಗಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.

ಗದಗದಲ್ಲಿ ಮರಗಳ ಮಾರಣ ಹೋಮ

ಗದಗ, ನ. 28: ತಾಲೂಕಿನ ಮುಳಗುಂದ ವ್ಯಾಪ್ತಿಯಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಯಂತ್ರಗಳ ಸಾಗಿಸಲು ಗದಗ-ಲಕ್ಷ್ಮೇಶ್ವರ ಮುಖ್ಯ ರಸ್ತೆಯ ಇಕ್ಕೆಲುಗಳಲ್ಲಿ ಗಿಡ-ಮರಗಳನ್ನು ಅಮಾನುಷವಾಗಿ ಕಡಿದು ಹಾಕಲಾಗುತ್ತಿದ್ದು, ಪರಿಸರ ನಾಶದ ಭೀತಿ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ಸುತ್ತಮುತ್ತಲಿನ ಪವನ ವಿದ್ಯುತ್ ಕಂಪನಿಯ ಗಾಳಿ ವಿದ್ಯುತ್ ಯಂತ್ರಗಳ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಬೃಹತ್ ಯಂತ್ರಗಳ ಸಾಗಾಟಕ್ಕಾಗಿ ಗದಗ-ಲಕ್ಷ್ಮೇಶ್ವರ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿದ್ದ ಗಿಡಮರಗಳ ರೆಂಬೆ-ಕೊಂಬೆಗಳನ್ನು ಕಡಿದು ಹಾಕಲಾಗಿದೆ. ಹುಣಸೆ ಮರಗಳ ಫಸಲು ನೀಡುವ ಕೊಂಬೆಗಳಿಗೂ ಕೊಡಲಿ ಹಾಕಲಾಗಿದ್ದು, ಕೆಲವು ಕಡೆ ಮರಗಳನ್ನೇ ತೆರವುಗೊಳಿಸಲಾಗಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.

ನೂರಾರು ವರ್ಷಗಳಿಂದ ರಸ್ತೆಯ ಎರಡು ಬದಿಯಲ್ಲಿ ಸಮೃದ್ದವಾಗಿ ಬೆಳೆದು ನಿಂತಿರುವ ಹುಣಸೆ, ಬೇವು, ಆಲದ ಮರಗಳು ರಸ್ತೆಯ ಅಂದ-ಚೆಂದಕ್ಕೆ ಕಾರಣವಾಗಿದ್ದವು. ಮಳೆಗಾಲದಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸಿ, ಬೇಸಗೆಯಲ್ಲಿ ತಂಪು ನೀಡುತ್ತಿದ್ದವು. ಬಿರು ಬಿಸಿಲಿನ ತಾಪದಲ್ಲಿ ಈ ರಸ್ತೆ ಮೇಲೆ ಹೋಗುತ್ತಿದ್ದರೆ ಸಾಲು ಮರಗಳ ರಸ್ತೆಗೆ ಬಾಗಿ ನೆರಳು ನೀಡಿ ವಾಹನ ಸವಾರರಿಗೆ ಆಹ್ಲಾದಕರ ವಾತಾವರಣ ಅನುಭವ ನೀಡುತ್ತಿದ್ದವು. ಆದರೆ ಅಂತಹ ಮರಗಳ ರೆಂಬೆ-ಕೊಂಬೆಗಳನ್ನು ಕಡಿದು ಹಾಕಿದ್ದು, ರಸ್ತೆಯ ಸೌಂದರ್ಯವನ್ನು ಹಾಳು ಕೆಡವಿದಂತಾಗಿದೆ. ಜತೆಗೆ ಕೆಲವು ಭಾಗದಲ್ಲಿ ರಸ್ತೆ ಇಕ್ಕೆಲುಗಳಲ್ಲಿ ಸಣ್ಣ ಸಣ್ಣ ಗಿಡಗಳನ್ನು ವಾಹನ ಸಂಚಾರಕ್ಕಾಗಿ ಮಣ್ಣು ಹಾಕಿ ಮುಚ್ಚಲಾಗಿದೆ.

Trees

ವಿದ್ಯುತ್ ಉತ್ಪಾದನಾ ಕಾರ್ಯದ ಹೆಸರಿನಲ್ಲಿ ಹಸಿರು ಪರಿಸರವೂ ನಾಶವಾಗುತ್ತಿದೆ. ಸಾರ್ವಜನಿಕ ಸುರಕ್ಷತೆಗೂ ಆದ್ಯತೆ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮರಗಳ ತೆರವು ಹಾಗೂ ರಸ್ತೆ ನಿರ್ಮಾಣದ ಕುರಿತು ಪರಿಶೀಲಿಸಬೇಕು. ಮುಖ್ಯ ರಸ್ತೆಗಳಿಗೆ ಕಚ್ಚಾ ರಸ್ತೆಗಳು ಸೇರುವ ಸ್ಥಳಗಳಲ್ಲಿ ತಕ್ಷಣ ಎಚ್ಚರಿಕೆ ಫಲಕ ಅಳವಡಿಸಿ, ಧೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

image

ಶಿರಹಟ್ಟಿ ವ್ಯಾಪ್ತಿಯಲ್ಲಿ ರಸ್ತೆ ಇಕ್ಕೆಲುಗಳ ಗಿಡ-ಮರಗಳನ್ನ ಅಕ್ರಮವಾಗಿ ತೆರವು ಮಾಡಿರುವುದು ನಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ತಪ್ಪಿತಸ್ಥರ ವಿರುದ್ದ ಎಫ್ಐಆರ್ ದಾಖಲಿಸಿ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನು ಮುಂದೆ ಗಿಡ-ಮರಗಳ ರಕ್ಷಣೆಗೆ ಅರಣ್ಯ ಸಿಬ್ಬಂದಿ ರಾತ್ರಿ ಹೊತ್ತು ಗಸ್ತು ನಿಯೋಜಿಸುತ್ತೇವೆ.

-ರೇಣುಕಮ್ಮ ಎ., ಆರ್.ಎಫ್.ಒ., ಶಿರಹಟ್ಟಿ.
image

ಗದಗ-ಲಕ್ಷ್ಮೇಶ್ವರ ಮುಖ್ಯ ರಸ್ತೆಯ ಇಕ್ಕೆಲುಗಳಲ್ಲಿ ಗಿಡ-ಮರಗಳ ಕಡಿಯುತ್ತಿರುವ ಬಗ್ಗೆ ಈ ಹಿಂದೆ ಸಂಬಂಧಿಸಿದ ಅರಣ್ಯ ಅಧಿಕಾರಿಗಳ ಗಮನಕ್ಕೂ ತಂದು ಮನವಿ ಕೊಡಲಾಗಿತ್ತು ಆದರೆ ಗಿಡಗಳ ಕಡಿದ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದ ಸಾಕಷ್ಟು ಗಿಡ-ಮರಗಳನ್ನ ಕಡಿದು ಹಾಕಲಾಗಿದೆ.

-ಮಹಾಂತೇಶ ಕಣವಿ, ಪರಿಸರ ಪ್ರೇಮಿ, ಮುಳಗುಂದ.