ಗದಗ: ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು (Gadag Drought) ಘೋಷಿಸದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಶಾಸಕ ಎಚ್.ಕೆ. ಪಾಟೀಲ್ (HK Patil) ಅವರು ರಾಜ್ಯ ಸರ್ಕಾರದ ವಿರುದ್ಧವೇ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
ಗದಗ ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದರೂ ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗದಗ ತಾಲೂಕಿನಲ್ಲಿ ಶೇಕಡಾ 49ರಷ್ಟು ಮಳೆ ಕೊರತೆ ಉಂಟಾಗಿದೆ. ಆದರೂ ಸರ್ಕಾರ ಇದನ್ನು ಬರಪೀಡಿತ ಪ್ರದೇಶವೆಂದು ಯಾಕೆ ಘೋಷಿಸಿಲ್ಲ? ಈ ರೀತಿ ಬರ ಪಟ್ಟಿಗೆ ಸೇರಿಸಲು ಯಾರು ಅಡ್ಡಿಯಾಗುತ್ತಿದ್ದಾರೆ? ಪ್ರಶ್ನಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನೇತೃತ್ವದಲ್ಲಿ ಈಗಾಗಲೇ ಸಭೆಗಳನ್ನು ನಡೆಸಿ, ಗದಗ ಜಿಲ್ಲೆಯ ಸ್ಪಷ್ಟ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು. ಅಧಿಕಾರಿಗಳ ವರದಿ ಬಂದ ನಂತರ ಸ್ವತಃ ಮುಖ್ಯಮಂತ್ರಿಗಳೇ ಕದಂಪುರದಿಂದ ಕುರ್ತಕೋಟಿವರೆಗೆ ಬೆಳೆ ಹಾನಿ ವೀಕ್ಷಣೆ ನಡೆಸಿದ್ದರು. ಇಷ್ಟೆಲ್ಲಾ ಪರಿಶೀಲನೆಗಳು ನಡೆದ ಮೇಲೆಯೂ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿರುವುದು ರೈತರಿಗೆ ಎಸಗಿದ ದ್ರೋಹ.
ತಾವು ಕೂಡ ರೈತ ಕುಟುಂಬದಿಂದ ಬಂದವರಾಗಿದ್ದು, ರೈತರ ಸಂಕಷ್ಟ ಹಾಗೂ ಪರಿಸ್ಥಿತಿಯ ಅರಿವು ತಮಗಿದೆ ಎಂದಿರುವ ಅವರು, "ಅನ್ಯಾಯ ಮತ್ತು ಮೋಸವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಕೊನೆಯ ಹಂತದವರೆಗೆ ಶ್ರಮಿಸುತ್ತೇನೆ. ಶಾಸನಸಭೆಯ ಮೂಲಕ ರಾಜ್ಯ ಸರ್ಕಾರಕ್ಕೆ ಅಕ್ಟೋಬರ್ 10ರವರೆಗೆ ಗಡುವು ನೀಡುತ್ತಿದ್ದೇನೆ. ಅಷ್ಟರೊಳಗೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ ಸರ್ಕಾರ ಮೊದಲ ಹಂತದಲ್ಲಿ 101 ತಾಲೂಕು ಹಾಗೂ ಎರಡನೇ ಹಂತದಲ್ಲಿ 23 ತಾಲೂಕುಗಳನ್ನು ಸೇರಿಸಿ ಒಟ್ಟು 124 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಆದರೆ ಉತ್ತರ ಕರ್ನಾಟಕ ಭಾಗದ 73 ತಾಲೂಕುಗಳ ಪೈಕಿ ಗದಗ ಸೇರಿದಂತೆ 27 ತಾಲೂಕುಗಳನ್ನು ಬರ ಪಟ್ಟಿಯಿಂದ ಹೊರಗಿಡಲಾಗಿದೆ. ಕೈಬಿಡಲಾದ ಉತ್ತರ ಕರ್ನಾಟಕದ ಈ ಎಲ್ಲಾ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಎಂದು ಘೋಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.